‘ಕಿರಿಕ್ ಪಾರ್ಟಿ’ ಚಿತ್ರದಲ್ಲಿನ ಹಾಡೊಂದಕ್ಕೆ ಸಂಬಂಧಪಟ್ಟಂತೆ ಲಹರಿ ಮ್ಯೂಸಿಕ್ ಕಂಪನಿ ಮತ್ತು ರಕ್ಷಿತ್ ಶೆಟ್ಟಿ ನಡುವೆ ವಿವಾದ ಭುಗಿಲೆದ್ದಿತ್ತು. ತಮ್ಮ ಸಂಸ್ಥೆಗೆ ಸೇರಿದ ಹಾಡಿನ ಟ್ಯೂನ್ ಅನ್ನು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಆರೋಪ ಮಾಡಿದ್ದರು. ಈ ವಿಚಾರವಾಗಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಇಬ್ಬರ ನಡುವಿನ ಕಿರಿಕ್ ಅಂತ್ಯವಾಗಿದೆ. ಹಾಗಾದರೆ ಇಬ್ಬರ ನಡುವಿನ ಆ ವಿವಾದ ಶುರುವಾಗಿದ್ದು ಯಾಕೆ? ಅಂತ್ಯವಾಗಿದ್ದು ಹೇಗೆ ಎಂಬ ಬಗ್ಗೆ ಲಹರಿ ವೇಲು ಮಾತನಾಡಿದ್ದಾರೆ.
‘ರಕ್ಷಿತ್ ಶೆಟ್ಟಿ ಯುವಕರಾಗಿ ಚಿತ್ರರಂಗಕ್ಕೆ ಬಂದು ಒಳ್ಳೆಯ ಸಿನಿಮಾ ನೀಡಿದ್ದಾರೆ. ನನಗೆ ಅದು ಸಂತೋಷ. ಹೊಸಬರು ಯಾರೇ ಬಂದರೂ ಲಹರಿ ಸಂಸ್ಥೆ ಪ್ರೋತ್ಸಾಹಿಸುತ್ತದೆ. ಎ.ಆರ್. ರೆಹಮಾನ್, ಹಂಸಲೇಖ, ಗುರುಕಿರಣ್ ಮುಂತಾದವರ ಮೊದಲ ಸಿನಿಮಾದ ಹಾಡುಗಳನ್ನು ನಾವು ಬಿಡುಗಡೆ ಮಾಡಿದಾಗ ಅವರು ಯಾರೆಂಬುದೇ ಜನರಿಗೆ ಗೊತ್ತಿರಲಿಲ್ಲ. ಕಿರಿಕ್ ಪಾರ್ಟಿ ಹಾಡಿಗೆ ಸಂಬಂಧಿಸಿದಂತೆ ಒಂದಷ್ಟು ತಪ್ಪು ಗ್ರಹಿಕೆ ಆಗಿತ್ತು’ ಎಂದು ವೇಲು ಹೇಳಿದ್ದಾರೆ.
‘ಯಾವುದೇ ಒಂದು ಹಾಡನ್ನು ಪುನಃ ಬೇರೆ ಯಾವುದೇ ರೂಪದಲ್ಲಿ ಬಳಸಬೇಕು ಎಂದರೆ ಸಂಬಂಧಿಸಿದವರ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಅದು ವಾಡಿಕೆ. ಆದರೆ ಕಿರಿಕ್ ಪಾರ್ಟಿ ವಿಚಾರದಲ್ಲಿ ಕಮ್ಯೂನಿಕೇಷನ್ನಲ್ಲಿ ಹೆಚ್ಚು-ಕಡಿಮೆ ಆಯಿತು. ಅವರೇ ಹೇಳಿದಂತೆ ಅವರ ಟೀಮ್ನಲ್ಲಿದ್ದವರು ಯುವಕರು. ಸರಿಯಾಗಿ ಗೊತ್ತಿಲ್ಲದೆ ದಾರಿ ತಪ್ಪಿಸುವವರು ಇದ್ದೇ ಇರುತ್ತಾರೆ. ಅದು ಒಂದಕ್ಕೊಂದು ಬೆಳೆದು ವಿವಾದ ಆಯಿತು’ ಎಂದು ಕಾಂಟ್ರವರ್ಸಿ ಆಗಿದ್ದಕ್ಕೆ ಕಾರಣ ನೀಡಿದ್ದಾರೆ ವೇಲು.
‘ನಾಲ್ಕು ತಿಂಗಳ ಮುಂಚೆ ವಿಜಯ್ ಕಿರಗಂದೂರು ಅವರು ನಮಗೆ ಒಂದು ಮಾತು ಹೇಳಿದರು. ಏನ್ ಸರ್ ಇದೆಲ್ಲ ಅಂತ ಕೇಳಿದರು. ನಾನು 45 ವರ್ಷದಿಂದ ಯಾರ ಮೇಲೂ ವಿವಾದ ಇಟ್ಟುಕೊಂಡವನಲ್ಲ. ನಾವು ಕೂಡ ನೋವು-ಅವಮಾನ ಅನುಭವಿಸಿದ್ದೇವೆ. ಹಾಗಂತ ನಾನು ಇನ್ನೊಬ್ಬನಿಗೆ ನೋವು ಕೊಡುವವನಲ್ಲ. ಇದು ದೊಡ್ಡ ವಿಷಯ ಅಲ್ಲ. 2 ನಿಮಿಷದಲ್ಲಿ ಬಗೆಹರಿಸಿಕೊಳ್ಳಬಹುದು ಅಂತ ಅವರಿಗೆ ಹೇಳಿದೆ. ರಕ್ಷಿತ್, ನಾನು, ಅಜನೀಶ್ ಮತ್ತು ನಿರ್ದೇಶಕ ಶೂನ್ಯ ಅವರು ಒಂದು ಹೋಟೆಲ್ನಲ್ಲಿ ಮಾತನಾಡಿ ಬಗೆಹರಿಸಿಕೊಂಡೆವು’ ಎಂದು ವೇಲು ಹೇಳಿದ್ದಾರೆ.
‘ಎಲ್ಲ ವ್ಯವಹಾರದಲ್ಲೂ ಒಂದು ಮೌಲ್ಯ ಇರುತ್ತದೆ. ಯಾವುದೇ ಹಾಡನ್ನು ನಾವು ಹಣ ಕೊಟ್ಟು ಖರೀದಿಸಿರುತ್ತೇವೆ. ಬೇರೆಯವರ ಹಾಡನ್ನು ನಾವು ಬಳಸಿಕೊಂಡರೆ ಅವರೂ ಬಿಡುವುದಿಲ್ಲ. ಮೌಲ್ಯಗಳನ್ನು ಇಟ್ಟುಕೊಂಡು ಜೀವನ ಮಾಡಿದರೆ ನಮ್ಮ ಸಿನಿಮಾ ಇಂಡಸ್ಟ್ರೀಯಲ್ಲಿ ಯಾವುದೇ ವಿವಾದಗಳು ಇರುವುದಿಲ್ಲ’ ಎಂಬುದು ವೇಲು ಮಾತುಗಳು.
ಇದನ್ನೂ ಓದಿ:
ಮುಗಿಯಿತು ರಕ್ಷಿತ್ Vs ಲಹರಿ ಕಿರಿಕ್; ಮತ್ತೆ ಸ್ನೇಹ ಚಿಗುರಿದ್ದಕ್ಕೆ ಹೊಸ ಸೆಲ್ಫೀ ಸಾಕ್ಷಿ