ಪುಟ್ಟಣ್ಣ ಕಣಗಾಲ್ ಸಹವಾಸವೇ ಬೇಡೆಂದು ಶೂಟಿಂಗ್ ಬಿಟ್ಟು ಓಡಿಬಂದಿದ್ದ ಜೈ ಜಗದೀಶ್ ಅನ್ನು ತಡೆದಿದ್ದು ಯಾರು?
Weekend With Ramesh: ವೀಕೆಂಡ್ ವಿತ್ ರಮೇಶ್ಗೆ ಆಗಮಿಸಿದ್ದ ಜೈ ಜಗದೀಶ್, ತಮಗೆ ಪುಟ್ಟಣ್ಣ ಕಣಗಾಲ್ ಸಿನಿಮಾ ಅವಕಾಶ ದೊರೆತಿದ್ದು ಹೇಗೆ ಹಾಗೂ ಪುಟ್ಟಣ್ಣನವರ ಸಹವಾಸವೇ ಸಾಕೆಂದು ಶೂಟಿಂಗ್ ಬಿಟ್ಟು ಹೊರಟುನಿಂತಿದ್ದ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.
ಪುಟ್ಟಣ್ಣ ಕಣಗಾಲ್ (Puttanna Kanagal) ಕನ್ನಡ ಕಂಡ ಅಪ್ರತಿಮ ಸಿನಿಮಾ ನಿರ್ದೇಶಕ (Movie Director). ಕನ್ನಡ ಚಿತ್ರರಂಗಕ್ಕೆ ಅವರು ಕೊಟ್ಟಿರುವ ಕೊಡುಗೆಗಳ ಪಟ್ಟಿ ದೊಡ್ಡದಿದೆ. ಚಿರಕಾಲ ನೆನಪುಳಿಯುವ ಸಿನಿಮಾಗಳನ್ನು ನೀಡಿರುವ ಜೊತೆಗೆ ಕನ್ನಡ ಚಿತ್ರರಂಗಕ್ಕೆ ಅವರು ಕೊಟ್ಟ ಅಪ್ರತಿಮ ನಟ ಹಾಗೂ ನಟಿಯರ ಪಟ್ಟಿ ಬಹಳ ದೊಡ್ಡದಾಗಿದೆ. ವಿಷ್ಣುವರ್ಧನ್, ಅಂಬರಿಶ್, ಶ್ರೀನಾಥ್ ಹೀಗೆ ಪಟ್ಟಿ ಉದ್ದ ಸಾಗುತ್ತದೆ. ಪುಟ್ಟಣ್ಣ ಕಣಗಾಲ್ ಪರಿಚಯಿಸಿದ ಅತ್ಯುತ್ತಮ ನಟರ ಪಟ್ಟಿಯಲ್ಲಿ ಜೈ ಜಗದೀಶ್ ಸಹ ಒಬ್ಬರು. ಈ ವಾರ ವೀಕೆಂಡ್ ವಿತ್ ರಮೇಶ್ಗೆ ಬಂದಿದ್ದ ಜೈ ಜಗದೀಶ್ (Jai Jagadish), ಪುಟ್ಟಣ್ಣ ಕಣಗಾಲ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು, ಶೂಟಿಂಗ್ ಸೆಟ್ಟಿಂದ ಓಡಿ ಹೋಗಲು ಯತ್ನಿಸಿದ್ದ ಘಟನೆ ಬಗ್ಗೆ ಮಾತನಾಡಿದ್ದಾರೆ.
ಜೈ ಜಗದೀಶ್ ಕಾಲೇಜು ಓದುವ ಸಂದರ್ಭದಲ್ಲಿ ಒಬ್ಬರು, ಚೆನ್ನಾಗಿ ಬೈಕ್ ಸ್ಟಂಟ್ ಮಾಡುತ್ತೀರಿ, ನೋಡಲು ಸುಂದರವಾಗಿದ್ದೀರಿ ಸಿನಿಮಾಗಳಲ್ಲಿ ಪ್ರಯತ್ನಿಸಿ ಎಂದಿದ್ದಾರೆ. ಅದೆಲ್ಲ ಆಗದ ಮಾತು ಎಂದುಕೊಂಡು ಜಗದೀಶ್ ಸುಮ್ಮನಾಗಿದ್ದಾರೆ. ಆದರೆ ಅದಾದ ಕೆಲವೇ ದಿನಗಳಲ್ಲಿ ಪುಟ್ಟಣ್ಣ ಕಣಗಾಲ್ ಅವರಿಂದಲೇ ಟೆಲಿಗ್ರಾಂ ಬಂದಿದೆ, ಸಿನಿಮಾ ಅವಕಾಶ ಇದೆಯೆಂದು. ಪುಟ್ಟಣ್ಣನವರಿಂದ ಅವಕಾಶ ಬರಲು ನಟಿ ಆರತಿ ಅವರ ಸಹೋದರರು ಕಾರಣ. ಜಗದೀಶ್ ಗೆಳೆಯರು, ಆರತಿ ಅವರ ಸಹೋದರರಿಗೆ ಜಗದೀಶ್ ಬಗ್ಗೆ ಹೇಳಿದ್ದಾರೆ. ಅದನ್ನು ಕೇಳಿ ಪುಟ್ಟಣ್ಣ ಕಣಗಾಲ್ ಜಗದೀಶ್ಗೆ ಬುಲಾವ್ ಕಳಿಸಿದ್ದರಂತೆ.
