ನಿರೀಕ್ಷೆಗೆ ನಿಲುಕದ ಅತಿ ಸುಂದರ ಪ್ರೇಮಕತೆ: ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ರಿಷಬ್ ಬಣ್ಣಿಸಿದ್ದು ಹೀಗೆ
Saptha Sagaradache Ello: ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ವೀಕ್ಷಿಸಿದ ರಿಷಬ್ ಶೆಟ್ಟಿ, ಸಿನಿಮಾದ ನವಿರು ಪ್ರೇಮಕತೆಯನ್ನು ಕೊಂಡಾಡಿದ್ದಾರೆ. ನಿರೀಕ್ಷೆಗಳಿಗೆ ನಿಲುಕದ ಅತೀ ಸುಂದರ ಪ್ರೇಮಕಥೆ ಇದೆಂದು ಬಣ್ಣಿಸಿದ್ದಾರೆ.
ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ‘ (Sapta Sagaradache Ello) ಸಿನಿಮಾ ಇಂದಷ್ಟೆ (ಸೆಪ್ಟೆಂಬರ್ 1) ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಬಹುತೇಕರು ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಸೆಲೆಬ್ರಿಟಿಗಳಿಗಾಗಿ ನಿನ್ನೆ (ಆಗಸ್ಟ್ 31) ರಂದೇ ಪ್ರೀಮಿಯರ್ ಶೋ ಅನ್ನು ಆಯೋಜಿಸಲಾಗಿತ್ತು. ಚಿತ್ರರಂಗದ ಹಲವರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ರಕ್ಷಿತ್ ಶೆಟ್ಟಿಯ ಆತ್ಮೀಯ ಗೆಳೆಯ ರಿಷಬ್ ಶೆಟ್ಟಿ ಸಹ ನಿನ್ನೆಯೇ ಪತ್ನಿ ಪ್ರತಿಭಾ ಜೊತೆ ಸಿನಿಮಾ ನೋಡಿದ್ದರು. ಸಿನಿಮಾ ನೋಡಿ ಬಂದು ಮಾಧ್ಯಮಗಳೊಟ್ಟಿಗೆ ಅಭಿಪ್ರಾಯ ಹಂಚಿಕೊಂಡಿದ್ದ ರಿಷಬ್ ಇಂದು (ಸೆಪ್ಟೆಂಬರ್ 01) ಟ್ವಿಟ್ಟರ್ನಲ್ಲಿ ಇನ್ನಷ್ಟು ವಿವರವಾಗಿ ಅಭಿಪ್ರಾಯ ಬರೆದುಕೊಂಡಿದ್ದಾರೆ.
”ಸಪ್ತ ಸಾಗರದಾಚೆ ಎಲ್ಲೋ’ ಹುಟ್ಟಿದ ಈ ಪ್ರೇಮದ ಅಲೆ ಈಗ ಭಾವಪ್ರವಾಹವಾಗಿ ಬಂದು ಮನದ ತೀರಕ್ಕೆ ಬಡಿದಿದೆ. ಹೇಮಂತ್, ಗುಂಡು ಶೆಟ್ಟಿ, ಬರವಣಿಗೆ ಅಕ್ಷರಶಃ ಕಡಲನ್ನು ಕವಿತೆಯಾಗಿಸಿದೆ. ಚರಣ್ ರಾಜ್ ಸಂಗೀತ ಅದರ ತೆರೆಗಳಷ್ಟೆ ಲಯಬದ್ಧ. ಅದೈತ್ ಅತ್ಯುತ್ತಮವಾಗಿ ದೃಶ್ಯಗಳನ್ನು ಕಟ್ಟಿ ಕೊಟ್ಟಿದ್ದಾರೆ. ರಕ್ಷಿತ್ ಹಾಗು ರುಕ್ಕಿಣಿ ಪಾತ್ರದಲ್ಲಿ ಆಳಕ್ಕಿಳಿದು ಜೀವಿಸಿದ್ದು. ಇದುವರೆಗಿನ ರಕ್ಷಿತ್ ವೃತ್ತಿ ಜೀವನದಲ್ಲೆ ದಿ ಬೆಸ್ಟ್ ಪರ್ಫಾರ್ಮೆನ್ಸ್ ಇದಾಗಿತ್ತು. ರುಕ್ಕಿಣಿ ವಸಂತ್ ಚಂದನವನದ ಆಸ್ತಿ ಆಗುವದರಲ್ಲಿ ಸಂಶಯವಿಲ್ಲ. ನಿರೀಕ್ಷೆಗಳಿಗೆ ನಿಲುಕದ ಅತೀ ಸುಂದರ ಪ್ರೇಮಕಥೆಯನ್ನು ಕನ್ನಡಕ್ಕೆ ಕೊಟ್ಟ ಚಿತ್ರತಂಡಕ್ಕೆ ಧನ್ಯವಾದಗಳು, ಎಲ್ಲರೂ ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಿ ಆಶೀರ್ವಾದ ಮಾಡಿ” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಜೊತೆಗೆ ”ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ. ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಒಂದಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರಮಂದಿರದಲ್ಲೇ ನೋಡಿ ಮನು ಹಾಗು ಪ್ರಿಯಾರ ಜಗತ್ತಲ್ಲಿ ಭಾಗಿಯಾಗಿ” ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ನನ್ನ ಸ್ನೇಹಿತರಲ್ಲ…: ಹಿಂಗ್ಯಾಕಂದ್ರು ರಾಜ್ ಬಿ ಶೆಟ್ಟಿ?
