ರಕ್ಷಿತ್ ಶೆಟ್ಟಿ Vs ಸುದ್ದಿ ವಾಹಿನಿ: ‘ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂದ ಪುಷ್ಕರ್
Pushkara Mallikarjunaiah: ರಕ್ಷಿತ್ ಶೆಟ್ಟಿ ಬಗ್ಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ನಿರ್ಮಾಪಕ ಪುಷ್ಕರ್ ಪ್ರತಿಕ್ರಿಯಿಸಿದ್ದಾರೆ. ಮತ್ತೆ ಭವಿಷ್ಯದಲ್ಲಿ ಈ ರೀತಿ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ ಅಂತ ಪುಷ್ಕರ್ ಬಹಿರಂಗ ಪತ್ರ ಬರೆದಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದರಲ್ಲಿ ನಟ ರಕ್ಷಿತ್ ಶೆಟ್ಟಿ ಬಗ್ಗೆ ಪ್ರಸಾರವಾದ ಕಾರ್ಯಕ್ರಮದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಅವರು ಜು.11ರಂದು ಉತ್ತರ ನೀಡುವುದಾಗಿ ಹೇಳಿದ್ದಾರೆ. ಒಟ್ಟಾರೆ ಪ್ರಕರಣದ ಕುರಿತು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು’ ಎಂಬ ಕ್ಯಾಪ್ಷನ್ನೊಂದಿಗೆ ಅವರು ದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ಅದೀಗ ವೈರಲ್ ಆಗುತ್ತಿದೆ.
‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಿಂದಲೂ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಸ್ನೇಹಿತರಾಗಿದ್ದಾರೆ. ಈಗ ಇಬ್ಬರ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಗಾಸಿಪ್ ಕೇಳಿಬಂದಿತ್ತು. ಆ ಎಲ್ಲ ವಿಚಾರಗಳಿಗೆ ಪುಷ್ಕರ್ ಈ ಪತ್ರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಮ್ಮ ಚಿತ್ರರಂಗಕ್ಕೆ ಇದು ಪರೀಕ್ಷೆಯ ಕಾಲ. ಇಂಥ ಸಂದರ್ಭದಲ್ಲಿ ರಕ್ಷಿತ್ ಬಗ್ಗೆ ಪ್ರತಿಷ್ಠಿತ ಸುದ್ದಿವಾಹಿನಿಯಲ್ಲಿ ಈ ರೀತಿ ಪ್ರಸಾರ ಆಗಿರುವುದು ಆಘಾತದ ಸಂಗತಿ’ ಎಂದು ಪುಷ್ಕರ್ ಬರಹ ಆರಂಭಿಸಿದ್ದಾರೆ.
‘ತಮ್ಮ ಪರಿಶ್ರಮದಿಂದ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಈ ರೀತಿ ಸುದ್ದಿ ಮಾಡುವುದು ಸರಿಯಲ್ಲ. ಸುದ್ದಿವಾಹಿನಿಯ ಕಾರ್ಯಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಯಾವುದು ಸತ್ಯ ಎಂದು ಸ್ಪಷ್ಟಪಡಿಸಲು ನಾವೆಲ್ಲರೂ ಸೋಶಿಯಲ್ ಮೀಡಿಯಾ ಬಳಸಬೇಕಾಗಿ ಬಂದಿರುವುದು ದುರದೃಷ್ಟಕರ ಸಂಗತಿ’ ಎಂದು ಪುಷ್ಕರ್ ಹೇಳಿದ್ದಾರೆ.
‘ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಅವನೇ ಶ್ರೀಮನ್ನಾರಾಯಣ ಸಿನಿಮಾದವರೆಗೆ ನಾನು ಮತ್ತು ರಕ್ಷಿತ್ ಜೊತೆಯಾಗಿ ಸಾಗಿ ಬಂದಿದ್ದೇವೆ. ನನ್ನ ಸಿನಿಮಾ ಜರ್ನಿಗೆ ಅವರು ಸ್ಫೂರ್ತಿಯಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಬ್ಯುಸಿನೆಸ್ ಬಗ್ಗೆ ಅನೇಕ ಊಹಾಪೋಹಗಳಿವೆ. ಅದು ನನ್ನ ವೈಯಕ್ತಿಕ. ಲಾಭ-ನಷ್ಟ ಏನೇ ಇದ್ದರೂ ಉತ್ಸಾಹದಲ್ಲಿ ನಾವು ಒಂದು ತಂಡದ ರೀತಿ ಕೆಲಸ ಮಾಡಿದ್ದೇವೆ. ಮಂದೆಯೂ ಹಾಗೆಯೇ ಮಾಡಲಿದ್ದೇವೆ. ಒಂದು ಸಿನಿಮಾದ ಫಲಿತಾಂಶದಿಂದ ನಮಗೆ ಸಿನಿಮಾದ ಮೇಲಿರುವ ಒಲವು ಕಡಿಮೆ ಆಗುವುದಿಲ್ಲ. ಒಂದು ಕುಟುಂಬದ ರೀತಿ ನಮ್ಮ ನಡುವೆ ಏನೇ ಹೊಂದಾಣಿಕೆ ಇರಬಹುದು. ಅದನ್ನು ಸಾರ್ವಜನಿಕವಾಗಿ ನಾವು ಸ್ಪಷ್ಟಪಡಿಸಬೇಕಿಲ್ಲ’ ಎಂದು ಪುಷ್ಕರ್ ಹೇಳಿದ್ದಾರೆ.
” we will be respected only when we respect others ” – about News channel clip on @rakshitshetty pic.twitter.com/Cq6bJ0Kwql
— Pushkara Mallikarjunaiah (@Pushkara_M) July 1, 2021
‘ರಕ್ಷಿತ್ ಅವರಂತಹ ವ್ಯಕ್ತಿ ಬಗ್ಗೆ ಯಾವುದೇ ಸುದ್ದಿ ಸಂಸ್ಥೆ ಈ ರೀತಿಯ ವರದಿ ಪ್ರಸಾರ ಮಾಡಿದರೆ ನಾನು ವಿರೋಧಿಸುತ್ತೇನೆ. ಎಲ್ಲ ಮಾಧ್ಯಮಕ್ಕೂ ಸಾಕಷ್ಟು ಸಾಮಾಜಿಕ ಮತ್ತು ನೈತಿಕ ಜವಾಬ್ದಾರಿ ಇದೆ. ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗುತ್ತದೆ. ಮತ್ತೆ ಭವಿಷ್ಯದಲ್ಲಿ ಈ ರೀತಿ ಮಾಡಬಾರದು ಎಂದು ವಿನಂತಿಸಿಕೊಳ್ಳುತ್ತೇನೆ’ ಅಂತ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಬಹಿರಂಗವಾಗಿ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:
‘ಇದಕ್ಕೆ ಉತ್ತರ ಕೊಡುತ್ತೇನೆ’; ತೇಜೋವಧೆ ಮಾಡಿದ ಮಾಧ್ಯಮಕ್ಕೆ ರಕ್ಷಿತ್ ಶೆಟ್ಟಿ ಖಡಕ್ ಎಚ್ಚರಿಕೆ
ಮುಗಿಯಿತು ರಕ್ಷಿತ್ Vs ಲಹರಿ ಕಿರಿಕ್; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