
ಸೂಪರ್ ಹಿಟ್ ಆಗಿರುವ ‘ಸು ಫ್ರಮ್ ಸೋ’ (Su From So) ಸಿನಿಮಾದ ನಾಗಾಲೋಟ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ (Su From So Collection) ಜಾಸ್ತಿ ಆಗುತ್ತಲೇ ಇದೆ. ಹಾರರ್ ಕಾಮಿಡಿ ಕಹಾನಿ ಇರುವ ಈ ಚಿತ್ರವನ್ನು ಪ್ರೇಕ್ಷಕರು ಸಖತ್ ಇಷ್ಟಪಟ್ಟಿದ್ದಾರೆ. ವಿಶೇಷವಾಗಿ ಫ್ಯಾಮಿಲಿ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಿದ್ದಾರೆ. ಮತ್ತೆ ಮತ್ತೆ ಸಿನಿಮಾ ನೋಡುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ‘ಸು ಫ್ರಮ್ ಸೋ’ ಸಿನಿಮಾಗೆ ಎರಡನೇ ಶನಿವಾರ ಕೂಡ ಉತ್ತಮ ಕಲೆಕ್ಷನ್ ಆಗಿದೆ. ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ಈ ಸಿನಿಮಾ ಕಮಾಲ್ ಮಾಡುತ್ತಿದೆ.
‘ಸು ಫ್ರಮ್ ಸೋ’ ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಅತ್ಯುತ್ತಮವಾಗಿ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ಈ ಸಿನಿಮಾದ ಬಗ್ಗೆ ಮನಸಾರೆ ಹೊಗಳಿ ಮಾತನಾಡುತ್ತಿದ್ದಾರೆ. ಅಚ್ಚರಿ ಏನೆಂದರೆ, ಮೊದಲ ವಾರ ಸಿನಿಮಾ ನೋಡಲು ಎಷ್ಟೋ ಮಂದಿಗೆ ಟಿಕೆಟ್ ಸಿಕ್ಕಿಲ್ಲ! ಅಂಥವರೆಲ್ಲ 2ನೇ ವಾರಕ್ಕಾಗಿ ಕಾದು ಈಗ ಸಿನಿಮಾ ನೋಡುತ್ತಿದ್ದಾರೆ. ಅದರ ಪರಿಣಾಮವಾಗಿ ‘ಸು ಫ್ರಮ್ ಸೋ’ ಸಿನಿಮಾಗೆ ಎರಡನೇ ಶನಿವಾರ ಅಂದರೆ, ಆಗಸ್ಟ್ 2ರಂದು ಭರ್ಜರಿ ಕಲೆಕ್ಷನ್ ಆಗಿದೆ.
ಹೌದು, sacnilk ವರದಿ ಪ್ರಕಾರ ಆಗಸ್ಟ್ 2ರಂದು ‘ಸು ಫ್ರಮ್ ಸೋ’ ಸಿನಿಮಾ ಬರೋಬ್ಬರಿ 5.91 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಅಲ್ಲಿಗೆ 9 ದಿನಕ್ಕೆ ಈ ಚಿತ್ರದ ಒಟ್ಟು ಕಲೆಕ್ಷನ್ 29.81 ಕೋಟಿ ರೂಪಾಯಿ ಆಗಿದೆ. ಮಲಯಾಳಂ ವರ್ಷನ್ ಕಲೆಕ್ಷನ್ ಕೂಡ ಸೇರಿಸಿದರೆ 30.02 ಕೋಟಿ ರೂಪಾಯಿ ಆಗಲಿದೆ. ಅಲ್ಲದೇ, ವಿದೇಶದಲ್ಲಿ ಕೂಡ ಈ ಸಿನಿಮಾ ಅತ್ಯುತ್ತಮವಾಗಿ ಪ್ರದರ್ಶನ ಕಾಣುತ್ತಿದೆ.
ಅಜಯ್ ದೇವಗನ್ ನಟನೆಯ ‘ಸನ್ ಆಫ್ ಸರ್ದಾರ್ 2’, ವಿಜಯ್ ದೇವರಕೊಂಡ ಅಭಿನಯದ ‘ಕಿಂಗ್ಡಮ್’, ಪೃಥ್ವಿ ಅಂಬಾರ್ ನಟಿಸಿರುವ ‘ಕೊತ್ತಲವಾಡಿ’ ಸೇರಿದಂತೆ ಹಲವು ಹೊಸ ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ ಹೊಸ ಸಿನಿಮಾಗಳ ಪೈಪೋಟಿ ನಡುವೆಯೂ ‘ಸು ಫ್ರಮ್ ಸೋ’ ಸಿನಿಮಾದ ಕಲೆಕ್ಷನ್ ಜಾಸ್ತಿ ಆಗುತ್ತಿರುವುದು ವಿಶೇಷವೇ ಸರಿ.
ಇದನ್ನೂ ಓದಿ: ಮಲಯಾಳಂನಲ್ಲೂ ‘ಸು ಫ್ರಮ್ ಸೋ’ ಹವಾ; ಕೊಚ್ಚಿಯಲ್ಲಿ ಹೌಸ್ಫುಲ್ ಶೋ
ಜೆಪಿ ತುಮಿನಾಡು ಅವರು ‘ಸು ಫ್ರಮ್ ಸೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ರಾಜ್ ಬಿ. ಶೆಟ್ಟಿ, ಜೆಪಿ ತುಮಿನಾಡು, ಸಂದ್ಯಾ ಅರಕೆರೆ, ಪ್ರಕಾಶ್ ತುಮಿನಾಡು, ಶನೀಲ್ ಗೌತಮ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್ ಸೇರಿದಂತೆ ಹಲವರು ‘ಸು ಫ್ರಮ್ ಸೋ’ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಶೀಘ್ರದಲ್ಲೇ ಹಿಂದಿ ಮತ್ತು ತೆಲುಗಿನಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.