Richard Anthony Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ರಿಚರ್ಡ್ ಆಂಟನಿ; ಮತ್ತೊಂದು ದಾಖಲೆ ಬರೆದ ರಕ್ಷಿತ್ ಶೆಟ್ಟಿ

Rakshit Shetty as Richard Anthony: ನಿನ್ನೆ ಮಧ್ಯಾಹ್ನ ರಿಲೀಸ್ ಆಗಿದ್ದ ರಿಚರ್ಡ್​ ಆಂಟನಿ ಟೀಸರ್ ಕೇವಲ 21 ಗಂಟೆಯೊಳಗೆ ಸುಮಾರು 94 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ. ಅಲ್ಲದೆ, ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.

Richard Anthony Teaser: ಯೂಟ್ಯೂಬ್​ನಲ್ಲಿ ಧೂಳೆಬ್ಬಿಸಿದ ರಿಚರ್ಡ್ ಆಂಟನಿ; ಮತ್ತೊಂದು ದಾಖಲೆ ಬರೆದ ರಕ್ಷಿತ್ ಶೆಟ್ಟಿ
ರಿಚರ್ಡ್​ ಆಂಟನಿ

Updated on: Jul 12, 2021 | 11:34 AM

ಇತ್ತೀಚೆಗಷ್ಟೇ ‘777 ಚಾರ್ಲಿ’ ಸಿನಿಮಾ ಟೀಸರ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ರಕ್ಷಿತ್ ಶೆಟ್ಟಿ (Rakshit Shetty) ಸದ್ಯಕ್ಕೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ಅವರ ಮತ್ತೊಂದು ಹೊಸ ಸಿನಿಮಾ ‘ರಿಚರ್ಡ್ ಆಂಟನಿ’ (Richard Anthony) ಸಿನಿಮಾದ ಟೀಸರ್ ಬಿಡುಗಡೆಯಾಗಿತ್ತು. ‘ಉಳಿದವರು ಕಂಡಂತೆ’ (Ulidavaru Kandante) ಸಿನಿಮಾ ಬಳಿಕ ಸಮುದ್ರದ ರಾಜ ರಿಚ್ಚಿಯಾಗಿ ಮತ್ತೆ ತೆರೆ ಮೇಲೆ ಬರುತ್ತಿರುವ ರಕ್ಷಿತ್ ಶೆಟ್ಟಿಯ ಈ ಸಿನಿಮಾ ಬಿಡುಗಡೆಗೂ ಮೊದಲೇ ಹೊಸ ದಾಖಲೆ ಬರೆದಿದೆ.

ನಿನ್ನೆ ಮಧ್ಯಾಹ್ನ ರಿಲೀಸ್ ಆಗಿದ್ದ ರಿಚರ್ಡ್​ ಆಂಟನಿ ಟೀಸರ್ ಕೇವಲ 21 ಗಂಟೆಯೊಳಗೆ ಸುಮಾರು 1 ಕೋಟಿಗೂ ಅಧಿಕ ಜನರಿಂದ ವೀಕ್ಷಿಸಲ್ಪಟ್ಟಿದೆ. ಅಲ್ಲದೆ, ಯೂಟ್ಯೂಬ್​ ಟ್ರೆಂಡಿಂಗ್​ನಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನದಂದು ‘ಸಪ್ತಸಾಗರದಾಚೆಯೆಲ್ಲೋ‘ ಸಿನಿಮಾದ ಪೋಸ್ಟರ್ ರಿಲೀಸ್ ಆಗಿತ್ತು. ಹಾಗೇ, ಭಾರೀ ನಿರೀಕ್ಷೆ ಹುಟ್ಟುಹಾಕಿರುವ 777 ಚಾರ್ಲಿ ಸಿನಿಮಾದ ಟೀಸರ್ ಕೂಡ ಭಾರೀ ಸದ್ದು ಮಾಡಿತ್ತು. ಚಾರ್ಲಿ ಎಂಬ ನಾಯಿಯೊಂದಿಗೆ ಧರ್ಮನಾಗಿ ರಕ್ಷಿತ್ ಶೆಟ್ಟಿ ಪಂಚ ಭಾಷೆಗಳಲ್ಲೂ ಹವಾ ಸೃಷ್ಟಿಸಲು ಸಜ್ಜಾಗಿದ್ದಾರೆ.

‘ರಿಚರ್ಡ್​ ಆಂಟನಿ’ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗಳು ನಡೆಯುತ್ತಿದ್ದು, ರಕ್ಷಿತ್ ಶೆಟ್ಟಿಯ ಹೊಸ ಪ್ರಯತ್ನಕ್ಕೆ ಸಾಕಷ್ಟು ನಟರು ಕೂಡ ಶುಭಾಶಯ ಕೋರಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್ ಯೂಟ್ಯೂಬ್​ನಲ್ಲಿ 10 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. ಈ ಮೂಲಕ ಮತ್ತೆ ರಕ್ಷಿತ್ ಶೆಟ್ಟಿ ಯೂಟ್ಯೂಬ್​ನಲ್ಲಿ ಹವಾ ಹುಟ್ಟುಹಾಕಿದ್ದಾರೆ. ನಿನ್ನೆಯಷ್ಟೇ ರಿಚರ್ಡ್​ ಆಂಟನಿಯ ಮೊದಲ ಟೀಸರ್ ಪೋಸ್ಟ್ ಮಾಡಿದ್ದ ರಕ್ಷಿತ್ ಶೆಟ್ಟಿ, ಮೊದಲು ನಮ್ಮ ಕೆಲಸ ಮಾತಾಡಲಿ, ಉಳಿದವೆಲ್ಲ ಆನಂತರ. ರಿಚರ್ಡ್​ ಆಂಟನಿಗೆ ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ ಎನ್ನುವ ಮೂಲಕ ತಮ್ಮನ್ನು ಟೀಕಿಸುವವರಿಗೆ ತಕ್ಕ ಉತ್ತರ ನೀಡಿದ್ದರು.

