ಕೊರೊನಾ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ: ಸಾಧುಕೋಕಿಲ ಎಚ್ಚರಿಕೆ

ಕೊರೊನಾ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ: ಸಾಧುಕೋಕಿಲ ಎಚ್ಚರಿಕೆ
ಸಾಧು ