ಉಮಾಪತಿಗೆ ಎಚ್ಚರಿಕೆ ಕೊಟ್ಟರಾ ದರ್ಶನ್? ನಿರ್ಮಾಪಕರ ಮಾತಿನ ಅರ್ಥವೇನು?
Darshan Thoogudeepa-Umapathy Srinivas Gowda: ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮತ್ತು ದರ್ಶನ್ ತೂಗುದೀಪ ನಡುವೆ ಮೊದಲಿನಿಂದಲೂ ಮನಸ್ಥಾಪ ಇದ್ದೇ ಇದೆ. ಇದೀಗ ದರ್ಶನ್ ಜೈಲಿಂದ ಹೊರಗೆ ಬಂದ ಬಳಿಕ ಸೈಲೆಂಟ್ ಆಗಿದ್ದಾರೆ ಎಂದುಕೊಳ್ಳಲಾಗಿತ್ತು, ಆದರೆ ಇಂದು ಉಮಾಪತಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯಂತೆ ದರ್ಶನ್ ಮತ್ತೆ ತಮ್ಮ ಹಳೆಯ ಚಾಳಿ ಮುಂದುವರೆಸಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಮತ್ತು ನಟ ದರ್ಶನ್ (Darshan Thoogudeepa) ಆತ್ಮೀಯ ಗೆಳೆಯರಾಗಿದ್ದರು, ಒಟ್ಟಿಗೆ ಹಿಟ್ ಸಿನಿಮಾ ಸಹ ಮಾಡಿದರು. ಆದರೆ ಆ ನಂತರ ಉಮಾಪತಿ ವಿರುದ್ಧ ದರ್ಶನ್ ವಂಚನೆ ಆರೋಪ ಮಾಡಿದ್ದರು. ಆದರೆ ಆ ಬಳಿಕ ಉಮಾಪತಿಯದ್ದೇನೂ ತಪ್ಪಿಲ್ಲ ಎಂಬುದು ಸಾಬೀತಾಯ್ತು. ಆದರೆ ಆ ಬಳಿಕ ಉಮಾಪತಿ ಮತ್ತು ದರ್ಶನ್ ನಡುವೆ ಸಂಬಂಧ ಹಳಸಿತು. ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಒಂದು ಹಂತದಲ್ಲಂತೂ ಇಬ್ಬರೂ ಸಹ ಬೈಕ್ ರ್ಯಾಲಿ ಮೂಲಕ ಬಲಪ್ರದರ್ಶನಕ್ಕೂ ಮುಂದಾಗಿದ್ದರು ಆದರೆ ಪೊಲೀಸರು ಮಧ್ಯ ಪ್ರವೇಶಿಸಿದರು. ಇದೀಗ ಉಮಾಪತಿ ಗೌಡ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು, ದರ್ಶನ್, ಉಮಾಪತಿಗೆ ಎಚ್ಚರಿಕೆ ನೀಡಿದರಾ ಎಂಬ ಅನುಮಾನ ಹುಟ್ಟಿಸಿವೆ.
ಒಕ್ಕಲಿಗರ ಸಂಘದ ಸದಸ್ಯರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಲಗಡಿಕೊಪ್ಪ ಗ್ರಾಮ ಕರೆ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಉಮಾಪತಿ ಶ್ರೀನಿವಾಸ್ ಗೌಡ, ‘ಜೈಲಿಗೆ ಹೋಗಿ ಬಂದೋರು, ಇನ್ನೊಬ್ಬರಿಗೆ ತೊಂದರೆ ಕೊಡೋರು, ಎಚ್ಚರಿಕೆ ಕೊಡೋವಂತೋರು, ನಶಿಸಿ ಹೋಗ್ತಾರೆ’ ಎಂದಿದ್ದಾರೆ. ಮಾತು ಮುಂದುವರೆಸಿ, ‘ನಾನು ಯಾರಿಗೂ ಭಯ ಪಡುವ ವ್ಯಕ್ತಿಯಲ್ಲ’ ಎಂದಿದ್ದಾರೆ. ಉಮಾಪತಿಯವರ ಈ ಮಾತುಗಳು ದರ್ಶನ್ ಅವರನ್ನು ಉದ್ದೇಶಿಸಿಯೇ ಹೇಳಿದ್ದು ಎಂದು ಅರ್ಥೈಸಲಾಗುತ್ತಿದೆ.
