‘ನನಗೂ ಕೆಟ್ಟ ಕಮೆಂಟ್ ಬಂದಿತ್ತು’: ದರ್ಶನ್​ ಕೇಸ್​ ಬಗ್ಗೆ ರಮ್ಯಾ ಖಡಕ್​ ಮಾತುಗಳು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​, ಪವಿತ್ರಾ ಗೌಡ ಮುಂತಾದವರು ತನಿಖೆ ಎದುರಿಸುತ್ತಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ. ಈ ಸಂದರ್ಭದಲ್ಲಿ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಟ್ರೋಲ್​ಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅಲ್ಲದೇ ಪೊಲೀಸರ ಕೆಲಸಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.

‘ನನಗೂ ಕೆಟ್ಟ ಕಮೆಂಟ್ ಬಂದಿತ್ತು’: ದರ್ಶನ್​ ಕೇಸ್​ ಬಗ್ಗೆ ರಮ್ಯಾ ಖಡಕ್​ ಮಾತುಗಳು
ರಮ್ಯಾ, ದರ್ಶನ್​

Updated on: Jun 13, 2024 | 9:48 PM

ನಟ ದರ್ಶನ್​ (Darshan) ವಿರುದ್ಧ ಕೊಲೆ ಆರೋಪ ಎದುರಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್​ ಬಂಧನ ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ದರ್ಶನ್​ ಮಾಡಿದ ಕೃತ್ಯವನ್ನು ಅವರು ಖಂಡಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ರಮ್ಯಾ (Ramya) ಅವರಿಗೂ ಟ್ರೋಲ್​ ಕಾಟ ಎದುರಾಗಿತ್ತು. ಆ ಸಂದರ್ಭದಲ್ಲಿ ತಾವು ನಡೆದುಕೊಂಡ ರೀತಿ ಎಂಥದ್ದು ಎಂಬುದನ್ನು ಅವರು ತಿಳಿಸಿದ್ದಾರೆ.

‘ಸೋಶಿಯಲ್​ ಮೀಡಿಯಾದಲ್ಲಿ ಯಾವುದೇ ವ್ಯಕ್ತಿಯನ್ನು ಬ್ಲಾಕ್​ ಮಾಡುವ ಆಯ್ಕೆ ಇದೆ. ಒಂದು ವೇಳೆ ಟ್ರೋಲ್​ ಮುಂದುವರಿದರೆ ನೀವು ದೂರು ನೀಡಬಹುದು. ನನ್ನನ್ನು ಕೂಡ ಕೆಟ್ಟ ಪದಗಳಿಂದ ಟ್ರೋಲ್​ ಮಾಡಿದ್ದರು. ನನ್ನನ್ನು ಮಾತ್ರವಲ್ಲದೇ ಅನೇಕರನ್ನು ಟ್ರೋಲ್​ ಮಾಡಿದ್ದಾರೆ. ಬೇರೆಯವರ ಹೆಂಡತಿ, ಮಕ್ಕಳನ್ನೂ ಬಿಡದೇ ಟ್ರೋಲ್ ಮಾಡಿದ್ದಾರೆ. ಎಂಥ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ರಮ್ಯಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

‘ಕಾನೂನು ಪಾಲಿಸುವ ಯಾವುದೇ ಪ್ರಜೆಯ ರೀತಿ ನಾನು ಕೂಡ ದೂರು ನೀಡಿದ್ದೇನೆ. ಅಂಥವರಿಗೆ ಪೊಲೀಸರು ಎಚ್ಚರಿಕೆ ನೀಡಿದ ಬಳಿಕ ಪಾಪ ಅಂತ ನಾನು ಕೇಸ್​ ವಾಪಸ್​ ತೆಗೆದುಕೊಂಡಿದ್ದೇನೆ. ಟ್ರೋಲ್​ ಮಾಡಿದ ವ್ಯಕ್ತಿಗಳು ಇನ್ನೂ ಚಿಕ್ಕವರು. ಅವರಿಗೂ ಭವಿಷ್ಯ ಇದೆ. ಯಾವುದೋ ಅನಾಮಧೇಯ ಖಾತೆಗಳ ಮೂಲಕ ಅವರು ಟ್ರೋಲ್​ ಮಾಡುತ್ತ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ ರಮ್ಯಾ.

ಇದನ್ನೂ ಓದಿ: ದರ್ಶನ್​ ಬ್ಯಾನ್​ ವಿಚಾರ: ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್​ ಪ್ರತಿಕ್ರಿಯೆ

‘ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ. ಕಾನೂನನ್ನು ಯಾರೂ ತಮ್ಮ ಕೈಗೆ ತೆಗೆದುಕೊಳ್ಳಬಾರದು. ನೀವು ಹೋಗಿ ಜನರನ್ನು ಹೊಡೆದು ಕೊಲ್ಲುವುದಲ್ಲ. ಒಂದು ಸರಳವಾದ ದೂರು ಸಾಕು. ಈಗ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಅಧಿಕಾರಿಗಳಿಗೆ ನಾನು ಮೆಚ್ಚುಗೆ ಮತ್ತು ಗೌರವ ಸಲ್ಲಿಸುತ್ತೇನೆ. ಅವರದ್ದು ಕೃತಜ್ಞತೆ ಇಲ್ಲದ ಕೆಲಸ. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಒತ್ತಡಕ್ಕೆ ಅವರು ಮಣಿಯುವುದಿಲ್ಲ ಹಾಗೂ ಕಾನೂನಿನ ಮೇಲೆ ಜನರ ಭರವಸೆಯನ್ನು ಉಳಿಸುತ್ತಾರೆ ಅಂತ ನಾನು ನಂಬಿದ್ದೇನೆ’ ಎಂದು ರಮ್ಯಾ ಪೋಸ್ಟ್​ ಮಾಡಿದ್ದಾರೆ. #JusticeforRenukaswamy #Darshan #Yedyurappa #PrajwalRevanna ಎಂಬ ಹ್ಯಾಷ್​ ಟ್ಯಾಗ್​ಗಳನ್ನು ಅವರು ಬಳಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us