ಪುಟ್ಟಣ್ಣ ಕಣಗಾಲ್ ಅವರ ಪುತ್ರಿ ರಾಜೇಶ್ವರಿ ಟಿವಿ9 ಜೊತೆ ಮಾತನಾಡಿದ್ದಾರೆ. ‘ನಮ್ಮ ತಂದೆ ಒಳ್ಳೆಯ ಮನುಷ್ಯ, ಒಳ್ಳೆಯ ನಿರ್ದೇಶಕ. ಸೃಜನಶೀಲ ವ್ಯಕ್ತಿ. ನಮ್ಮದು ತೆಲುಗು ಮಾತೃಭಾಷೆ. ಹಾಗಿದ್ದರೂ ಕೂಡ ಅವರಿಗೆ ಕನ್ನಡ ಎಂದರೆ ತುಂಬಾ ಅಭಿಮಾನ. ಬೇರೆ ಭಾಷೆಯಲ್ಲಿ ಹಲವು ಅವಕಾಶ ಇದ್ದರೂ ಕೂಡ ಅವರು ಕನ್ನಡ ಚಿತ್ರರಂಗವನ್ನು ಮುಂದೆ ತರಬೇಕು ಅಂತ ಕೆಲಸ ಮಾಡಿದರು. ಇರುವಷ್ಟು ದಿನ ಒಳ್ಳೊಳ್ಳೆಯ ಸಿನಿಮಾ ಮಾಡಿದರು. ಅಭಿಮಾನಿಗಳನ್ನು ಗಳಿಸಿದರು. ಅದೇ ನಮಗೆ ದೊಡ್ಡ ಖುಷಿ’ ಎಂದಿದ್ದಾರೆ.
‘ನಾವು ಎಲ್ಲಿಯೇ ಹೋದರೂ ಪುಟ್ಟಣ್ಣ ಕಣಗಾಲ್ ಅವರ ಮಕ್ಕಳು ಎಂದಾಗ ಕೈ ಎತ್ತಿ ಮುಗಿಯುತ್ತಾರೆ. ಅಷ್ಟು ಒಳ್ಳೆಯ ಹೆಸರು ತೆಗೆದುಕೊಂಡಿರುವ ಮನುಷ್ಯ ಅವರು. ನಮ್ಮ ಜೊತೆ ಅವರು ಇಲ್ಲ ಅಂತ ನಾನು ಅಂದುಕೊಳ್ಳುವುದೇ ಇಲ್ಲ. ನಮ್ಮೊಂದಿಗೇ ಅವರು ಇದ್ದಾರೆ. ನಮಗೆ ಆಶೀರ್ವಾದ ಮಾಡುತ್ತಾ ಇರುತ್ತಾರೆ. ಇಂದಿನ ಹೊಸ ನಿರ್ದೇಶಕರು ಕೂಡ ಅವರ ಆಶೀರ್ವಾದ ಪಡೆದುಕೊಂಡು, ಅವರ ರೀತಿಯ ಒಳ್ಳೆಯ ಆಲೋಚನೆ ಇಟ್ಟುಕೊಂಡು, ಒಳ್ಳೊಳ್ಳೆಯ ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಮುಂದುವರಿಸಬೇಕು ಎಂಬುದು ನಮ್ಮ ಆಸೆ’ ಎಂದು ರಾಜೇಶ್ವರಿ ಹೇಳಿದ್ದಾರೆ.
ಇದನ್ನೂ ಓದಿ: ಪುಟ್ಟಣ್ಣ ಕಣಗಾಲ್ ಬಗ್ಗೆ;ಧರಣಿ ಮಂಡಲ ಮಧ್ಯದೊಳಗೆ; ಚಿತ್ರದ ನಟಿ ಐಶಾನಿ ಶೆಟ್ಟಿ ಏನು ಹೇಳಿದ್ರು ನೋಡಿ
‘ನಾವೆಲ್ಲ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಅಪ್ಪ ಹೆಚ್ಚಾಗಿ ಇರುತ್ತಿದ್ದದ್ದು ಕರ್ನಾಟಕದಲ್ಲಿ. ನಮಗೆ ಸಿಗುತ್ತಿದ್ದಿದ್ದು ತುಂಬ ಕಡಿಮೆ. ಆ ಸಮಯದಲ್ಲಿ ಅವರು ಅನೇಕ ವಿಚಾರ ಮಾತಾಡುತ್ತಿದ್ದರು. ಒಳ್ಳೆಯ ಸಿನಿಮಾ ಮಾಡಬೇಕು, ಒಳ್ಳೆಯ ಸಂದೇಶ ನೀಡಬೇಕು ಎನ್ನುತ್ತಿದ್ದರು. ಕರ್ನಾಟಕದ ಸ್ಥಳಗಳು ತುಂಬಾ ಚೆನ್ನಾಗಿವೆ. ಅದನ್ನು ಜನರಿಗೆ ತೋರಿಸಬೇಕು. ಒಳ್ಳೆಯ ಕಲಾವಿದರನ್ನು ಗುರುತಿಸಿಬೇಕು ಅಂತ ನಮಗೆ ಯಾವಾಗಲೂ ಹೇಳುತ್ತಿದ್ದರು’ ಎಂದಿದ್ದಾರೆ ರಾಜೇಶ್ವರಿ.
‘ಮನೆಗೆ ಬಂದಾಗ ಸಿನಿಮಾ ಬಗ್ಗೆ ಜಾಸ್ತಿ ಮಾತಾಡುತ್ತಿರಲಿಲ್ಲ. ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ತಾಯಿ ಎಂದರೆ ತುಂಬ ಇಷ್ಟ. ಊರಿಗೆ ಹೋಗಿ ತಾಯಿಯ ಜೊತೆ ಇರುತ್ತಿದ್ದರು. ಸಮಯ ಇದ್ದಾಗ ಕುಟುಂಬದ ಜೊತೆ ಇರುತ್ತಿದ್ದರು. ಅವರ ಜೊತೆ ಇನ್ನೂ ಹೆಚ್ಚು ವರ್ಷ ಇರುವ ಅದೃಷ್ಟ ನಮಗೆ ಇರಲಿಲ್ಲ. ಅವರ ಎಲ್ಲ ಸಿನಿಮಾಗಳು ನನಗೆ ಇಷ್ಟ. ಮಾನಸ ಸರೋವರ, ರಂಗನಾಯಕಿ ಹೆಚ್ಚು ಇಷ್ಟ. ಎಲ್ಲ ಸಿನಿಮಾದಲ್ಲೂ ಒಂದೊಂದು ಸಂದೇಶ ಇದೆ’ ಎಂದು ರಾಜೇಶ್ವರಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.