2014ರಲ್ಲಿ ತೆರೆಕಂಡ ‘ಉಳಿದವರು ಕಂಡಂತೆ’ ಸಿನಿಮಾ ರಕ್ಷಿತ್ ಶೆಟ್ಟಿ ಸಿನಿಮಾ ಪಯಣಕ್ಕೆ ಬಹಳ ದೊಡ್ಡ ತಿರುವು ನೀಡಿತ್ತು. ರಕ್ಷಿತ್ ಶೆಟ್ಟಿ ಬರೆದು, ನಿರ್ದೇಶಿಸಿ, ನಾಯಕನಾಗಿ ನಟಿಸಿದ್ದ ಈ ಸಿನಿಮಾಗೆ ರಾಜ್ಯ ಚಲನಚಿತ್ರ ಪ್ರಶಸ್ತಿ, ಫಿಲ್ಮ್ ಫೇರ್ ಅವಾರ್ಡ್ ಕೂಡ ಬಂದಿತ್ತು. ಈ ಸಿನಿಮಾದಲ್ಲಿ ಶೆಟ್ರು ‘ರಿಚರ್ಡ್​ ಆಂಟನಿ’ ಅಲಿಯಾಸ್ ರಿಚ್ಚಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅದೇ ಹೆಸರಿನಲ್ಲಿ ‘ಉಳಿದವರು ಕಂಡಂತೆ’ ಸಿನಿಮಾದ ಮತ್ತೊಂದು ಭಾಗವನ್ನು ತೆರೆಮೇಲೆ ತರಲು ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ. ಈ ಸಿನಿಮಾದ ಉಳಿದವರು ಕಂಡಂತೆ ಸಿನಿಮಾದ ಮೊದಲ ಕತೆ ಮತ್ತು ನಂತರ ಕತೆಯನ್ನು ಒಳಗೊಂಡಿರುತ್ತದಂತೆ.

‘ರಿಚರ್ಡ್​ ಆಂಟನಿ’ ಸಿನಿಮಾಗೂ ರಕ್ಷಿತ್ ಶೆಟ್ಟಿಯೇ ಕತೆ ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೆ, ಈ ಸಿನಿಮಾದಲ್ಲೂ ರಿಚ್ಚಿಯಾಗಿ ರಕ್ಷಿತ್ ಶೆಟ್ಟಿಯೇ ಕಾಣಿಸಿಕೊಳ್ಳಲಿದ್ದಾರೆ. ರಕ್ಷಿತ್ ಶೆಟ್ಟಿಯ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ ನಟರೇ ಈ ಸಿನಿಮಾದಲ್ಲೂ ಇರಲಿದ್ದಾರೆ. ಪ್ರಮೋದ್ ಶೆಟ್ಟಿ, ರಿಷಬ್ ಶೆಟ್ಟಿ, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್ ರಿಚ್ಚಿಗೆ ಜೊತೆಯಾಗಲಿದ್ದಾರೆ.

ಮಾಸ್ಟರ್​ಪೀಸ್, ಕೆಜಿಎಫ್ ಚಾಪ್ಟರ್ 1, ರಾಜಕುಮಾರ, ಯುವರತ್ನ, ಮುಂತಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್​ ಇದೀಗ ರಕ್ಷಿತ್ ಶೆಟ್ಟಿ ಅವರ ರಿಚರ್ಡ್​ ಆಂಟನಿ ಸಿನಿಮಾವನ್ನು ನಿರ್ಮಿಸಲಿದೆ. ಹೊಂಬಾಳೆ ಫಿಲ್ಮ್ಸ್​ನಡಿ ಭಗೀರ, ಸಲಾರ್, ದ್ವಿತ್ವ, ಕೆಜಿಎಫ್​ ಚಾಪ್ಟರ್ 2 ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ.

ಇದನ್ನೂ ಓದಿ: Hombale Films and Rakshith Shetty: ಅಭಿಮಾನಿಗಳ ಕಾಯುವಿಕೆಗೆ ಕೊನೆ ಹಾಡೇ ಬಿಟ್ರು ರಕ್ಷಿತ್​ ಶೆಟ್ಟಿ, ಡೈರೆಕ್ಟರ್ ಕ್ಯಾಪ್​ ಹಾಕ್ಕೊಳ್ಳೋ ಟೈಮ್ ಬಂದೇ ಬಿಡ್ತು!

Published On - 11:32 am, Mon, 12 July 21