‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ

|

Updated on: Jan 12, 2024 | 6:20 PM

ಅಂದು ಏನು ನಡೆಯಿತು ಎಂಬುದನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿವರಿಸಿದ್ದಾರೆ. ‘ಜನವರಿ 3ರಂದು ಸೆಲೆಬ್ರಿಟಿಗಳು ಕಾಟೇರ ಸಿನಿಮಾವನ್ನು ನೋಡಿಕೊಂಡು ವಾಪಸ್​ ಹೊರಟಾಗ ಲೇಟ್​ ಆಗಿತ್ತು. ಊಟ ಮಾಡಿಕೊಂಡು ಹೋಗಿ ಅಂತ ಎಲ್ಲರಿಗೂ ನಾನೇ ಮನವಿ ಮಾಡಿಕೊಂಡೆ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

‘ಆ ಉದ್ದೇಶ ನಮಗೆ ಇರಲಿಲ್ಲ’: ‘ಕಾಟೇರ’ ಪಾರ್ಟಿ ಕೇಸ್​ ಬಗ್ಗೆ ರಾಕ್​ಲೈನ್​ ಮೊದಲ ಪ್ರತಿಕ್ರಿಯೆ
ರಾಕ್​ಲೈನ್​ ವೆಂಕಟೇಶ್​
Follow us on

ಕೆಲವೇ ದಿನಗಳ ಹಿಂದೆ ‘ಕಾಟೇರ’ (Kaatera) ಸಿನಿಮಾದ ಸೆಲೆಬ್ರಿಟಿ ಶೋ ನಡೆದ ಬಳಿಕ ಚಿತ್ರತಂಡದವರು ಬೆಂಗಳೂರಿನ ಖಾಸಗಿ ಪಬ್​ನಲ್ಲಿ ಪಾರ್ಟಿ ಮಾಡಿದ್ದರು. ಅವಧಿ ಮೀರಿ ಪಾರ್ಟಿ ಮಾಡಿ, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅನೇಕರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು. ‘ಕಾಟೇರ’ ಸಿನಿಮಾದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ (Rockline Venkatesh)​, ನಾಯಕ ನಟ ದರ್ಶನ್​ ಹಾಗೂ ಇತರೆ ಸೆಲೆಬ್ರಿಟಿಗಳಿಗೆ ಸುಬ್ರಹ್ಮಣ್ಯ ನಗರ ಪೊಲೀಸರು ನೋಟಿಸ್​ ನೀಡಿದ್ದರು. ಈ ಪ್ರಕರಣಕ್ಕೆ ​ಸಂಬಂಧಿಸಿದಂತೆ ಇಂದು (ಜ.12) ದರ್ಶನ್​ (Darshan), ರಾಕ್​ಲೈನ್​ ವೆಂಕಟೇಶ್, ಡಾಲಿ ಧನಂಜಯ್, ಚಿಕ್ಕಣ್ಣ ಸೇರಿದಂತೆ ಹಲವರು ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ರಾಕ್​ಲೈನ್​ ವೆಂಕಟೇಶ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದು ಏನು ನಡೆಯಿತು ಎಂಬುದನ್ನು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ವಿವರಿಸಿದ್ದಾರೆ. ‘ಜನವರಿ 3ರಂದು ಸೆಲೆಬ್ರಿಟಿ ಶೋ ಆಯೋಜನೆ ಮಾಡಿದ್ದೆವು. ಆ ಸಂದರ್ಭದಲ್ಲಿ ಚಿತ್ರರಂಗದ ಗಣ್ಯ ವ್ಯಕ್ತಿಗಳನ್ನು ನಾವು ಕರೆಸಿದ್ದೆವು. ಸಿನಿಮಾ ನೋಡಿಕೊಂಡು ವಾಪಸ್​ ಹೊರಟಾಗ ಲೇಟ್​ ಆಗಿತ್ತು. ಊಟ ಮಾಡಿಕೊಂಡು ಹೋಗಿ ಅಂತ ಎಲ್ಲರಿಗೂ ನಾನೇ ಮನವಿ ಮಾಡಿಕೊಂಡೆ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇದನ್ನೂ ಓದಿ: ‘ಹೃದಯಪೂರ್ವಕ ಧನ್ಯವಾದಗಳು ಕರ್ನಾಟಕ’: ‘ಕಾಟೇರ’ ಗೆಲ್ಲಿಸಿದ ಪ್ರೇಕ್ಷಕರಿಗೆ ದರ್ಶನ್​ ಧನ್ಯವಾದ

