ರಿಷಬ್ ಶೆಟ್ಟಿ ಜನ್ಮದಿನ: ‘ಮಗಾ..’ ಎಂದು ಆತ್ಮೀಯ ಗೆಳೆಯನಿಗೆ ರಕ್ಷಿತ್ ಶೆಟ್ಟಿ ವಿಶ್ ಮಾಡಿದ್ದು ಹೀಗೆ..
Happy Birthday Rishab Shetty: ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್ ಪಾರ್ಟಿ’ ಚಿತ್ರದಿಂದ ರಿಷಬ್ ಶೆಟ್ಟಿಗೆ ನಿರ್ದೇಶಕನಾಗಿ ಒಳ್ಳೆಯ ಹೆಸರು ಸಿಕ್ಕಿತು. ಬಳಿಕ ‘ಬೆಲ್ ಬಾಟಂ’ ಸಿನಿಮಾದಲ್ಲಿ ಹೀರೋ ಆಗಿ ಬಡ್ತಿ ಪಡೆದಿದ್ದು ರಿಷಬ್ ಜೀವನದ ಒಂದು ಟರ್ನಿಂಗ್ ಪಾಯಿಂಟ್.
ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಯಶಸ್ಸು ಕಂಡ ರಿಷಬ್ ಶೆಟ್ಟಿ ಅವರಿಗೆ ಇಂದು (ಜು.7) ಜನ್ಮದಿನದ ಸಂಭ್ರಮ. ಹಲವು ವರ್ಷಗಳಿಂದ ಚಂದನವನದಲ್ಲಿ ತೊಡಗಿಕೊಂಡಿರುವ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಇಂದು ಎಲ್ಲರೂ ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಶುಭ ಹಾರೈಸುತ್ತಿದ್ದಾರೆ. ಅವರ ಜೊತೆ ಹಲವು ವರ್ಷಗಳಿಂದ ಒಡನಾಟ ಹೊಂದಿರುವ ರಕ್ಷಿತ್ ಶೆಟ್ಟಿ ಕೂಡ ತುಂಬಾ ಆತ್ಮೀಯತೆಯಿಂದ ವಿಶ್ ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಅನೇಕ ಸೋಲು-ಗೆಲುವುಗಳನ್ನು ಜೊತೆಯಾಗಿ ಕಂಡವರು ಈ ಗೆಳೆಯರು.
‘ನಿನ್ನ ಜೊತೆಗಿನ ಈ ಸಂತಸದ ಪಯಣವು ಪ್ರೀತಿ, ನಗು, ಕಲಿಕೆಯಿಂದ ತುಂಬಿದೆ. ಹುಟ್ಟುಹಬ್ಬದ ಶುಭಾಶಯಗಳು ಮಗಾ. ನಿನ್ನ ಬದುಕು ಯಾವಾಗಲೂ ಖುಷಿಯಾಗಿರಲಿ ಮತ್ತು ಅದ್ಭುತವಾಗಿರಲಿ ಎಂದು ಹಾರೈಸುತ್ತೇನೆ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ‘ಧನ್ಯವಾದಗಳು ಮಗಾ’ ಎಂದು ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾ ಸ್ಟುಡಿಯೋಸ್ ಮೂಲಕವೂ ರಿಷಬ್ಗೆ ಶುಭಕೋರಲಾಗಿದೆ.
Thank you so much maga ??? https://t.co/dpZeVvyUb3
— Rishab Shetty (@shetty_rishab) July 7, 2021
ಉಳಿದವರು ಕಂಡಂತೆ, ರಿಕ್ಕಿ, ಕಿರಿಕ್ ಪಾರ್ಟಿ ಮುಂತಾದ ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಜೊತೆಯಾಗಿ ಕೆಲಸ ಮಾಡಿದರು. ಈಗ ಅವರವರ ಪ್ರತ್ಯೇಕ ಪ್ರಾಜೆಕ್ಟ್ಗಳಲ್ಲಿ ಇಬ್ಬರೂ ಬ್ಯುಸಿ ಆಗಿದ್ದಾರೆ. ಮೊದಲು ನಿರ್ದೇಶನದಲ್ಲಿ ಹೆಚ್ಚು ಸಕ್ರಿಯರಾಗಿದ್ದ ರಿಷಬ್ ಅವರಿಗೆ ಈಗ ನಟನೆಯ ಆಫರ್ಗಳು ಹೆಚ್ಚಾಗಿವೆ. ಅದರ ಜೊತೆಗೆ ನಿರ್ದೇಶನಕ್ಕೂ ಅವರು ಸೂಕ್ತ ಸಮಯ ಮೀಸಲಿಡುತ್ತಿದ್ದಾರೆ.
ನಿರ್ದೇಶಕನಾಗಿ ‘ಕಿರಿಕ್ ಪಾರ್ಟಿ’ ಚಿತ್ರದಿಂದ ಅಭೂತಪೂರ್ವ ಯಶಸ್ಸು ಕಂಡ ಬಳಿಕ ‘ಬೆಲ್ ಬಾಟಂ’ ಸಿನಿಮಾದಲ್ಲಿ ಹೀರೋ ಆಗಿ ಬಡ್ತಿ ಪಡೆದಿದ್ದು ರಿಷಬ್ ಜೀವನದ ಒಂದು ಟರ್ನಿಂಗ್ ಪಾಯಿಂಟ್. ಈಗ ಆ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ‘ರುದ್ರಪ್ರಯಾಗ’ ಚಿತ್ರವನ್ನು ರಿಷಬ್ ನಿರ್ದೇಶಿಸುತ್ತಿದ್ದು, ಅದರ ಬಗ್ಗೆಯೂ ಅಭಿಮಾನಿಗಳಿಗೆ ಅಪಾರ ನಿರೀಕ್ಷೆ ಇದೆ.
ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಇದನ್ನೂ ಓದಿ:
ರಕ್ಷಿತ್ Vs ಲಹರಿ ವೇಲು ವಿವಾದ ಶುರುವಾಗಿದ್ದು ಯಾಕೆ? ಅಂತ್ಯವಾಗಿದ್ದು ಹೇಗೆ? ಇಲ್ಲಿದೆ ಡಿಟೇಲ್ಸ್