‘ಸಕುಟುಂಬ ಸಮೇತ’ ಮದುವೆ ಕಹಾನಿಯ ಡೀಲ್​ ಖುದುರಿದ ಬಳಿಕ ಬದಲಾಯ್ತು ರಕ್ಷಿತ್​ ಶೆಟ್ಟಿ ತೀರ್ಮಾನ

‘ಸಕುಟುಂಬ ಸಮೇತ’ ಮದುವೆ ಕಹಾನಿಯ ಡೀಲ್​ ಖುದುರಿದ ಬಳಿಕ ಬದಲಾಯ್ತು ರಕ್ಷಿತ್​ ಶೆಟ್ಟಿ ತೀರ್ಮಾನ
ಸಿರಿ, ರಕ್ಷಿತ್​ ಶೆಟ್ಟಿ

Rakshit Shetty: ಇನ್ನೇನು ಮದುವೆಗೆ ಒಂದು ವಾರ ಇರುವಾಗ ಈ ಮದುವೆ ಬೇಡ ಅಂತ ಹುಡುಗಿ ಹೇಳ್ತಾಳೆ. ಇಂಥ ಕಥಾಹಂದರ ಇರುವ ‘ಸಕುಟುಂಬ ಸಮೇತ’ ಚಿತ್ರಕ್ಕೆ ರಕ್ಷಿತ್​ ಶೆಟ್ಟಿ ಬಂಡವಾಳ ಹೂಡಿದ್ದಾರೆ.

TV9kannada Web Team

| Edited By: Madan Kumar

May 14, 2022 | 7:30 AM

‘ಸಿಂಪಲ್​ ಸ್ಟಾರ್​’ ರಕ್ಷಿತ್​ ಶೆಟ್ಟಿ (Rakshit Shetty) ಅವರು ಕೇವಲ ನಟ ಮಾತ್ರವಲ್ಲ. ನಿರ್ದೇಶಕನಾಗಿಯೂ ಅವರು ಫೇಮಸ್​. ಅದೇ ರೀತಿ ನಿರ್ಮಾಪಕನಾಗಿ ಕೂಡ ಅವರು ಕನ್ನಡ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮದೇ ‘ಪರಂವಾ ಸ್ಟುಡಿಯೋಸ್​’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ ಅನೇಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮುಖ್ಯ ವಿಚಾರ ಏನೆಂದರೆ ಅವರು ಅನೇಕ ಹೊಸ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ತಮ್ಮ ಈ ಪ್ರೊಡಕ್ಷನ್​ ಹೌಸ್​ ಮೂಲಕ ಅವಕಾಶ ನೀಡುತ್ತಿದ್ದಾರೆ. ಹಲವು ಸಿನಿಮಾ, ವೆಬ್​ ಸಿರೀಸ್​ಗಳು ‘ಪರಂವಾ ಸ್ಟುಡಿಯೋಸ್​’ (Paramvah Studios) ಬ್ಯಾನರ್​ ಮೂಲಕ ನಿರ್ಮಾಣ ಆಗುತ್ತಿವೆ. ರಕ್ಷಿತ್​ ಶೆಟ್ಟಿ ಬಂಡವಾಳ ಹೂಡಿರುವ ‘ಸಕುಟುಂಬ ಸಮೇತ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರು ನಟಿಸಿದ್ದಾರೆ. ಸದ್ದಿಲ್ಲದೇ ಚಿತ್ರೀಕರಣ ಮಾಡಲಾಗಿದೆ. ಈ ಮೊದಲು ನೇರವಾಗಿ ಒಟಿಟಿ ಪ್ಲಾಟ್​ಫಾರ್ಮ್​ ಮೂಲಕ ಬಿಡುಗಡೆ ಮಾಡಬೇಕು ಎಂದು ರಕ್ಷಿತ್​ ಶೆಟ್ಟಿ ತೀರ್ಮಾನಿಸಿದ್ದರು. ಆದರೆ ಒಟಿಟಿ ಡೀಲ್​ ಖುದುರಿದ ಬಳಿಕ ಅವರ ಮನಸ್ಸು ಬದಲಾಗಿದೆ. ಮೊದಲು ಥಿಯೇಟರ್​ನಲ್ಲಿ ಬಿಡುಗಡೆ ಮಾಡಿ ನಂತರ ಒಟಿಟಿಯಲ್ಲಿ ಪ್ರಸಾರ ಮಾಡಲು ಅವರು ತೀರ್ಮಾನಿಸಿದ್ದಾರೆ. ಈ ಕುರಿತು ‘ಸಕುಟುಂಬ ಸಮೇತ’ (Sakutumba Sametha Movie) ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ಹಂಚಿಕೊಂಡರು.

