ವರದನಾಯಕ ಚಿತ್ರದ ನಟಿ ಸಮೀರಾ ರೆಡ್ಡಿಯ ಇಡೀ ಕುಟುಂಬಕ್ಕೆ ಕೊರೊನಾ ಪಾಸಿಟಿವ್
ಚಿಕಿತ್ಸೆ ಪಡೆಯಲು ಆರಂಭಿಸಿದ್ದೇವೆ. ಹಬೆ ತೆಗೆದುಕೊಳ್ಳುತ್ತಿದ್ದೇವೆ. ಉಪ್ಪು ನೀರನ್ನು ಮುಕ್ಕಳಿಸುತ್ತಿದ್ದೇವೆ, ಪ್ರಾಣಾಯಾಮ ಮಾಡುತ್ತಿದ್ದೇವೆ. ಇದೆಲ್ಲದರ ಜೊತೆಗೆ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇವೆ ಎಂದು ಸಮೀರಾ ರೆಡ್ಡಿ ಹೇಳಿದ್ದಾರೆ.
ಮಹಾಮಾರಿ ಕೊರೊನಾ ಕಾಟಕ್ಕೆ ಎಲ್ಲರ ಜೀವನ ಅಸ್ತವ್ಯಸ್ತ ಆಗುತ್ತಿದೆ. ಸೆಲೆಬ್ರಿಟಿಗಳಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರಿಗೂ ಕೊವಿಡ್ ತೊಂದರೆ ಕೊಡುತ್ತಿದೆ. ಇತ್ತೀಚೆಗಂತೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ವೈರಸ್ ತಗುಲುತ್ತಿದೆ. ಪವನ್ ಕಲ್ಯಾಣ್, ಅಕ್ಷಯ್ ಕುಮಾರ್, ಸೋನು ಸೂದ್ ಸೇರಿದಂತೆ ಅನೇಕರಿಗೆ ಪಾಸಿಟಿವ್ ವರದಿ ಬಂದಿದೆ. ಆ ಸಾಲಿಗೆ ನಟಿ ಸಮೀರಾ ರೆಡ್ಡಿ ಕೂಡ ಸೇರ್ಪಡೆ ಆಗಿದ್ದಾರೆ.
ಕನ್ನಡದ ವರದನಾಯಕ ಸಿನಿಮಾದಲ್ಲಿ ಸುದೀಪ್ ಜೋಡಿಯಾಗಿ ಸಮೀರಾ ರೆಡ್ಡಿ ನಟಿಸಿದ್ದರು. ಆ ಮೂಲಕ ಅವರು ಕನ್ನಡದ ಸಿನಿಪ್ರಿಯರಿಗೆ ಪರಿಚಿತರಾದರು. ಸದ್ಯ ಸಿನಿಮಾಗಳಿಂದ ದೂರ ಉಳಿದುಕೊಂಡಿರುವ ಅವರು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಈಗ ತಮಗೆ ಕೊರೊನಾ ವೈರಸ್ ತಗುಲಿದೆ ಎಂಬುದನ್ನು ಖಚಿತ ಪಡಿಸಿದ್ದಾರೆ.
ಸಮೀರಾ ರೆಡ್ಡಿ ಪತಿ ಅಕ್ಷಯ್, ಮಕ್ಕಳಾದ ಹನ್ಸ್ ಮತ್ತು ನೈರಾಗೂ ಕೊರೊನಾ ಪಾಸಿಟಿವ್ ಆಗಿದೆ. ‘ಕಳೆದ ವಾರ ಹನ್ಸ್ಗೆ ಹೆಚ್ಚು ಜ್ವರ ಇತ್ತು. 4 ದಿನಗಳ ಕಾಲ ಮುಂದುವರಿಯಿತು. ಅದು ಸಹಜ ಎಂದು ಅನಿಸಲಿಲ್ಲ. ಹಾಗಾಗಿ ಟೆಸ್ಟ್ ಮಾಡಿಸಿದೆವು. ಆಗ ಕೊವಿಡ್-19 ಪಾಸಿಟಿವ್ ಎಂಬುದು ಗೊತ್ತಾಯಿತು. ನಂತರ ನನಗೆ ತುಂಬ ಆತಂಕ ಆಯಿತು. ಇದನ್ನು ಎದುರಿಸಲು ನೀವು ಎಷ್ಟೇ ತಯಾರಾಗಿದ್ದೀರಿ ಎಂದುಕೊಂಡರೂ ಇಂಥ ಪರಿಸ್ಥಿತಿಯಲ್ಲಿ ಅದು ನಿಜವಾಗಿರುವುದಿಲ್ಲ’ ಎಂದು ಸಮೀರಾ ಹೇಳಿದ್ದಾರೆ.
‘ನಂತರ ಮಗಳು ನೈರಾಗೂ ರೋಗ ಲಕ್ಷಣಗಳು ಕಾಣಿಸಿಕೊಂಡವು. ಜ್ವರ ಇರಲಿಲ್ಲ. ಕೊರೊನಾ ಎರಡನೇ ಅಲೆ ಬಗ್ಗೆ ನಾವು ಗಮನ ಹರಿಸಬೇಕಾದ್ದು ಏನೆಂದರೆ ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ರೋಗ ಲಕ್ಷಣಗಳು ಇಲ್ಲದಿದ್ದರೂ ಕೂಡ ಬೇರೆಯವರಿಂದ ನೀವು ನಿಮ್ಮ ಮಕ್ಕಳನ್ನು ಐಸೊಲೇಟ್ ಮಾಡಬೇಕು’ ಎಂದು ಸಮೀರಾ ಹೇಳಿದ್ದಾರೆ.
View this post on Instagram
‘ಅದೃಷ್ಟವಶಾತ್ ನನ್ನ ಅತ್ತೆಗೆ ಸೋಂಕು ತಗುಲಿಲ್ಲ. ಅವರಿಗೆ ನೆಗೆಟಿವ್ ವರದಿ ಬಂದಿದೆ. ನನಗೆ ಮತ್ತು ಅಕ್ಷಯ್ಗೆ ಪಾಸಿಟಿವ್ ಆದ ಬಳಿಕ ಮಕ್ಕಳಿಗೂ ಬಂತು. ಚಿಕಿತ್ಸೆ ಪಡೆಯಲು ಆರಂಭಿಸಿದ್ದೇವೆ. ಹಬೆ ತೆಗೆದುಕೊಳ್ಳುತ್ತಿದ್ದೇವೆ. ಉಪ್ಪು ನೀರನ್ನು ಮುಕ್ಕಳಿಸುತ್ತಿದ್ದೇವೆ, ಪ್ರಾಣಾಯಾಮ ಮಾಡುತ್ತಿದ್ದೇವೆ. ಇದೆಲ್ಲದರ ಜೊತೆಗೆ ವೈದ್ಯರ ಸಲಹೆಯನ್ನು ಪಾಲಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವು ಬುದ್ಧಿವಂತಿಕೆಯಿಂದ ಇರಬೇಕು. ಭಯ, ನೆಗೆಟಿವ್ ಯೋಚನೆ ಬೇಡ. ಎಚ್ಚರಿಕೆಯಿಂದಿರಿ’ ಎಂದು ಸಮೀರಾ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ: ಸಾಧುಕೋಕಿಲ ಎಚ್ಚರಿಕೆ