
ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು (Darshan Fans) ಟ್ರೋಲ್ ಮಾಡಲು ಆರಂಭಿಸಿದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳಿಸಲಾಗಿದೆ. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ (Ramya Divya Spandana) ಅವರು ನಿರ್ಧರಿಸಿದ್ದಾರೆ. ದರ್ಶನ್ ಫ್ಯಾನ್ಸ್ ವಿರುದ್ಧ ದೂರು ನೀಡಲು ರಮ್ಯಾ ಅವರು ಬೆಂಗಳೂರು ಪೊಲೀಸ್ ಕಮಿಷನರ್ (Bengaluru Police Commissioner) ಕಚೇರಿಗೆ ಆಗಮಿಸಿದ್ದಾರೆ.
‘ರೇಣುಕಾಸ್ವಾಮಿ ಮಾಡಿದ್ದ ಸಂದೇಶಕ್ಕೂ ದರ್ಶನ್ ಅಭಿಮಾನಿಗಳು ಮಾಡುವ ಸಂದೇಶಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಇಂಥ ಸ್ತ್ರೀದ್ವೇಷಿ ಮನಸ್ಥಿತಿಯ ಕಾರಣದಿಂದಲೇ ಸಮಾಜದಲ್ಲಿ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ’ ಎಂದು ರಮ್ಯಾ ಹೇಳಿದ್ದರು. ಹಾಗಾಗಿ ಕೆಟ್ಟ ಕಮೆಂಟ್ ಮಾಡುವವರಿಗೆ ಪಾಠ ಕಲಿಸಲು ಅವರು ಮುಂದಾಗಿದ್ದಾರೆ.
ತಮ್ಮ ವಕೀಲರ ಜೊತೆ ಚರ್ಚಿಸಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಹೆಣ್ಣುಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ನಿಂದಿಸುವವರ ವಿರುದ್ಧ ರಮ್ಯಾ ಅವರು ಕಾನೂನಿನ ಸಮರ ಸಾರಿದ್ದಾರೆ. ಅಶ್ಲೀಲ ಕಮೆಂಟ್ಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮಹಿಳಾ ಆಯೋಗ ಕೂಡ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
‘ಸೆಲೆಬ್ರಿಟಿಯಾದ ನಮಗೆ ಟ್ರೋಲ್ ಇದ್ದೇ ಇರುತ್ತದೆ. ಆದರೆ ಈ ಮಟ್ಟಕ್ಕೆ ನನಗೆ ಯಾವಾಗಲೂ ಅನುಭವ ಆಗಿರಲಿಲ್ಲ. ರೇಣುಕಾಸ್ವಾಮಿ ಸಂದೇಶ ಕಳಿಸಿದ್ದಕ್ಕೂ ದರ್ಶನ್ ಫ್ಯಾನ್ಸ್ ಸಂದೇಶ ಕಳಿಸಿದ್ದಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎನಿಸಿತು. ನನಗೆ ಈ ರೀತಿ ಕಳಿಸಿದ್ದಾರೆ ಎಂದರೆ ಸಾಮಾನ್ಯ ಹೆಣ್ಣು ಮಕ್ಕಳಿಗೆ ಇನ್ನು ಯಾವ ರೀತಿ ಸಂದೇಶ ಕಳಿಸಿರಬಹುದು. ನಮ್ಮ ಸಮಾಜ ಎಷ್ಟು ಕೀಳು ಮಟ್ಟಕ್ಕೆ ಬಂದಿದೆ ಅಂತ ನನಗೆ ಬೇಸರ ಆಯಿತು. ಇದನ್ನು ಸುಮ್ಮನೆ ಬಿಡಬಾರದು ಅಂತ ನನಗೆ ಅನಿಸಿತು. ಹಾಗಾಗಿ ನಾನು ಕಮಿಷನರ್ ಸಾಹೇಬರಿಗೆ ದೂರು ಕೊಟ್ಟಿದ್ದೇನೆ’ ಎಂದು ನಟಿ ರಮ್ಯಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ರಕ್ಷಿತಾ, ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಬಗ್ಗೆ ನಟಿ ರಮ್ಯಾ ನೇರಮಾತು
ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಎಫ್.ಐ.ಆರ್. ದಾಖಲು ಮಾಡಲಾಗಿದೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ ಒಟ್ಟು 43 ಸೋಶಿಯಲ್ ಮೀಡಿಯಾ ಖಾತೆಗಳ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಕೇಂದ್ರ ವಿಭಾಗದ ಸೆನ್(ಸೈಬರ್ ಕ್ರೈಂ)ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:58 pm, Mon, 28 July 25