ನಟ ದರ್ಶನ್ (Darshan) ಮಾಡಿಕೊಂಡ ವಿವಾದ ದೊಡ್ಡದಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಎಂಬ ವ್ಯಕ್ತಿಯನ್ನು ಬೆಂಗಳೂರಿಗೆ ಕರೆತಂದು ಸಾಯಿಸಿದ ಆರೋಪ ದರ್ಶನ್ ಮೇಲಿದೆ. ಅಲ್ಲದೇ ಈ ಕೃತ್ಯದಲ್ಲಿ ಅನೇಕರು ಅರೆಸ್ಟ್ ಮಾಡಲಾಗಿದ್ದು, ವಿಚಾರಣೆ ಕೂಡ ತೀವ್ರವಾಗಿದೆ. ಮಂಗಳವಾರ (ಜೂನ್ 11) ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಈ ಕೇಸ್ನಲ್ಲಿ (Darshan Case) ಭಾಗಿಯಾದವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು (ಜೂನ್ 12) ಲಭ್ಯವಾದ ಮಾಹಿತಿ ಪ್ರಕಾರ ಒಟ್ಟು 17 ಜನರು ಈ ಕೇಸ್ನಲ್ಲಿ ಆರೋಪಿಗಳಾಗಿದ್ದಾರೆ. ಆ ಪೈಕಿ ನಾಲ್ಕು ಜನರು ನಾಪತ್ತೆ ಆಗಿದ್ದಾರೆ!
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದಾನೆ ಎಂಬ ಕಾರಣಕ್ಕಾಗಿ ರೇಣುಕಾ ಸ್ವಾಮಿಯನ್ನು ಅಪಹರಿಸಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಆತನ ಮೇಲೆ ಹಲ್ಲೆ ಮಾಡಲಾಯಿತು. ಕೊಲೆ ನಡೆದ ಬಳಿಕ ರೇಣುಕಾ ಸ್ವಾಮಿಯ ಶವವನ್ನು ರಾಜಕಾಲುವೆಗೆ ಎಸೆಯಲಾಯಿತು. ಒಟ್ಟಾರೆ ಈ ಪ್ರಕರಣದಲ್ಲಿ ಹಲವರು ಕೈ ಜೋಡಿಸಿದ್ದು ಬೆಳಕಿಗೆ ಬಂದಿದೆ. ತನಿಖೆ ಚುರುಕಾದಂತೆಲ್ಲ ಬೇರೆ ಬೇರೆ ಹೆಸರುಗಳು ಹೊರಬರುತ್ತಿವೆ.
ಈ ಕೇಸ್ನಲ್ಲಿ ಹೊಸದಾಗಿ ಜಗದೀಶ್ ಅಲಿಯಾಸ್ ಜಗ್ಗ, ಅನು, ರವಿ, ರಾಜು ಎಂಬ ನಾಲ್ಕು ಜನರ ಹೆಸರಗಳು ಕೇಳಿಬಂದಿವೆ. ಸದ್ಯಕ್ಕೆ ಇವರೆಲ್ಲ ನಾಪತ್ತೆ ಆಗಿದ್ದಾರೆ. ತಲೆ ತಪ್ಪಿಸಿಕೊಂಡಿರುವ ಈ ನಾಲ್ಕು ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಈ ನಾಲ್ವರು ಸಿಕ್ಕ ಬಳಿಕ ಇನ್ನಷ್ಟು ಹೊಸ ಮಾಹಿತಿಗಳು ಹೊರಬರುವುದು ಖಚಿತ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ರೇಣುಕಾ ಸ್ವಾಮಿ ಕುಟುಂಬದವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಠಾಣೆಯಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ದೊನ್ನೆ ಬಿರಿಯಾನಿ ತರಿಸಿದ ಪೊಲೀಸರು
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆಗಿದ್ದಾಳೆ. ದರ್ಶನ್ ಎ2 ಹಾಗೂ ಕೆ.ಪವನ್ ಎ3 ಆಗಿದ್ದಾನೆ. ರಾಘವೇಂದ್ರ ಎ4, ನಂದೀಶ್ ಎ5, ಜಗದೀಶ್ ಅಲಿಯಾಸ್ ಜಗ್ಗ ಎ6, ಅನು ಎ7, ರವಿ ಎ8, ರಾಜು ಎ9, ವಿನಯ್ ಎ10, ನಾಗರಾಜ್ ಎ11, ಲಕ್ಷ್ಮಣ್ ಎ12, ದೀಪಕ್ ಎ13, ಪ್ರದೋಶ್ ಎ14, ಕಾರ್ತಿಕ್ ಎ15, ಕೇಶವ ಮೂರ್ತಿ ಎ16, ನಿಖಿಲ್ ನಾಯಕ್ ಎ17 ಎಂದು ಕೇಸ್ ದಾಖಲಾಗಿದೆ. 13 ಮಂದಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.