ಶೂಟಿಂಗ್ಗೆ ಹೋದ ಮೊದಲ ದಿನ ಪುಟ್ಟಣ್ಣನವರು ಹೆಚ್ಚಿಗೇನು ಮಾತನಾಡಿರಲಿಲ್ಲವಂತೆ. ಆದರೆ ಎರಡನೇ ದಿನದಿಂದಲೇ ಪುಟ್ಟಣ್ಣ ತಮ್ಮ ರೌದ್ರಾವತಾರ ಪ್ರಾರಂಭ ಮಾಡಿದರಂತೆ. ಡೈಲಾಗ್ ಸರಿಯಾಗಿ ಹೇಳಲಿಲ್ಲವೆಂದರೆ ಹೊಡೆದೇ ಬಿಡುತ್ತಿದ್ದರಂತೆ. ಎರಡು ಮೂರು ದಿನಕ್ಕೆ ಪುಟ್ಟಣ್ಣನವರ ಸಹವಾಸವೇ ಬೇಡ ಎನಿಸಿಬಿಟ್ಟಿದೆ ಜಗದೀಶ್ಗೆ. ಸಿನಿಮಾ ಸ್ಟಾರ್ ಆಗುವುದೂ ಬೇಡ ಯಾವುದೂ ಬೇಡ, ಊರಿಗೆ ಹೋಗಿಬಿಡೋಣ ಎಂದುಕೊಂಡು ಸಂಜೆ ಶೂಟಿಂಗ್ ಮುಗಿದ ಕೂಡಲೇ ಯಾರಿಗೂ ಕಾಣದಂತೆ ಬಸ್ಸ್ಟಾಂಡ್ಗೆ ಹೋಗಿ ಬಸ್ಗೆ ಕಾಯುತ್ತಿದ್ದರಂತೆ. ಆಗ ಅಲ್ಲಿಗೆ ಬಂದ ಪುಟ್ಟಣ್ಣನವರ ಪತ್ನಿಯ ಸಹೋದರ ಜಗದೀಶ್ ಅವರ ಮನವೊಲಿಸಿ, ಈ ಒಂದು ಸಿನಿಮಾ ಚಿತ್ರೀಕರಣವನ್ನು ಹೇಗಾದರೂ ಮಾಡಿ ಸಹಿಸಿಕೋ ಆ ನಂತರ ನಿನ್ನ ಜೀವನವೇ ಬದಲಾಗುತ್ತದೆ ಎಂದು ಹೇಳಿದರಂತೆ. ಅದನ್ನು ಒಪ್ಪಿ ಜಗದೀಶ್ ಶೂಟಿಂಗ್ಗೆ ಮರಳಿದ್ದಾರೆ. ಜಗದೀಶ್ ಹೆಸರಿನ ಮುಂದೆ ಜೈ ಸೇರಿಸಿದ್ದು ಪುಟ್ಟಣ್ಣನವರೇ.
ಇದನ್ನೂ ಓದಿ:‘10 ವರ್ಷದ ಹಿಂದೆ ಆಗಿದ್ರೆ ಹಾಕ್ಕೊಂಡು ಜಡಿದಿರುತ್ತಿದ್ದೆ, ಆದ್ರೆ ಈಗ ನಾನು ಹಾಗಿಲ್ಲ’: ಜೈ ಜಗದೀಶ್
ಅಂದು ಪುಟ್ಟಣ್ಣನವರಿಂದ ಏಟು ತಿಂದಿದ್ದಕ್ಕೆ ಈಗ 48 ವರ್ಷಗಳಿಂದ ಚಿತ್ರರಂಗದಲ್ಲಿ ಉಳಿಯಲು ಸಾಧ್ಯವಾಯಿತು. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಸಾಧ್ಯವಾಯಿತು ಎಂದಿದ್ದಾರೆ ಜೈ ಜಗದೀಶ್. ”ದೇಹದಲ್ಲಿ ಜೀವ ಇರುವವರೆಗೂ ನಟನೆ ಮಾಡುತ್ತಲೇ ಇರಬೇಕು, ಮೇಕಪ್ ಹಾಕಿಕೊಂಡಿದ್ದಾಗಲೇ ನನ್ನ ಜೀವ ಹೋಗಬೇಕು” ಎಂದಿದ್ದಾರೆ ಜೈ ಜಗದೀಶ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:02 pm, Mon, 29 May 23