Kiran Raj: ಜುಲೈ 5ರಂದು ‘ಕನ್ನಡತಿ’ ಹೀರೋ ಕಿರಣ್ ರಾಜ್ ಜನ್ಮದಿನಕ್ಕೆ ಸಿಗಲಿದೆ ‘ರಾನಿ’ ಟೀಸರ್ ಗಿಫ್ಟ್
Ronny Kannada Movie: ಸೆಟ್ಟೇರಿದ ದಿನದಿಂದಲೂ ‘ರಾನಿ’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ ಈ ಸಿನಿಮಾದಲ್ಲಿ ಒಂದಷ್ಟು ವಿಶೇಷತೆಗಳಿವೆ.
ಕಿರುತೆರೆಯಲ್ಲಿ ಮಿಂಚಿದ ಬಳಿಕ ನಟ ಕಿರಣ್ ರಾಜ್ (Kiran Raj) ಅವರು ಹಿರಿತೆರೆಯಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ಕನ್ನಡತಿ’ ಧಾರಾವಾಹಿಯಲ್ಲಿ ಅವರು ಹೀರೋ ಆಗಿ ನಟಿಸಿದ್ದರು. ಇತ್ತೀಚೆಗೆ ಆ ಸೀರಿಯಲ್ ಅಂತ್ಯವಾಯ್ತು. ಈಗ ಕಿರಣ್ ರಾಜ್ ಅವರು ಸಂಪೂರ್ಣವಾಗಿ ಸಿನಿಮಾಗಳ ಮೇಲೆ ಗಮನ ಹರಿಸಿದ್ದಾರೆ. ಅವರು ನಟಿಸುತ್ತಿರುವ ‘ರಾನಿ’ ಸಿನಿಮಾ (Ronny Kannada Movie) ಹಲವು ಕಾರಣಗಳಿಂದಾಗಿ ನಿರೀಕ್ಷೆ ಸೃಷ್ಟಿ ಮಾಡಿದೆ. ಕಿರುತೆರೆ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಕಿರಣ್ ರಾಜ್ ಅವರು ದೊಡ್ಡ ಪರದೆಯಲ್ಲೂ ಮೋಡಿ ಮಾಡುವ ಪ್ರಯತ್ನದಲ್ಲಿದ್ದಾರೆ. ಅವರ ಜನ್ಮದಿನದ (Kiran Raj Birthday) ಪ್ರಯುಕ್ತ ‘ರಾನಿ’ ಟೀಸರ್ ಬಿಡುಡೆ ಆಗಲಿದೆ. ಆ ದಿನಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ.
ಸೆಟ್ಟೇರಿದ ದಿನದಿಂದಲೂ ‘ರಾನಿ’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಟೈಟಲ್ ಹಾಗೂ ಪೋಸ್ಟರ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ ಈ ಸಿನಿಮಾದಲ್ಲಿ ಒಂದಷ್ಟು ವಿಶೇಷತೆಗಳಿವೆ. ಈ ಸಿನಿಮಾದ ಹೀರೋ ಕಿರಣ್ ರಾಜ್ ಅವರು ದುಬೈಗೆ ಹೋಗಿ 13,000 ಅಡಿ ಎತ್ತರದಿಂದ ಸ್ಕೈಡೈವ್ ಮಾಡುವ ಮೂಲಕ ಚಿತ್ರದ ಶೀರ್ಷಿಕೆ ಅನಾವರಣ ಮಾಡಿದ್ದರು. ಅವರ ಈ ಸಾಹಸ ಕಂಡು ಅಭಿಮಾನಿಗಳು ಶಹಭಾಷ್ ಎಂದಿದ್ದರು. ಆನಂತರ ಬಿಡುಗಡೆ ಆದ ‘ರಾನಿ’ ಪೋಸ್ಟರ್ನಿಂದ ಇನ್ನಷ್ಟು ಹೈಪ್ ಹೆಚ್ಚಿತ್ತು. ಹೀಗೆ ಟೀಸರ್ ಮೂಲಕ ಕುತೂಹಲ ಹೆಚ್ಚಿಸಲಾಗುವುದು.
ಜುಲೈ 5ರಂದು ಕಿರಣ್ ರಾಜ್ ಅವರ ಹುಟ್ಟುಹಬ್ಬ. ಆ ದಿನವನ್ನು ಸಂಭ್ರಮದಿಂದ ಆಚರಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆ ಪ್ರಯುಕ್ತ ಅಂದು ‘ರಾನಿ’ ಸಿನಿಮಾ ಟೀಸರ್ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಕಿರಣ್ ರಾಜ್ ಅವರ ಗೆಟಪ್ ಗಮನ ಸೆಳೆಯುತ್ತಿವೆ. ತುಂಬ ಮಾಸ್ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಗುರುತೇಜ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಒಂದು ಗಟ್ಟಿ ಕಥಾಹಂದರದೊಂದಿಗೆ ಆ್ಯಕ್ಷನ್-ಕಮರ್ಷಿಯಲ್ ಸಿನಿಮಾ ಮಾಡಿದ್ದೇನೆ. ಇದೊಂದು ಗ್ಯಾಂಗ್ಸ್ಟರ್ ಚಿತ್ರವಾದರೂ ಕುಟುಂಬ ಸಮೇತವಾಗಿ ನೋಡುವಂತಹ ಭಾವನಾತ್ಮಕ ವಿಚಾರಗಳು ಈ ಸಿನಿಮಾದಲ್ಲಿ ಇವೆ’ ಎಂದು ನಿರ್ದೇಶಕ ಗುರುತೇಜ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Kiran Raj: ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್ ಈಗ ‘ಶೇರ್’; ಸೆಟ್ಟೇರಿತು ಹೊಸ ಸಿನಿಮಾ
ಅನೇಕ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರವಿಶಂಕರ್, ಉಗ್ರಂ ರವಿ, ಮೈಕೋ ನಾಗರಾಜ್, ಬಿ. ಸುರೇಶ, ಉಗ್ರಂ ಮಂಜು, ಮಂಡ್ಯ ರಮೇಶ್, ಸೂರ್ಯ ಕುಂದಾಪುರ, ಸುಜಯ್ ಶಾಸ್ತ್ರಿ, ಗಿರೀಶ್ ಹೆಗ್ಡೆ, ಧರ್ಮಣ್ಣ ಕಡೂರು ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ. ಸಮೀಕ್ಷಾ, ಅಪೂರ್ವಾ, ರಾಧ್ಯಾ ಅವರು ಈ ಚಿತ್ರದ ಮೂವರು ನಾಯಕಿಯರು. 3 ಡಿಫರೆಂಟ್ ಪಾತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ ಫ್ಯಾನ್ಸ್ಗೆ ಡಬಲ್ ಧಮಾಕಾ; ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ನಟ
ಇದೇ ವರ್ಷ ಡಿಸೆಂಬರ್ ತಿಂಗಳಲ್ಲಿ ‘ರಾನಿ’ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ರಾಘವೇಂದ್ರ ಬಿ. ಕೋಲಾರ್ ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೆಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸಚಿನ್ ಬಸ್ರೂರ್ ಅವರು ಹಿನ್ನಲೆ ಸಂಗೀತ ನೀಡುತ್ತಿದ್ದಾರೆ. ‘ಸ್ಟಾರ್ ಕ್ರಿಯೇಷನ್’ ಬ್ಯಾನರ್ ಮೂಲಕ ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ್ ಹೆಗ್ಡೆ ಅವರು ನಿರ್ಮಾಣ ಮಾಡುತ್ತಿರುವ ಚೊಚ್ಚಲ ಚಿತ್ರ ಇದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.