ರೇಣುಕಾಸ್ವಾಮಿ ಕೊಲೆಗೆ 699 ರೂ. ಬೆಲೆಯ ವಸ್ತು ಬಳಕೆ; ಡೆಲಿವರಿ ಬಾಯ್​ ಕೂಡ ಮುಖ್ಯ ಸಾಕ್ಷಿ

ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದ ರೇಣುಕಾಸ್ವಾಮಿ ಕೊಲೆ ಕೇಸ್​ನ ವಿವರಗಳು ಒಂದೊಂದಾಗಿಯೇ ಹೊರಬರುತ್ತಿವೆ. ನಟ ದರ್ಶನ್​ ಹಾಗೂ ಸಹಚರರು ನಡೆಸಿದ್ದಾರೆ ಎನ್ನಲಾದ ಕೃತ್ಯದ ಬಗ್ಗೆ ಪೊಲೀಸರು ಈಗಾಗಲೇ ಅನೇಕ ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಹತ್ಯೆಗೆ ಬಳಕೆಯಾದ ಒಂದು ಎಲೆಕ್ಟ್ರಿಕ್​ ಉಪಕರಣವನ್ನು ಡೆಲಿವರಿ ನೀಡಿದ ವ್ಯಕ್ತಿ ಕೂಡ ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದಾರೆ.

ರೇಣುಕಾಸ್ವಾಮಿ ಕೊಲೆಗೆ 699 ರೂ. ಬೆಲೆಯ ವಸ್ತು ಬಳಕೆ; ಡೆಲಿವರಿ ಬಾಯ್​ ಕೂಡ ಮುಖ್ಯ ಸಾಕ್ಷಿ
ರೇಣುಕಾ ಸ್ವಾಮಿ, ದರ್ಶನ್​
Edited By:

Updated on: Aug 01, 2024 | 5:29 PM

ನಟಿ ಪವಿತ್ರಾ ಗೌಡ, ನಟ ದರ್ಶನ್​ ಹಾಗೂ ಅವರ ಗ್ಯಾಂಗ್​ನವರು ಭಾಗಿ ಆಗಿದ್ದಾರೆ ಎನ್ನಲಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ. ಈ ಕೇಸ್​ನಲ್ಲಿ ಈಗಾಗಲೇ ಅನೇಕರ ವಿಚಾರಣೆ ಮಾಡಲಾಗಿದೆ. 17 ಜನರನ್ನು ನ್ಯಾಯಾಂಗ ಬಂಧನದಲ್ಲಿಟ್ಟು ತನಿಖೆ ಮಾಡಲಾಗುತ್ತಿದೆ. ದೇಶಾದ್ಯಂತ ಸುದ್ದಿ ಆಗಿರುವ ಈ ಕೇಸ್​ನಲ್ಲಿ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. 699 ರೂಪಾಯಿ ಬೆಲೆಯ ವಸ್ತುವನ್ನು ಬಳಸಿ ರೇಣುಕಾ ಸ್ವಾಮಿಯನ್ನು ಹತ್ಯೆ ಮಾಡಿರುವುದು ತಿಳಿದು ಬಂದಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾ ಸ್ವಾಮಿ ಹತ್ಯೆ ನಡೆಯಿತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂತು. ಕೊಲೆಗೂ ಮುನ್ನ ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಆರೋಪ ಇದೆ. ಶವದ ಫೋಟೋ ನೋಡಿದರೆ ಕಿಡಿಗೇಡಿಗಳ ಮನಸ್ಥಿತಿ ಎಷ್ಟು ಕ್ರೂರವಾಗಿತ್ತು ಎಂಬುದು ತಿಳಿಯುತ್ತದೆ. ಹಲ್ಲೆ ವೇಳೆ ಪ್ರಜ್ಞೆ ತಪ್ಪಿದ್ದ ರೇಣುಕಾ ಸ್ವಾಮಿಗೆ ಮೆಗ್ಗರ್​ನಿಂದ ಎಲೆಕ್ಟ್ರಿಕ್​ ಶಾಕ್​ ನೀಡಲಾಗಿತ್ತು ಎಂಬ ಮಾಹಿತಿ ಇದೆ.

ಡಿ ಗ್ಯಾಂಗ್​ ಸದಸ್ಯರಿಗೆ ಮೆಗ್ಗರ್​ ಸಿಕ್ಕಿದ್ದು ಎಲ್ಲಿಂದ ಎಂಬುದು ಗೊತ್ತಾಗಿದೆ. ಆನ್​ಲೈನ್​ ಮೂಲಕ ಕಿಡಿಗೇಡಿಗಳು ಈ ಸಾಧನವನ್ನು ತರಿಸಿದ್ದರು. ಕೇವಲ 699 ರೂಪಾಯಿಗೆ ಅಮೇಜಾನ್​ ಶಾಪಿಂಗ್​ನಲ್ಲಿ ಲಭ್ಯವಾಗಿದ್ದ ಈ ವಸ್ತುವನ್ನು ಧನರಾಜ್‌‌ ಎಂಬಾತ ತರಿಸಿಕೊಂಡಿದ್ದ. ಡೆಲಿವರಿ ಪಡೆದ ಬಳಿಕ ಸ್ಕ್ಯಾನ್ ಮಾಡಿ ಹಣ ಪಾವತಿಸಿದ್ದ. ಹಾಗಾಗಿ ಸದ್ಯ ಡೆಲಿವರಿ ಬಾಯ್​ನನ್ನು ಕೂಡ ಪೊಲೀಸರು ಸಾಕ್ಷಿಯಾಗಿ ಪರಿಗಣಿಸಿದ್ದಾರೆ.

ತನಿಖೆ ಮುಂದುವರಿದಂತೆಲ್ಲ ರೇಣುಕಾ ಸ್ವಾಮಿ ಮರ್ಡರ್​ ಕೇಸ್​ನ ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ನ್ಯಾಯಾಂಗ ಬಂಧನದಲ್ಲಿ ಇರುವ ದರ್ಶನ್​ ಹಾಗೂ ಸಹಚರರು ಆಗಸ್ಟ್​ 14ರವರೆಗೂ ಜೈಲಿನಲ್ಲಿ ಕಾಲ ಕಳೆಯಬೇಕಿದೆ. ದರ್ಶನ್​ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣದಿಂದ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿಕೊಂಡು, ಬೆಂಗಳೂರಿನ ಪಟ್ಟಣಗೆರೆ ಶೆಡ್​ ಬಳಿ ಕೊಲೆ ಮಾಡಿಸಿದ ಆರೋಪ ದರ್ಶನ್​ ಮೇಲಿದೆ.

ಇದನ್ನೂ ಓದಿ: ದರ್ಶನ್​ ಜೈಲುವಾಸ ಮುಂದುವರಿಯಲು ಪೊಲೀಸರು ಕೋರ್ಟ್​ಗೆ ನೀಡಿದ ಮುಖ್ಯ ಕಾರಣಗಳು ಇಲ್ಲಿವೆ..

ಜೈಲಿನಲ್ಲಿ ದರ್ಶನ್​ ಕಾಲ ಕಳೆಯುತ್ತಿದ್ದು ಅವರು ಆದಷ್ಟು ಬೇಗ ಹೊರಗೆ ಬರಲಿ ಎಂದು ಅಭಿಮಾನಿಗಳು ಮತ್ತು ಆಪ್ತರು ಬಯಸಿದ್ದಾರೆ. ಆದರೆ ಆರೋಪ ಗಂಭೀರವಾಗಿರುವ ಕಾರಣದಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:29 pm, Thu, 1 August 24