ಹೊಸ ತಲೆಮಾರಿನ ಹುಡುಗ-ಹುಡುಗಿಯರು ಮದುವೆ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಕುರಿತಾಗಿ ಈ ಸಿನಿಮಾ ಮೂಡಿಬಂದಿದೆ ಎಂಬುದು ಟ್ರೇಲರ್​ ಮೂಲಕ ತಿಳಿದುಬಂದಿದೆ. ಟ್ರೇಲರ್​ ನೋಡಿದರೆ ಈ ಸಿನಿಮಾ ತುಂಬ ಸರಳವಾಗಿ ಮತ್ತು ಸಹಜವಾಗಿ ಮೂಡಿಬಂದಿದೆ ಎಂಬುದು ಗೊತ್ತಾಗುತ್ತದೆ. ಹುಡುಗ-ಹುಡುಗಿಯ ಮದುವೆ ಫಿಕ್ಸ್​ ಆಗಿರುತ್ತದೆ. ಇನ್ನೇನು ಮದುವೆಗೆ ಒಂದು ವಾರ ಇರುವಾಗ ಈ ಮದುವೆ ಬೇಡ ಅಂತ ಹುಡುಗಿ ಹೇಳ್ತಾಳೆ. ಮುಂದೇನಾಗುತ್ತದೆ ಎಂಬುದು ‘ಸಕುಟುಂಬ ಸಮೇತ’ ಚಿತ್ರದ ಕಥೆ. ಈ ಸಿನಿಮಾದಲ್ಲಿ ಸಿರಿ ರವಿಕುಮಾರ್​ ಮತ್ತು ಭರತ್​ ಜಿ.ಬಿ. ಅವರು ಜೋಡಿಯಾಗಿ ನಟಿಸಿದ್ದಾರೆ. ಖ್ಯಾತ ನಟ ಅಚ್ಯುತ್​ ಕುಮಾರ್​ ಅವರು ಕೂಡ ಅಭಿನಯಿಸಿದ್ದಾರೆ. ರಂಗಭೂಮಿ ಹಿನ್ನೆಲೆಯ ಕಲಾವಿದರಿಗೂ ಈ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ರಕ್ಷಿತ್​ ಶೆಟ್ಟಿ ಬ್ಯಾನರ್​ನಲ್ಲಿ ಕೆಲಸ ಮಾಡಿದಕ್ಕೆ ಅವರೆಲ್ಲರೂ ಸಂತಸ ಹಂಚಿಕೊಂಡಿದ್ದಾರೆ. ರಕ್ಷಿತ್​ ಶೆಟ್ಟಿ ನಟನೆ/ನಿರ್ದೇಶನದ ‘ಉಳಿದವರು ಕಂಡಂತೆ’ ಸಿನಿಮಾದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ರಾಹುಲ್​ ಪಿಕೆ ಅವರು ‘ಸಕುಟುಂಬ ಸಮೇತ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

‘ನಾನು ಈ ಸಿನಿಮಾ ನೋಡಿದ್ದೇನೆ. ತುಂಬ ಚೆನ್ನಾಗಿ ಮೂಡಿಬಂದಿದೆ. ಬಹಳ ಖುಷಿ ಆಯಿತು. ನಾವು ಯಾರೆಗೆಲ್ಲ ಸಿನಿಮಾ ತೋರಿಸಿದ್ದೇವೋ ಅವರೆಲ್ಲರೂ ಇಷ್ಟಪಟ್ಟಿದ್ದಾರೆ. ಈ ಚಿತ್ರದ ಟಿವಿ ಮತ್ತು ಒಟಿಟಿ ಪ್ರಸಾರ ಹಕ್ಕುಗಳನ್ನು ನಾವು ಕಲರ್ಸ್​ ಕನ್ನಡ ಮತ್ತು ವೂಟ್​ಗೆ ಸೇಲ್​ ಮಾಡಿದ್ದೇವೆ. ಹಾಕಿದ ಬಂಡವಾಳಕ್ಕಿಂತ ಡಬಲ್​ ಆದಾಯ ಬಂದಿದೆ. ಚಿತ್ರಮಂದಿರದಲ್ಲಿ ರಿಲೀಸ್​ ಮಾಡುವ ಐಡಿಯಾ ನಮಗೆ ಇರಲಿಲ್ಲ. ಸಿನಿಮಾ ನೋಡಿದ ಬಳಿಕ ಕಲರ್ಸ್​ ವಾಹಿನಿಯರು ಒಂದು ಸಲಹೆ ನೀಡಿದರು. ಥಿಯೇಟರ್​ನಲ್ಲಿ ಈ ಸಿನಿಮಾ ರಿಲೀಸ್​ ಆಗಬೇಕು ಎಂದು ಅವರು ಹೇಳಿದರು. ಚಿತ್ರಮಂದಿರದಲ್ಲಿ ಇಂಥ ಚಿತ್ರಕ್ಕೆ ಖಂಡಿತಾ ಜನರು ಬರುತ್ತಾರೆ ಅಂತ ಹೇಳಿದರು. ನಮಗೂ ಹೌದು ಎನಿಸಿತು. ಮಲ್ಟಿಪ್ಲೆಕ್ಸ್​ಗಳಲ್ಲಿ ರಿಲೀಸ್​ ಮಾಡಿದರೆ ಜನರು ಬಂದು ನೋಡಿ ಎಂಜಾಯ್​ ಮಾಡುತ್ತಾರೆ ಎನಿಸಿತು. ಹಾಗಾಗಿ ರಿಲೀಸ್​ ಮಾಡುತ್ತಿದ್ದೇವೆ’ ಎಂದು ರಕ್ಷಿತ್​ ಶೆಟ್ಟಿ ಹೇಳಿದ್ದಾರೆ.

‘ಸಕುಟುಂಬ ಸಮೇತ’ ಚಿತ್ರಕ್ಕೆ ಮಿಧುನ್​ ಮುಕುಂದನ್​ ಸಂಗೀತ ನೀಡಿದ್ದಾರೆ. ಕರಮ್​ ಚಾವ್ಲಾ ಹಾಗೂ ಸಂದೀಪ್​ ಛಾಯಾಗ್ರಹಣ ಮಾಡಿದ್ದಾರೆ. ಭರತ್​ ಎಂ.ಸಿ. ಸಂಕಲನ ಮಾಡಿದ್ದಾರೆ. ಕೃಷ್ಣ ಹೆಬ್ಬಾಳೆ, ರೇಖಾ ಕೂಡ್ಲಿಗಿ, ಜಯಲಕ್ಷ್ಮಿ ಪಾಟೀಲ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada