ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಅಭಿಮಾನಿಗಳ ಹೃದಯದಲ್ಲಿ ಎಂದೆಂದಿಗೂ ಜೀವಂತವಾಗಿ ಇರುತ್ತಾರೆ. ಭೌತಿಕವಾಗಿ ಅವರು ಇಲ್ಲ ಎಂದಮಾತ್ರಕ್ಕೆ ತಮ್ಮ ನೆಚ್ಚಿನ ನಟನಿಗೆ ಕಿಂಚಿತ್ತೂ ಅವಮಾನ ಆಗಲು ಫ್ಯಾನ್ಸ್ ಬಿಡುವುದಿಲ್ಲ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದರೂ ಅಪ್ಪು ಅಭಿಮಾನಿಗಳು ಧ್ವನಿ ಎತ್ತುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಟ್ವಿಟರ್ (Twitter) ಸಂಸ್ಥೆಯಿಂದ ಆಗಿದ್ದ ಪ್ರಮಾದ. ಹೌದು, ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಅವರ ಟ್ವಿಟರ್ (Puneeth Rajkumar Twitter) ಖಾತೆಯಲ್ಲಿ ಇದ್ದ ಬ್ಲೂ ಟಿಕ್ ತೆಗೆದುಹಾಕಲಾಗಿತ್ತು. ಆ ಕ್ರಮದ ವಿರುದ್ಧ ‘ಪವರ್ ಸ್ಟಾರ್’ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಟ್ವಿಟರ್ ಸಂಸ್ಥೆ ಎಚ್ಚೆತ್ತುಕೊಂಡಿದೆ. ಅಭಿಮಾನಿಗಳ ಭಾವನೆಗೆ ಗೌರವ ಕೊಟ್ಟು, ಅಪ್ಪು ಟ್ವಿಟರ್ ಖಾತೆಗೆ ಬ್ಲೂ ಟಿಕ್ ಮರಳಿ ನೀಡಲಾಗಿದೆ.
ಜನಪ್ರಿಯ ವ್ಯಕ್ತಿ ಮತ್ತು ಸಂಸ್ಥೆಗಳ ಟ್ವಿಟರ್ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗುತ್ತದೆ. ನಿರ್ದಿಷ್ಟ ಖಾತೆ ಅಧಿಕೃತವಾಗಿದೆ ಎಂಬುದನ್ನು ಈ ಬ್ಲೂ ಟಿಕ್ ಸೂಚಿಸುತ್ತದೆ. ನಕಲಿ ಮತ್ತು ಅಸಲಿ ಖಾತೆಗಳ ನಡುವೆ ವ್ಯತ್ಯಾಸ ತಿಳಿಯಲು ಕೂಡ ಈ ಚಿಹ್ನೆ ಸಹಕಾರಿ ಆಗುತ್ತದೆ. ಬಹುತೇಕ ಎಲ್ಲ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳಿಗೆ ಬ್ಲೂ ಟಿಕ್ ನೀಡಲಾಗಿರುತ್ತದೆ. ಆದರೆ ದೀರ್ಘ ಕಾಲದವರೆಗೆ ಆ ಖಾತೆಯಲ್ಲಿ ಯಾವುದೇ ಚಟುವಟಿಕೆಗಳು ಇಲ್ಲದಿದ್ದರೆ ಬ್ಲೂ ಟಿಕ್ ತೆಗೆದುಹಾಕಲಾಗುತ್ತದೆ.
ಪುನೀತ್ ರಾಜ್ಕುಮಾರ್ ಅವರು ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರುವ ಟ್ವಿಟರ್ ಬಳಸುತ್ತಿದ್ದರು. ಅವರ ನಿಧನರಾದ ನಂತರ ಆ ಖಾತೆಯಲ್ಲಿ ಯಾವುದೇ ಚಟುವಟಿಕೆ ಇರಲಿಲ್ಲ. ಆದ್ದರಿಂದ ಬ್ಲೂ ಟಿಕ್ ತೆಗೆಯಲಾಗಿತ್ತು. ಇದನ್ನು ಖಂಡಿಸಿ ಅಭಿಮಾನಿಗಳು ಟ್ವಿಟರ್ ಸಂಸ್ಥೆ ವಿರುದ್ಧ ಗರಂ ಆಗಿದ್ದರು. ಪರಿಣಾಮವಾಗಿ, ಈಗ ಅಪ್ಪು ಅವರ ಖಾತೆಗೆ ಮರಳಿ ಬ್ಲೂ ಟಿಕ್ ನೀಡಲಾಗಿದೆ. ಇದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಟ್ವೀಟ್ ಮಾಡಿದ್ದಾರೆ.
Thank you ❤️@verified @Twitter @TwitterIndia for the Verification @PuneethRajkumar Appu Anna is alive in People Heart & this is one of the example? Thank you Powerfull Fans of The Powerfull Man??? love u Puneethians??? This is a Good note to start the week ?? pic.twitter.com/OdMCPBGiKE
— Santhosh Ananddram (@SanthoshAnand15) July 18, 2022
ಪುನೀತ್ ರಾಜ್ಕುಮಾರ್ ನಿಧನದ ನಂತರ ‘ಪಿಆರ್ಕೆ ಪ್ರೊಡಕ್ಷನ್ಸ್’ ಕುರಿತ ಎಲ್ಲ ಅಪ್ಡೇಟ್ಗಳನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರ ಸೋಶಿಯಲ್ ಮೀಡಿಯಾ ಖಾತೆ ಮೂಲಕ ನೀಡಲಾಗುತ್ತಿದೆ. ಅಪ್ಪು ಅವರ ಕನಸಿನ ಪ್ರಾಜೆಕ್ಟ್ ಆಗಿರುವ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 28ರಂದು ಚಿತ್ರಮಂದಿರಗಳಲ್ಲೇ ಈ ಡಾಕ್ಯುಮೆಂಟರಿ ರಿಲೀಸ್ ಆಗಲಿದೆ. ಅದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.