ದರ್ಶನ್ ಮತ್ತು ಗ್ಯಾಂಗ್ಗೆ ಆಗಸ್ಟ್ 14ರ ತನಕ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದ ಕೋರ್ಟ್
ದಿನದಿಂದ ದಿನಕ್ಕೆ ದರ್ಶನ್ಗೆ ಜೈಲು ವಾಸ ಕಷ್ಟವಾಗುತ್ತಿದೆ. ಒಂದೆಡೆ ಜಾಮೀನಿಗಾಗಿ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ಅವರ ನ್ಯಾಯಾಂಗ ಬಂಧನದ ಅವಧಿ ವಿಸ್ತಾರ ಆಗುತ್ತಲೇ ಇದೆ. ಆ.14ರವರೆಗೆ ದರ್ಶನ್, ಪವಿತ್ರಾ ಗೌಡ ಮುಂತಾದ ಆರೋಪಿಗಳು ಜೈಲಿನಲ್ಲಿ ಕಾಲ ಕಳೆಯಬೇಕಿದೆ. ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಈ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದೆ.
ಖ್ಯಾತ ನಟ ದರ್ಶನ್ ಅವರಿಗೆ ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಸಂಕಷ್ಟ ಹೆಚ್ಚಾಗುತ್ತಲೇ ಇದೆ. ಇಂದು (ಆಗಸ್ಟ್ 1) ಈ ಕೇಸ್ನ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಪವಿತ್ರಾ ಗೌಡ, ದರ್ಶನ್ ಸೇರಿದಂತೆ ಪರಪ್ಪನ ಆಗ್ರಹಾರದಿಂದ 13 ಹಾಗೂ ತುಮಕೂರು ಜೈಲಿನಿಂದ ನಾಲ್ವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಆರೋಪಿಗಳ ಹೆಸರು ಹೇಳಿ ಹಾಜರಾತಿ ಪಡೆದ ನ್ಯಾಯಾಧೀಶರು ಆಗಸ್ಟ್ 14ರವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ನೀಡಿದ್ದಾರೆ.
ದರ್ಶನ್ ಜೈಲುಪಾಲಾದ ದಿನದಿಂದ ಅವರ ಕುಟುಂಬದವರಿಗೂ ಟೆನ್ಷನ್ ಹೆಚ್ಚಿದೆ. ಹೇಗಾದರೂ ಮಾಡಿ ಜಾಮೀನು ಕೊಡಿಸಬೇಕು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಹೋರಾಟ ಮಾಡುತ್ತಿದ್ದಾರೆ. ಅನೇಕ ವ್ಯಕ್ತಿಗಳನ್ನು ಭೇಟಿಯಾಗಿ ಅವರ ಸಹಾಯ ಬೇಡಿದ್ದಾರೆ. ಹಾಗಿದ್ದರೂ ಕೂಡ ದರ್ಶನ್ ಅವರನ್ನು ಜೈಲಿನಿಂದ ಹೊರತರಲು ವಿಜಯಲಕ್ಷ್ಮಿಗೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಸನ್ನಡತೆ ಆಧಾರದಲ್ಲಿ ಬಿಡುಗಡೆ; ದರ್ಶನ್ ಬಗ್ಗೆ ಸುಳ್ಳು ಹೇಳಿಕೆ ನೀಡಿದ್ದ ಅಭಿಮಾನಿ ಮತ್ತೆ ಜೈಲಿಗೆ?
ಜೈಲಿನಲ್ಲಿ ದರ್ಶನ್ ಅವರಿಗೆ ಆಹಾರ ಸೇವನೆ ಕಷ್ಟವಾಗಿದೆ. ಹಾಗಾಗಿ, ಮನೆಯಿಂದ ಊಟ, ಹಾಸಿಗೆ, ಬಟ್ಟೆ ತರಿಸಲು ಅನುಮತಿ ನೀಡಬೇಕು ಎಂದು ಅವರು ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅದಕ್ಕೂ ನ್ಯಾಯಾಲಯ ಅನುಮತಿ ನೀಡಿಲ್ಲ. ಆದ್ದರಿಂದ ದರ್ಶನ್ ಅವರು ಜೈಲಿನಲ್ಲಿ ದೇಹದ ತೂಕ ಕಳೆದುಕೊಳ್ಳುತ್ತಿದ್ದಾರೆ. ಅವರನ್ನು ಈಗಾಗಲೇ ಅನೇಕರು ಬಂದು ಭೇಟಿಯಾಗಿದ್ದಾರೆ.
ಇದನ್ನೂ ಓದಿ: ‘ದರ್ಶನ್ಗೂ ಇತರೆ ವಿಚಾರಣಾಧೀನ ಖೈದಿಗಳಿಗೂ ವ್ಯತ್ಯಾಸವಿಲ್ಲ’; ಮನೆ ಊಟ ಕೇಳಿದ ನಟನಿಗೆ ಕೋರ್ಟ್ ಚಾಟಿ
ಸಾಧು ಕೋಕಿಲ, ಜೋಗಿ ಪ್ರೇಮ್, ರಕ್ಷಿತಾ, ಯಶಸ್ ಸೂರ್ಯ, ತರುಣ್ ಸುಧೀರ್, ವಿನೋದ್ ಪ್ರಭಾಕರ್, ವಿನೋದ್ ರಾಜ್, ಚಿಕ್ಕಣ್ಣ ಮುಂತಾದವರು ಬಂದು ಜೈಲಿನಲ್ಲಿ ದರ್ಶನ್ ಅವರನ್ನು ಮಾತನಾಡಿಸಿದ್ದಾರೆ. ಕುಟುಂಬದವರು ಆಗಾಗ ಬಂದು ಭೇಟಿ ಮಾಡುತ್ತಿದ್ದಾರೆ. ಈ ಕಷ್ಟದ ಸಮಯದಲ್ಲಿ ವಿಜಯಲಕ್ಷ್ಮಿ, ದಿನಕರ್ ತೂಗುದೀಪ ಅವರು ಅನೇಕ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:26 pm, Thu, 1 August 24