ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್: ಮತ್ತೊಂದು ಹಿಟ್ ಗ್ಯಾರಂಟಿ

‘ರಕ್ಕಸಪುರದೋಳ್’ ಸಿನಿಮಾಗೆ ರವಿ ಸಾರಂಗ ನಿರ್ದೇಶನ ಮಾಡಿದ್ದು, ರವಿವರ್ಮಾ ಬಂಡವಾಳ ಹೂಡಿದ್ದಾರೆ. ರಾಜ್ ಬಿ. ಶೆಟ್ಟಿ ಅಭಿನಯದ ಈ ಸಿನಿಮಾದಲ್ಲಿ ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಕೂಡ ನಟಿಸಿದ್ದಾರೆ. ಫೆಬ್ರವರಿ 6ರಂದು ‘ರಕ್ಕಸಪುರದೋಳ್’ ಸಿನಿಮಾ ರಿಲೀಸ್ ಆಗಲಿದ್ದು, ಈಗ ಟೀಸರ್ ಗಮನ ಸೆಳೆಯುತ್ತಿದೆ.

ರಾಜ್ ಬಿ. ಶೆಟ್ಟಿ ನಟನೆಯ ‘ರಕ್ಕಸಪುರದೋಳ್’ ಟೀಸರ್: ಮತ್ತೊಂದು ಹಿಟ್ ಗ್ಯಾರಂಟಿ
Raj B Shetty

Updated on: Dec 29, 2025 | 9:39 PM

ನಟ ರಾಜ್ ಬಿ. ಶೆಟ್ಟಿ (Raj B Shetty) ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 2025ರಲ್ಲಿ ಅವರು ‘ಸು ಫ್ರಮ್ ಸೋ’ ಸಿನಿಮಾದಿಂದ ಭರ್ಜರಿ ಗೆಲವು ಕಂಡರು. ಅವರ ನಟನೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ‘45’ ಸಿನಿಮಾದಲ್ಲಿ ಕೂಡ ರಾಜ್ ಬಿ. ಶೆಟ್ಟಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈಗ ಅವರ ಹೊಸ ಸಿನಿಮಾ ‘ರಕ್ಕಸಪುರದೋಳ್’ (Rakkasapuradhol) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜ್ ಬಿ. ಶೆಟ್ಟಿ ಅವರ ಪಾತ್ರದ ಝಲಕ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ಕೌತುಕ ಡಬಲ್ ಆಗಿದೆ.

ನಿರ್ದೇಶಕ ‘ಜೋಗಿ’ ಪ್ರೇಮ್ ಶಿಷ್ಯ ರವಿ ಸಾರಂಗ ಅವರು ‘ರಕ್ಕಸಪುರದೋಳ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಎರಡು ಮುಖಗಳು ಇರುತ್ತವೆ. ಒಂದು ಒಳ್ಳೆಯದು ಮತ್ತು ಇನ್ನೊಂದು ಕೆಟ್ಟದ್ದು. ಆ ಥೀಮ್​​ನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ಒಟ್ಟಾರೆ ಸಿನಿಮಾ ಹೇಗಿರಲಿದೆ ಎಂಬುದರ ಝಜಲ್ ಈ ಟೀಸರ್​ನಲ್ಲಿ ಕಾಣಿಸಿದೆ.

ಹಲವು ಕಾರಣಗಳಿಂದ ನಿರೀಕ್ಷೆ ಮೂಡಿಸಿರುವ ‘ರಕ್ಕಸಪುರದೋಳ್’ ಸಿನಿಮಾ 2026ರ ಫೆಬ್ರವರಿ 6ರಂದು ಬಿಡುಗಡೆ ಆಗಲಿದೆ. ಟೀಸರ್ ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸಿನಿಮಾದಲ್ಲಿ ಮನರಂಜನೆಯ ಸಾಕಷ್ಟು ಅಂಶಗಳು ಇವೆ ಎಂಬ ಭರವಸೆ ಪ್ರೇಕ್ಷಕರಿಗೆ ಮೂಡಿದೆ. ‘ಈ ಸಿನಿಮಾದ ಮೂಲಕ ರಾಜ್ ಬಿ. ಶೆಟ್ಟಿ ಅವರಿಗೆ ಮತ್ತೊಂದು ಹಿಟ್ ಗ್ಯಾರಂಟಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.

‘ರಕ್ಕಸಪುರದೋಳ್’ ಸಿನಿಮಾ ಟೀಸರ್:

‘ರಕ್ಕಸಪುರದೋಳ್’ ಸಿನಿಮಾಗೆ ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ದಟ್ಟ ಕಾನನ, ಮಾಟ ಮಂತ್ರ, ಸರಣಿ ಸಾವು ಮುಂತಾದ ಅಂಶಗಳು ಈ ಟೀಸರ್​ನಲ್ಲಿ ಹೈಲೈಟ್ ಆಗಿವೆ. ರಾಜ್ ಬಿ. ಶೆಟ್ಟಿ ಜೊತೆ ಬಿ. ಸುರೇಶ, ಸ್ವಾದಿಷ್ಟ ಕೃಷ್ಣ, ಅರ್ಚನಾ ಕೊಟ್ಟಿಗೆ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ್ದಕ್ಕೆ ಸ್ಪಷ್ಟನೆ ನೀಡಿದ ರಾಜ್ ಬಿ. ಶೆಟ್ಟಿ

ಕೆ.ಎಂ. ಪ್ರಕಾಶ್ ಅವರ ಸಂಕಲನ, ವಿಲಿಯನ್ ಡೇವಿಡ್ ಅವರ ಛಾಯಾಗ್ರಹಣ ಈ ಸಿನಿಮಾಗಿದೆ. ಮೋಹನ್ ಬಿ. ಕೆರೆ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಟೀಸರ್​ನಲ್ಲಿ ಎಲ್ಲ ತಂತ್ರಜ್ಞರ ಕೆಲಸ ಎದ್ದು ಕಾಣುತ್ತಿದೆ. ಸದ್ಯ ಈ ಟೀಸರ್ ವೈರಲ್ ಆಗುತ್ತಿದೆ. ರಾಜ್ ಬಿ. ಶೆಟ್ಟಿ ಅವರ ವೃತ್ತಿ ಜೀವನದಲ್ಲಿ ಇದು ಒಂದು ಡಿಫರೆಂಟ್ ಸಿನಿಮಾ ಆಗಲಿದೆ ಎಂಬ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.