ನಟ ದರ್ಶನ್ ಅವರು ಕೊಲೆ ಆರೋಪ ಹೊತ್ತು ಜೈಲು ಸೇರಿದ್ದಾರೆ. ಅವರ ಬಗ್ಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಾತನಾಡಿದ್ದಾರೆ. ದರ್ಶನ್ ಜೊತೆ ‘ಮಂಡ್ಯ’, ‘ಅನಾಥರು’ ಸಿನಿಮಾಗಳಲ್ಲಿ ನಟಿಸಿದ್ದ ರಾಧಿಕಾ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಈ ಕೇಸ್ ಬಗ್ಗೆ ಮಾತನಾಡಿದ್ದಾರೆ. ತಾವು ನೋಡಿದ ದರ್ಶನ್ ಅವರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ರಾಧಿಕಾ ನೆನಪಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ದರ್ಶನ್ ಅವರ ಅವಶ್ಯಕತೆ ತುಂಬ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ಹಲವು ವಿಷಯಗಳನ್ನು ಅವರು ಹಂಚಿಕೊಂಡಿದ್ದಾರೆ.
‘ದರ್ಶನ್ ಅವರ ವಿಷಯ ಮಾತನಾಡುವಾಗ ಮನಸ್ಸಿಗೆ ತುಂಬ ನೋವಾಗುತ್ತದೆ. ನಾನು ‘ಮಂಡ್ಯ’ ಮತ್ತು ‘ಅನಾಥರು’ ಸಿನಿಮಾಗಳ ಶೂಟಿಂಗ್ ಸಮಯದಲ್ಲಿ ಅವರನ್ನು ನೋಡಿದ್ದು. ಸೆಟ್ನಲ್ಲಿ ಎಲ್ಲರ ಬಳಿಯೂ ಅಣ್ಣ.. ಬನ್ನಿ.. ಹೋಗಿ ಎಂದು ಗೌರವ ಕೊಟ್ಟು ಮಾತನಾಡುತ್ತಿದ್ದರು. ಅಷ್ಟು ದೊಡ್ಡ ನಟ ಎಂಬುದನ್ನು ಅವರು ಎಲ್ಲಿಯೂ ತೋರಿಸಿಕೊಳ್ಳುತ್ತಾ ಇರಲಿಲ್ಲ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಇದನ್ನೂ ಓದಿ: ದರ್ಶನ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ; ರೇಣುಕಾ ಸ್ವಾಮಿ ತಂದೆ ಮೊದಲ ರಿಯಾಕ್ಷನ್
‘ಸಡನ್ ಆಗಿ ಈ ಒಂದು ವಿಚಾರ ಕೇಳಿಸಿಕೊಂಡಾಗ ನನಗೆ ನಂಬೋಕೆ ಸಾಧ್ಯವಾಗಲಿಲ್ಲ. ಇದು ನಿಜಾನಾ ಎಂಬ ಪ್ರಶ್ನೆ ಮೂಡಿತು. ಅವರವರ ಜೀವನದಲ್ಲಿ ಏನು ಆಗಿರತ್ತೋ ಅದು ಅವರಿಗೆ ಮಾತ್ರ ಗೊತ್ತಿರಲು ಸಾಧ್ಯ. ಯಾರೋ ಹೇಳಿದ್ದು, ನ್ಯೂಸ್ನಲ್ಲಿ ನೋಡಿದ್ದು ಮಾತ್ರ ನಮಗೆ ಗೊತ್ತಿರಲು ಸಾಧ್ಯ. ಅವರ ಲೈಫ್ನಲ್ಲಿ ಏನಾಗಿರುತ್ತದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಯಾರ ಬಗ್ಗೆಯೂ ನಾವು ಕಮೆಂಟ್ ಮಾಡುವುದು ತಪ್ಪು’ ಎಂದು ರಾಧಿಕಾ ಹೇಳಿದ್ದಾರೆ.
‘ಪ್ರಮಾಣಿಕವಾಗಿ ಒಂದು ಮಾತು ಹೇಳುತ್ತೇನೆ. ನಮ್ಮ ಚಿತ್ರರಂಗಕ್ಕೆ ದರ್ಶನ್ ಅವರು ಬೇಕು. ಅವರಿಗೆ ಒಳ್ಳೆಯದಾಗಲಿ ಅಂತ ನಾನು ಹೇಳುತ್ತೇನೆ. ಜೀವನದಲ್ಲಿ ಕೆಲವು ಘಟನೆಗಳು ನಡೆದಾಗ ಮುಂಚಿತವಾಗಿ ಏನೂ ಗೊತ್ತಾಗುವುದಿಲ್ಲ. ಎಲ್ಲರ ಜೀವನದಲ್ಲಿ ಕೆಟ್ಟ ಘಟನೆಗಳು ನಡೆದಿವೆ. ಅದನ್ನೆಲ್ಲ ಎದುರಿಸಿ ನಾವು ಮುಂದೆ ಹೋಗಬೇಕು ಅಷ್ಟೇ. ದರ್ಶನ್ ಅವರಿಗೂ ನಾನು ಅದನ್ನೇ ಹೇಳುವುದು. ಜೀವನದಲ್ಲಿ ಇರುವ ತೊಂದರೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಂಡು ಆದಷ್ಟು ಬೇಗ ಅವರು ನಮ್ಮ ಚಿತ್ರರಂಗಕ್ಕೆ ಮರಳಿ ಬರಲಿ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.