‘ನಾನಿವತ್ತು ಈ ವೇದಿಕೇಲಿ ನಿಂತಿದಿನಿ ಅಂದರೆ ಅನೇಕ ಕಷ್ಟಗಳನ್ನ ಎದುರಿಸಿದ್ದೀನಿ, ಅನೇಕ ತಂಟೆ ತಕರಾರುಗಳನ್ನು ಎದುರಿಸಿದ್ದೀನಿ, ಸುಮಾರು ಜನ ಕೇಳುತ್ತಲೇ ಇರುತ್ತಾರೆ, ನೀನು ದೊಡ್ಡವರನ್ನು ಎದುರು ಹಾಕ್ಕೊಂಡು ಏನಪ್ಪಾ ಮಾಡ್ತಿಯಾ ಅಂತ, ಅದಕ್ಕೆ ನಾನು ಹೇಳೋದು, ನಾನು ಎದುರು ಹಾಕ್ಕೊಳಲ್ಲ, ನನ್ನವರು ಎದುರು ಹಾಕ್ಕೊಡ್ತಾರೆ ಅಂತ. ನಾವು ಮಾಡೋ ಕೆಲ್ಸ ಒಳ್ಳೇದಿದ್ರೆ ನಾವು ಯಾರಿಗೂ ಭಯ ಪಡಬೇಕಿಲ್ಲ. ಒಳ್ಳೇ ಕೆಲಸ ಮಾಡೋರಿಗೆ ನಾವು ಭಯ ಬೀಳಬೇಕು ಅಷ್ಟೇ, ಯಾವುದೇ ಕಾರಣಕ್ಕೂ ನಾನು ಯಾವುದಕ್ಕೂ ಭಯ ಬೀಳಲ್ಲ, ನನ್ನ ಭಯ ಬಿಳಿಸೋ ಶಕ್ತಿ ಯಾರಿಗೂ ಇಲ್ಲ’ ಎಂದಿದ್ದಾರೆ.
ಇದನ್ನೂ ಓದಿ:‘ವಾಮನ’ ಸಿನಿಮಾನಲ್ಲಿ ದರ್ಶನ್ಗೆ ಇಷ್ಟವಾದ ಅಂಶಗಳೇನು?
‘ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದೀನಿ, ಸಾಯೋವರೆಗೂ ಇನ್ನೊಬ್ಬರಿಗೆ ಮಾದರಿಯಾಗಿ ಇರ್ತೀನಿ, ಎಚ್ಚರಿಕೆಯಾಗಿ ಇರೋ ಬದುಕು ಬದುಕಲ್ಲ, ಬದುಕಿನಲ್ಲಿ 2 ರೀತಿಯ ಜನ ಇರ್ತಾರೆ, ಇನ್ನೊಬ್ಬರಿಗೆ ಮಾದರಿಯಾಗಿ ಇರೋರು ಒಂದು ವರ್ಗ, ಇನ್ನೊಂದು ವರ್ಗದೋರು ಎಚ್ಚರಿಕೆ ಕೊಡೋವಂತೋರು, ಜೈಲಿಗೆ ಹೋಗಿ ಬಂದೋರು, ಇನ್ನೊಬ್ಬರಿಗೆ ತೊಂದರೆ ಕೊಟ್ಟು ನಶಿಸಿ ಹೋಗೋರು, ಎಚ್ಚರಿಕೆ ಕೊಡೋವಂತೋರು, ನಿಮ್ಮ ಮಕ್ಕಳನ್ನ ಯಾವ ರೀತಿ ಬೆಳೆಸಬೇಕು ಅನ್ನೋದನ್ನ ನೀವು ನಿರ್ಧಾರ ಮಾಡಿ’ ಎಂದಿದ್ದಾರೆ ಉಮಾಪತಿ. ಆ ಮೂಲಕ ಹೆಸರು ಹೇಳದ ನಟ ದರ್ಶನ್ಗೆ ಟಾಂಗ್ ಕೊಟ್ಟಿದ್ದಾರೆ. ‘ನಮಗೆ ಬಂದಿರೋ ತೊಂದರೆಗೆ ನಾವು ಯಾವತ್ತೋ ಸೂಸೈಡ್ ಮಾಡ್ಕೋಬೇಕಿತ್ತು ನಾವು ಯಾವುದಕ್ಕೂ ಭಯ ಪಡ್ಲಿಲ್ಲ’ ಎಂದಿದ್ದಾರೆ ಉಮಾಪತಿ.
ನಟ ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಉಮಾಪತಿ ಶ್ರೀನಿವಾಸ್, ಮಾಧ್ಯಮಗಳಲ್ಲಿ ದರ್ಶನ್ ಬಗ್ಗೆ ಸಾಕಷ್ಟು ಮಾತನಾಡಿದ್ದರು. ದರ್ಶನ್ ಅವಗುಣಗಳನ್ನು ಪಟ್ಟಿ ಮಾಡಿ ಹೇಳಿದ್ದರು. ದರ್ಶನ್ ಇಂದ ತಮಗೆ ಆದ ಕೆಟ್ಟ ಅನುಭವಗಳ ಪಟ್ಟಿ ಮಾಡಿದ್ದರು. ಅವರ ಗೆಳೆಯರ ದುಷ್ಕೃತ್ಯಗಳ ಬಗ್ಗೆಯೂ ಮಾತನಾಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ನಟ ದರ್ಶನ್ ಈಗ ಜೈಲಿಂದ ಹೊರಬಂದ ಬಳಿಕ ಉಮಾಪತಿಗೆ ಬೆದರಿಕೆ ಹಾಕಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