‘ದರ್ಶನ್​ ಹೊರಟಿದ್ದರು. ಅಭಿಷೇಕ್​, ಸತೀಶ್​, ಧನಂಜಯ್​ ಅವರೆಲ್ಲ ಇದ್ದಾಗ ಜೆಟ್​ ಲ್ಯಾಗ್​ ಪಬ್​ ಮಾಲೀಕರಿಗೆ ನಾನು ಮನವಿ ಮಾಡಿಕೊಂಡೆ. ನಿಮ್ಮ ಹೋಟೆಲ್​ನಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿಕೊಡಿ ಅಂತ ಕೇಳಿಕೊಂಡೆ. ಪಾರ್ಟಿ ಮಾಡಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ. ದರ್ಶನ್​ ಅವರಿಗೆ ಫೋನ್​ ಮಾಡಿದೆ. ಅವರು ಕೂಡ ಬಂದರು. ಅಷ್ಟು ಹೊತ್ತಿಗಾಗಲೇ ಜೆಟ್​ ಲ್ಯಾಗ್​ ಸಿಬ್ಬಂದಿ ಹೊರಟಿದ್ದರು. ಪಾಪ, ಅವರನ್ನು ಮತ್ತೆ ಕರೆಸಿದ್ದರಿಂದ ಅವರು ಊಟ, ತಿಂಡಿ ಕೊಡುವುದು ಲೇಟ್​ ಆಯಿತು’ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್.

‘ಲೇಟ್​ ಆಗಿದ್ದು ಹೊರತುಪಡಿಸಿದರೆ, ಯಾವುದೇ ಚಿಕ್ಕ ಗಲಾಟೆ, ಗಲಭೆ ಕೂಡ ಆಗಿಲ್ಲ. ಊಟ ಮಾಡಿಕೊಂಡು ನಾವು ಹೊರಟಿದ್ದೇವೆ. ಅಕ್ಕ-ಪಕ್ಕದವರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ದರ್ಶನ್​ ಗಮನ ಹರಿಸಿದರು. ಆ ಸಂದರ್ಭದಲ್ಲಿ ಪೊಲೀಸರು ಅಥವಾ ಅಬಕಾರಿ ಅಧಿಕಾರಿಗಳು ನಮ್ಮನ್ನು ಏನೂ ಕೇಳಲಿಲ್ಲ. ಇಷ್ಟೇ ನಡೆದಿದ್ದು. ಅಬಕಾರಿ ಇಲಾಖೆಯ ನಿಯಮಗಳು ಉಲ್ಲಂಘನೆ ಆಗಿದ್ದರೆ ನಾವು ತಲೆ ಬಾಗಲೇಬೇಕು. ಅದರಲ್ಲಿ ಎರಡನೇ ಮಾತಿಲ್ಲ. ಆದರೆ ನಾವು ಗ್ರಾಹಕರು. ಮೊದಲ ಸಲ ಗ್ರಾಹಕರಿಗೆ ನೋಟಿಸ್​ ಕೊಟ್ಟು ಠಾಣೆಗೆ ಕರೆಸಿದ್ದಾರೆ. ಇದು ಎಷ್ಟು ಸರಿಯೋ ನಮಗೆ ಗೊತ್ತಿಲ್ಲ’ ಎಂದು ರಾಕ್​ಲೈನ್​ ವೆಂಕಟೇಶ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