ನಟಿ ನಿತ್ಯಾ ಮೆನನ್ (Nithya Menon) ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವು ವರ್ಷಗಳು ಕಳೆದಿವೆ. ಈಗಲೂ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ಕಲಾವಿದರಿಗೆ ಜೋಡಿಯಾಗಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಅವರು ರಿಯಲ್ ಲೈಫ್ನಲ್ಲಿ ಜೋಡಿ ಹುಡುಕಿಕೊಂಡಿದ್ದಾರೆ. ಶೀಘ್ರದಲ್ಲೇ ನಿತ್ಯಾ ಮೆನನ್ ಮದುವೆ (Nithya Menon Marriage) ಆಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ವಿಷಯ ತಿಳಿದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದ ನಿತ್ಯಾ ಮೆನನ್ ಅವರು ಈಗ ಮಲಯಾಳಂ (Malayalam Film Industry) ಸ್ಟಾರ್ ಹೀರೋ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎಂದು ಕೆಲವೆಡೆ ವರದಿ ಆಗಿದೆ. ಶೀಘ್ರದಲ್ಲೇ ಈ ಬಗ್ಗೆ ಅವರು ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.
ಚಿತ್ರರಂಗದಲ್ಲೀಗ ಮದುವೆ ಸೀಸನ್ ಶುರುವಾಗಿದೆ ಎಂದರೂ ತಪ್ಪಾಗದು. ಕೆಲವೇ ದಿನಗಳ ಹಿಂದೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಏಪ್ರಿಲ್ ತಿಂಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ಮದುವೆ ನೆರವೇರಿತು. ಈಗ ನಿತ್ಯಾ ಮೆನನ್ ವಿವಾಹದ ಬಗ್ಗೆ ಗುಸುಗುಸು ಹರಡಿದೆ. ಈ ಬಗ್ಗೆ ಅವರಿಂದಲೇ ಸೂಕ್ತ ಸ್ಪಷ್ಟನೆ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.
ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘19(1)(ಎ)’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಥಿಯೇಟರ್ನಲ್ಲಿ ತೆರೆಕಾಣುವ ಬದಲು ನೇರವಾಗಿ ಒಟಿಟಿ ಮೂಲಕ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಕೂಡ ಅಭಿನಯಿಸಿದ್ದಾರೆ. ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೂಲಕ ಈ ಚಿತ್ರ ಪ್ರಸಾರ ಆಗಲಿದೆ.
ಮೂಲಗಳ ಪ್ರಕಾರ, ಮಲಯಾಳಂ ಚಿತ್ರರಂಗದ ಓರ್ವ ಸ್ಟಾರ್ ಹೀರೋ ಜೊತೆ ನಿತ್ಯಾ ಮೆನನ್ ಅವರು ಡೇಟಿಂಗ್ ಮಾಡುತ್ತಿದ್ದಾರೆ. ಕಾಮನ್ ಫ್ರೆಂಡ್ ಮೂಲಕ ಇಬ್ಬರೂ ಪರಿಚಿತರಾದರು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. ಈಗ ಅವರಿಬ್ಬರ ಪ್ರೀತಿಯು ಮದುವೆ ಹಂತಕ್ಕೆ ಬಂದಿದೆ ಎಂದೆಲ್ಲ ಗಾಸಿಪ್ ಹರಡಿದೆ. ಮದುವೆ ಆಗುವ ತೀರ್ಮಾನಕ್ಕೆ ಬಂದಿರುವುದರಿಂದ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ನಿತ್ಯಾ ಮೆನನ್ ಹಿಂದೇಟು ಹಾಕುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.