
ಇಂದು (ಜುಲೈ 7) ‘ಡಿವೈನ್ ಸ್ಟಾರ್’ ರಿಷಬ್ ಶೆಟ್ಟಿ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಅವರ ಹಳೆಯ ಸಿನಿಮಾದ ಅಪರೂಪದ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಭರ್ಜರಿ ಯಶಸ್ಸು ಕಂಡ ‘ಕಾಂತಾರ: ಚಾಪ್ಟರ್ 1’ ಚಿತ್ರದ ಮೂಲಕ ಇಡೀ ವಿಶ್ವದ ಗಮನ ಸೆಳೆದಿರುವ ರಿಷಬ್, ಚಿತ್ರರಂಗದಲ್ಲಿ ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಆದರೆ, ಈ ಯಶಸ್ಸಿನ ಹಿಂದೆ ಅವರ ಕಠಿಣ ಪರಿಶ್ರಮವಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಅವರು ನಟಿಸಿದ್ದ 13 ವರ್ಷಗಳ ಹಳೆಯ ಚಿತ್ರದ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ.
ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ರಿಷಬ್ ಶೆಟ್ಟಿ ಆರಂಭದ ದಿನಗಳಲ್ಲಿ ಸಾಕಷ್ಟು ವಿಭಿನ್ನ ಕೆಲಸಗಳನ್ನು ಮಾಡಿದ್ದರು. ನಟನೆಯ ಆಸಕ್ತಿಯಿಂದ ಗಾಂಧಿನಗರಕ್ಕೆ ಬಂದ ಅವರು ಮೊದಲು ‘ತುಘಲಕ್’ ಸಿನಿಮಾದಲ್ಲಿ ಕೆಲಸ ಮಾಡಿದರು. ಆ ಬಳಿಕ, 2013ರಲ್ಲಿ ತೆರೆಕಂಡಿದ್ದ ಸೂಪರ್ ಹಿಟ್ ‘ಲೂಸಿಯಾ’ ಚಿತ್ರದಲ್ಲಿ ಒಂದು ಸಣ್ಣ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಪವನ್ ಕುಮಾರ್ ನಿರ್ದೇಶನದ, ನೀನಾಸಂ ಸತೀಶ್ ನಾಯಕನಾಗಿದ್ದ ಆ ಚಿತ್ರ ಆಗಿನ ಕಾಲಕ್ಕೆ ಹೊಸ ಅಲೆ ಸೃಷ್ಟಿಸಿತ್ತು. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ರಿಷಬ್ ಅವರನ್ನು ಗುರುತಿಸಿರುವ ಅಭಿಮಾನಿಗಳು, ಅವರ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಂದು ಸಣ್ಣ ಪಾತ್ರ ಮಾಡಿದ್ದ ನಟ, ಇಂದು ಜಾಗತಿಕ ಮಟ್ಟದ ಸ್ಟಾರ್ ಆಗಿ ಬೆಳೆದಿರುವುದನ್ನು ನೋಡಿ ನೆಟ್ಟಿಗರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಮೊದಲ ಭಾಗಕ್ಕಿಂತಲೂ ಮಿಗಿಲಾದ ಮೇಕಿಂಗ್ ಹಾಗೂ ರೋಚಕ ಕಥಾಹಂದರ ಹೊಂದಿದ್ದ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.
ಇದನ್ನೂ ಓದಿ: ‘ನಾನು ಬೆಳೆದು ಬಂದ ಸಂಸ್ಕೃತಿಯ ಆಚರಣೆ’; ವಿಡಿಯೋ ಹಂಚಿಕೊಂಡು ಭಾವುಕರಾದ ರಿಷಬ್ ಶೆಟ್ಟಿ
ಈ ಪ್ರಿಕ್ವೆಲ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಮತ್ತು ಭಿನ್ನ ಗೆಟಪ್ ಚಿತ್ರಪ್ರೇಮಿಗಳಿಗೆ ಮೈ ರೋಮಾಂಚನಗೊಳಿಸಿತ್ತು. ನಟಿ ರುಕ್ಮಿಣಿ ವಸಂತ್ ಈ ಚಿತ್ರದಲ್ಲಿ ನಾಯಕಿಯಾಗಿ ರಿಷಬ್‌ಗೆ ಸಾಥ್ ನೀಡಿದ್ದರು. ಅಂದು ಸಣ್ಣ ಪುಟ್ಟ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಬದುಕು ಆರಂಭಿಸಿದ ಕರಾವಳಿಯ ಪ್ರತಿಭೆ, ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ಸಿನ ಶಿಖರ ಏರಿ ನಿಂತಿರುವುದು ನಿಜಕ್ಕೂ ರೋಮಾಂಚನಕಾರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.