ಗೀತು ಮೋಹನ್​ದಾಸ್ ‘ಟಾಕ್ಸಿಕ್’ ಚಿತ್ರಿಸಿದ್ದಾರೆ ಅಂತ ನಂಬೋಕೆ ಆಗಲ್ಲ: ಆರ್​ಜಿವಿ ನೇರ ಮಾತು

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ‘ಟಾಕ್ಸಿಕ್’ ಸಿನಿಮಾ ಟೀಸರ್ ನೋಡಿ ಅಚ್ಚರಿಪಟ್ಟಿದ್ದಾರೆ. ಈ ಚಿತ್ರದ ನಿರ್ದೇಶಕಿ ಗೀತು ಮೋಹನ್​ದಾಸ್ ಬಗ್ಗೆ ತಮಗೆ ಇರುವ ಅಭಿಪ್ರಾಯವನ್ನು ಆರ್​ಜಿವಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ ಸಿನಿಮಾದ ಟೀಸರ್ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

ಗೀತು ಮೋಹನ್​ದಾಸ್ ‘ಟಾಕ್ಸಿಕ್’ ಚಿತ್ರಿಸಿದ್ದಾರೆ ಅಂತ ನಂಬೋಕೆ ಆಗಲ್ಲ: ಆರ್​ಜಿವಿ ನೇರ ಮಾತು
Yash, Ram Gopal Varma, Geethu Mohandas

Updated on: Jan 08, 2026 | 7:58 PM

ಟೀಸರ್ ರಿಲೀಸ್ ಆದ ಬಳಿಕ ‘ಟಾಕ್ಸಿಕ್’ (Toxic) ಸಿನಿಮಾದ ಮೇಲಿನ ನಿರೀಕ್ಷೆ ಜಾಸ್ತಿ ಆಗಿದೆ. ಯಶ್ ಅವರು ಈ ಸಿನಿಮಾದಲ್ಲಿ ತುಂಬಾ ರಗಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಶೈಲಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಶ್ವಾದ್ಯಂತ ಇರುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಕೂಡ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್, ಸಂದೀಪ್ ರೆಡ್ಡಿ ವಂಗಾ ಮುಂತಾದವರು ಭೇಷ್ ಎಂದಿದ್ದಾರೆ. ಅದೇ ರೀತಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ‘ಟಾಕ್ಸಿಕ್’ ಸಿನಿಮಾದ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮದೇ ರೀತಿಯಲ್ಲಿ ಅವರು ವಿಶ್ಲೇಷಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟೀಸರ್ ತುಂಬಾ ಬೋಲ್ಡ್ ಆಗಿದೆ. ಆದರೆ ಈ ಸಿನಿಮಾಗೆ ನಿರ್ದೇಶನ ಮಾಡಿರುವುದು ಗೀತು ಮೋಹನ್​ದಾಸ್. ನಿರ್ದೇಶಕಿಯೊಬ್ಬರು ಈ ರೀತಿಯ ಮಾಸ್ ಸಿನಿಮಾ ಮಾಡುತ್ತಾರೆ ಎಂಬುದನ್ನು ರಾಮ್ ಗೋಪಾಲ್ ವರ್ಮಾ ಅವರಿಗೆ ನಂಬಲು ಸಾಧ್ಯವಾಗುತ್ತಿಲ್ಲ. ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಅವರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ನಟ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಸರ್ ನೋಡಿದ ಬಳಿಕ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ಮಹಿಳಾ ಸಬಲೀಕರಣದ ಅಲ್ಟಿಮೇಟ್ ಸಂಕೇತವಾಗಿದ್ದಾರೆ ಎಂಬುದರಲ್ಲಿ ನನಗೆ ಅನುಮಾನವೇ ಇಲ್ಲ. ಈ ಮಹಿಳೆಗೆ ಹೋಲಿಸಿದರೆ ಯಾವ ನಿರ್ದೇಶಕನೂ ಸಾಟಿ ಇಲ್ಲ. ಆಕೆಯೇ ಇದನ್ನು ಚಿತ್ರಿಸಿದ್ದಾರೆ ಎಂದು ಈಗಲೂ ನನಗೆ ನಂಬಲಾಗುತ್ತಿಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಅವರು ಪೋಸ್ಟ್ ಮಾಡಿದ್ದಾರೆ.

‘ಅನಿಮಲ್’ ಸಿನಿಮಾದ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾ ಅವರು ಸೋಶಿಯಲ್ ಮೀಡಿಯಾದಲ್ಲಿ ‘ಟಾಕ್ಸಿಕ್’ ಚಿತ್ರದ ಟೀಸರ್ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್ ಟೀಸರ್ ನನ್ನನ್ನು ತಟ್ಟಿತು. ಸ್ಟೈಲ್, ಆ್ಯಟಿಟ್ಯೂಟ್, ಕೆಯಾಸ್.. ಜನ್ಮದಿನದ ಶುಭಾಶಯಗಳು ಯಶ್’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಹಂಚಿಕೊಳ್ಳುತ್ತಿರುವುದರಿಂದ ಈ ಟೀಸರ್ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕುಟುಂಬ ಸಮೇತ ‘ಟಾಕ್ಸಿಕ್’ ಟೀಸರ್ ನೋಡಿದ ಪ್ರೇಕ್ಷಕರು ಕಂಗಾಲು

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಆಗುತ್ತಿದೆ. ನೂರಾರು ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಇನ್ನುಳಿದ ಭಾಷೆಗಳಿಗೆ ಡಬ್ ಆಗುತ್ತಿದೆ. ಮಾರ್ಚ್ 19ರಂದು ವಿಶ್ವಾದ್ಯಂತ ‘ಟಾಕ್ಸಿಕ್’ ಸಿನಿಮಾ ತೆರೆಕಾಣಲಿದೆ. ಅದೇ ದಿನ ‘ಧುರಂಧರ್ 2’ ಚಿತ್ರ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.