ಈ ಕಾರ್ಯಕ್ರಮಕ್ಕಾಗಿ ಇಡೀ ದಕ್ಷಿಣ ಭಾರತ ಚಿತ್ರರಂಗ ಒಂದೆಡೆ ಸೇರಿದೆ. ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ವಿಶಾಲ್ ಮಾತನಾಡಿದ್ದರು. ‘ನನ್ನ ಸ್ನೇಹಿತ ಪುನೀತ್ ಒಳ್ಳೆಯ ನಟ, ವ್ಯಕ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್ಗೆ ಪ್ರಾಮಿಸ್ ಮಾಡುತ್ತಿದ್ದೇನೆ. ನಾನು ಹೇಳಿದ ಮಾತನ್ನು ನಡೆಸಿಕೊಡುತ್ತೇನೆ. ಬದುಕಿದ್ದಾಗ ನೀವು ಮಾಡಿದ ಸಮಾಜಸೇವೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ನೀವು ಮೃತಪಟ್ಟ ನಂತರ ನಿಮ್ಮ ಕಾರ್ಯಗಳ ಬಗ್ಗೆ ಇಡೀ ದೇಶಕ್ಕೆ ತಿಳಿಯಿತು. ನೀವು ಮಾಡುತ್ತಿದ್ದ ಕಾರ್ಯವನ್ನು ನಾನು ಮುಂದುವರಿಸುತ್ತೇನೆ’ ಎಂದು ವಿಶಾಲ್ ಹೇಳಿದರು.
‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗಿ ಆಗಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದ ಎಲ್ಲರೂ ಹಾಜರಿದ್ದು, ಅಪ್ಪುಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಕೇವಲ ಸೆಲೆಬ್ರಿಟಿಗಳು ಮತ್ತು ಗಣ್ಯರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿದೆ. ಅಭಿಮಾನಿಗಳಿಗೆ ಅವಕಾಶ ನೀಡಲಾಗಿಲ್ಲ.
‘ಪುನೀತ್ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಸಣ್ಣ ವಯಸ್ಸಿನಲ್ಲೇ ಆತ ಅದ್ಭುತವಾಗಿ ನಟಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.
ಇದನ್ನೂ ಓದಿ:
‘ಆರು ಕೋಟಿ ಜನರ ಪರವಾಗಿ ಪುನೀತ್ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ
ಬಸ್ ನಿಲ್ದಾಣದಲ್ಲಿ ಪುನೀತ್ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್