ಮಹತ್ವದ ಘಟ್ಟ ತಲುಪಿದ ರೇಣುಕಾಸ್ವಾಮಿ ಕೊಲೆ ಕೇಸ್: ದರ್ಶನ್ ಜೈಲು ವಾಸ ಇನ್ನೆಷ್ಟು ಕಾಲ?
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ದೋಷಾರೋಪ ನಿಗದಿಯಾಗಿದೆ. ಕ್ರಿಮಿನಲ್ ಕೇಸ್ನಲ್ಲಿ ಮಹತ್ವದ ಘಟ್ಟವಾದ ದೋಷಾರೋಪ ನಿಗದಿ ನಂತರ ಮುಂದಿನ ಪ್ರಕ್ರಿಯೆ ಹೇಗಿರುತ್ತೆ? ಶಿಕ್ಷೆ ಯಾವಾಗ? ದರ್ಶನ್, ಪವಿತ್ರಾಗೌಡ ಜೈಲುವಾಸ ಇನ್ನೆಷ್ಟು ಕಾಲ ಇರಲಿದೆ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ನಟ ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ದೋಷಾರೋಪ ಹೊರಿಸಿದೆ. ದರ್ಶನ್ (Darshan), ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಇವತ್ತು ಕಿಕ್ಕಿರಿದ ಕೋರ್ಟ್ಗೆ ಹಾಜರಾಗಿ ದೋಷಾರೋಪ ಪ್ರಕ್ರಿಯೆಲ್ಲಿ ಭಾಗಿಯಾದರು. ಚಾರ್ಜ್ಶೀಟ್ನಲ್ಲಿದ್ದ ಆರೋಪಗಳ ಸಾರಾಂಶವನ್ನೇ ದೋಷಾರೋಪವಾಗಿ ಓದಿ ಹೇಳಿದರು.
ದೋಷಾರೋಪವಾಗಿ ಓದಿ ಹೇಳಿದ ನ್ಯಾಯಾಧೀಶರಿಗೆ ಎಲ್ಲಾ ಆರೋಪಿಗಳು ‘ಸುಳ್ಳು ಸುಳ್ಳು’ ಎಂದು ಉತ್ತರಿಸುವ ಮೂಲಕ ದೋಷಾರೋಪವನ್ನೇ ನಿರಾಕರಿಸಿದರು. ಅಲ್ಲದೇ ಸಾಕ್ಷ್ಯ ವಿಚಾರಣೆ ನಡೆಸುವುದಾಗಿ ವಕೀಲರು ಮಾಡಿದ ಮನವಿ ಪರಿಗಣಿಸಿದ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ. ಅಂದು ಎಫ್‌ಡಿಟಿ ಅಂದರೆ ಫಿಕ್ಸಿಂಗ್ ಡೇಟ್ ಫಾರ್ ಟ್ರಯಲ್ ಪ್ರಕ್ರಿಯೆ ನಡೆದು ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸುವ ಸಾಧ್ಯತೆ ಇದೆ.
ದರ್ಶನ್ ಕೇಸ್ ನಲ್ಲಿ ಮುಂದಿನ ಪ್ರಕ್ರಿಯೆ: ದೋಷಾರೋಪ ನಿಗದಿಯಾಗಿರುವುದರಿಂದ ಈಗ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್ಗೆ ಒದಗಿಸಬೇಕಿದೆ. ಸಾಕ್ಷಿಗಳ ಪಟ್ಟಿ ಪರಿಶೀಲಿಸಿದ ಬಳಿಕ ಸಾಕ್ಷ್ಯ ವಿಚಾರಣೆಗೆ ದಿನಾಂಕ ನಿಗದಿಪಡಿಸಿ ಒಬ್ಬೊಬ್ಬರೇ ಸಾಕ್ಷಿಗಳಿಗೆ ಕೋರ್ಟ್ ಸಮನ್ಸ್ ನೀಡಲಿದೆ. ದರ್ಶನ್ ಕೇಸ್ನಲ್ಲಿ ಪ್ರತ್ಯಕ್ಷ ಸಾಕ್ಷಿಗಳಿದ್ದು ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಲಿದೆ. ಇದಕ್ಕೆ ಪೂರಕವಾಗಿ ಕೊಲೆಗೆ ಬಳಸಿದ ಮರದ ಕೊಂಬೆ, ನೈಲಾನ್ ಹಗ್ಗ, ಲಾಠಿ ಸಾಕ್ಷ್ಯವಾಗಿ ಬಳಕೆ ಮಾಡಲಿದ್ದಾರೆ. ಇದಲ್ಲದೇ, ತಾಂತ್ರಿಕ ಸಾಕ್ಷಿಗಳು, ಎಫ್‌ಎಸ್‌ಎಲ್ ತಜ್ಞರ ಹೇಳಿಕೆಯನ್ನೂ ಕೋರ್ಟ್ ದಾಖಲಿಸಬೇಕು.
ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್: ಮುಂದಿನ ಕೋರ್ಟ್ ಪ್ರಕ್ರಿಯೆ ಬಗ್ಗೆ ದರ್ಶನ್ ಪರ ಲಾಯರ್ ಮಾಹಿತಿ
ಬಳಿಕ ಎಲ್ಲ ಸಾಕ್ಷಿಗಳನ್ನೂ ಆರೋಪಿಗಳ ಪರ ವಕೀಲರು ಪಾಟೀಸವಾಲಿಗೆ ಒಳಪಡಿಸಲಿದ್ದಾರೆ. ನಂತರ ಸಿಆರ್‌ಪಿಸಿ 313 ಅಡಿಯಲ್ಲಿ ಆರೋಪಿಗಳ ಹೇಳಿಕೆಯನ್ನೂ ಕೋರ್ಟ್ ದಾಖಲಿಸಲಿದೆ. ಬಳಿಕ ಆರೋಪಿಗಳ ಪರ ಸಾಕ್ಷ್ಯವಿದ್ದರೆ ಹಾಜರುಪಡಿಸಲು ಕೋರ್ಟ್ ಅವಕಾಶ ನೀಡಲಿದೆ. ಅದಾದ ಬಳಿಕ ಪ್ರಾಸಿಕ್ಯೂಷನ್ ಹಾಗೂ ಆರೋಪಿಗಳ ವಾದಮಂಡನೆ ಆಲಿಸಲಿರುವ ಕೋರ್ಟ್ ಬಳಿಕ ಅಂತಿಮವಾಗಿ ತೀರ್ಪು ಪ್ರಕಟಿಸಲಿದೆ.
ಜಾಮೀನು ಸಿಗುವ ಸಾಧ್ಯತೆ ಕಡಿಮೆ:
ಪ್ರಮುಖ ಸಾಕ್ಷಿಗಳ ಸಾಕ್ಷ್ಯ ವಿಚಾರಣೆ ಮುಗಿಯುವವರೆಗೆ ದರ್ಶನ್ಗೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ. ಪ್ರಮುಖ ಸಾಕ್ಷಿಗಳ ಹೇಳಿಕೆ ದಾಖಲಿಸಿ, ಪಾಟೀಸವಾಲಿಗೆ ಒಳಪಡಿಸಿದ ಬಳಿಕವಷ್ಟೇ ಜಾಮೀನು ಕೋರಿ ದರ್ಶನ್ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅದಕ್ಕೆ ಇನ್ನೂ ಹಲವು ತಿಂಗಳು ಸಮಯ ಹಿಡಿಯಲಿದೆ. ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲೂ ಅವಕಾಶವಿರುವ ಪ್ರಕರಣ ಆಗಿರುವುದರಿಂದ ದರ್ಶನ್ ಭವಿಷ್ಯವನ್ನು 57ನೇ ಸಿಸಿಹೆಚ್ ಕೋರ್ಟ್ ನಿರ್ಧರಿಸಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:25 pm, Mon, 3 November 25



