‘777 ಚಾರ್ಲಿ’ ಸಿನಿಮಾ (777 Charlie Movie) ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ಸರ್ಕಾರದಿಂದ ಸಿನಿಮಾಗೆ ಬಂಪರ್ ಆಫರ್ ಸಿಕ್ಕಿದೆ. ಈ ಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರಿಂದ ರಕ್ಷಿತ್ ಶೆಟ್ಟಿ ತಂಡಕ್ಕೆ ಖುಷಿ ಸಿಕ್ಕಿದೆ. ‘777 ಚಾರ್ಲಿ’ ಸಿನಿಮಾದಲ್ಲಿ ನಾಯಿ ದತ್ತು ಪಡೆಯಬೇಕು ಎನ್ನುವ ಬಗ್ಗೆ ಸಂದೇಶ ಇತ್ತು. ಈ ಕಾರಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್‌ಬ್ರೀಡಿಂಗ್‌ನಿಂದಾಗಿ ಶ್ವಾನಗಳ ಸ್ವಾಸ್ಥ್ಯದ ಮೇಲಾಗುವ ಪರಿಣಾಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಿನಿಮಾದಲ್ಲಿ ಆಗಿತ್ತು. ಪ್ರಾಣಿ ಹಿಂಸೆ ತಡೆಯುವ ಆಶಯ ಚಿತ್ರತಂಡ ಹೊಂದಿತ್ತು. ಜೊತೆಗೆ ಈ ಚಿತ್ರವು ಬೀದಿ ನಾಯಿಗಳನ್ನು ದತ್ತು ಪಡೆಯುವುದರ ಬಗ್ಗೆ ಸಂದೇಶವನ್ನು ಸಾರಿತ್ತು. ಈ ನಿಟ್ಟಿನಲ್ಲಿ ರಕ್ಷಿತ್ ಶೆಟ್ಟಿ ಅವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದು ‘777 ಚಾರ್ಲಿ’ ಸಿನಿಮಾಗೆ ಶೇ.100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಸರ್ಕಾರ ಪುರಸ್ಕರಿಸಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘777 ಚಾರ್ಲಿ’ ಸಿನಿಮಾ ವೀಕ್ಷಿಸಿದ್ದರು. ಸಿನಿಮಾ ನೋಡುವ ಸಂದರ್ಭದಲ್ಲಿ ಅವರು ತುಂಬಾನೇ ಭಾವುಕರಾಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅವರು ಸಿನಿಮಾವನ್ನು ತುಂಬಾನೇ ಇಷ್ಟಪಟ್ಟಿದ್ದರು. ಈ ಬೆನ್ನಲ್ಲೇ ಸರ್ಕಾರದಿಂದ ತೆರಿಗೆ ವಿನಾಯಿತಿ ಸಿಕ್ಕಿದೆ.
‘777 ಚಾರ್ಲಿ’ ಸಿನಿಮಾಗೆ ಬಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಶ್ವಾನ ಹಾಗೂ ಮನುಷ್ಯನ ನಡುವಿನ ಭಾವನಾತ್ಮಕ ಕಥೆಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಬಾಕ್ಸ್ ಆಫೀಸ್ನಲ್ಲೂ ‘777 ಚಾರ್ಲಿ’ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಸಿನಿಮಾ ಮೊದಲ ವಾರಾಂತ್ಯಕ್ಕೆ 20 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಈ ವಾರವೂ ಅನೇಕ ಕಡೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಶೀಘ್ರವೇ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:35 pm, Sat, 18 June 22