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ವೀಕ್ಷಿಸಿದ ಬಹುತೇಕರು ಸಿನಿಮಾದಲ್ಲಿನ ನವಿರು ಪ್ರೇಮಕತೆಗೆ ಮಾರು ಹೋಗಿದ್ದಾರೆ. ರಿಷಬ್ ಶೆಟ್ಟಿ ಪತ್ನಿ ಪ್ರತಿಭಾ ಸಹ ಇದೊಂದು ಅದ್ಭುತವಾದ ಪ್ರೇಮಕತೆ ಎಂದು ಬಣ್ಣಿಸಿದ್ದರು. ನಟ, ರಕ್ಷಿತ್ ಶೆಟ್ಟಿಯ ಮತ್ತೊಬ್ಬ ಆತ್ಮೀಯ ಗೆಳೆಯ ರಾಜ್ ಬಿ ಶೆಟ್ಟಿ ಸಹ ನಿನ್ನೆಯೇ ಸಿನಿಮಾ ನೋಡಿದ್ದು, ‘ಇದೊಂದು ಮಾಸ್ಟರ್ ಪೀಸ್’ ಎಂದಿದ್ದರು. ಪ್ರೀತಿಯನ್ನು ಬಹಳ ನವಿರಾಗಿ, ನಿಜವಾಗಿ ತೋರಿಸಿರುವ ನಿರ್ದೇಶಕ ಹೇಮಂತ್ ರಾವ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ರಿಷಬ್ ಶೆಟ್ಟಿ ಟ್ವೀಟ್
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಬಗ್ಗೆ ಪದಗಳಲ್ಲಿ ವರ್ಣಿಸಲಾಗುತ್ತಿಲ್ಲ. ಕನ್ನಡದ ಅತ್ಯುತ್ತಮ ಪ್ರೇಮಕಾವ್ಯಗಳಲ್ಲಿ ಒಂದಾಗಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು. ಚಿತ್ರಮಂದಿರದಲ್ಲೇ ನೋಡಿ ಮನು ಹಾಗು ಪ್ರಿಯಾರ ಜಗತ್ತಲ್ಲಿ ಭಾಗಿಯಾಗಿ!#SaptaSagaradaacheEllo @hemanthrao11 @rukminitweets @Chaithra_Achar_ @charanraimr2701… pic.twitter.com/rzmWz3grQe
— Rishab Shetty (@shetty_rishab) September 1, 2023
ಸಿನಿಮಾ ನೋಡಿದ ಬಹುತೇಕರು ರಕ್ಷಿತ್ ಹಾಗೂ ರುಕ್ಮಿಣಿ ವಸಂತ್ರ ಕೆಮಿಸ್ಟ್ರಿಗೆ ಮಾರು ಹೋಗಿದ್ದಾರೆ. ಅದರಲ್ಲಿಯೂ ರುಕ್ಮಿಣಿ ವಸಂತ್ರ ಅದ್ಭುತ ನಟನೆ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಾಧ್ಯಮಗಳ ಮುಂದೆ ಅಭಿಪ್ರಾಯ ಹಂಚಿಕೊಂಡಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಚಂದನವನಕ್ಕೆ ಸಿಕ್ಕಿರುವ ಅದ್ಭುತ ನಟಿ, ಅವರಿಗೆ ಬಹಳ ಉಜ್ವಲವಾದ ಭವಿಷ್ಯವಿದೆ. ಬಹಳ ಎತ್ತರಕ್ಕೆ ಆ ನಟಿ ಹೋಗಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ರಿಷಬ್ ಮಾತ್ರವೇ ಅಲ್ಲದೆ, ಸಿನಿಮಾ ನೋಡಿದ ಹಲವರು ರುಕ್ಮಿಣಿ ಬಗ್ಗೆ ಇದೇ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಸಂಗೀತದ ಬಗ್ಗೆಯೂ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಎರಡನೇ ಭಾಗ ಅಥವಾ ಸೈಡ್ ಬಿ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ರಕ್ಷಿತ್ ಶೆಟ್ಟಿಯೇ ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Fri, 1 September 23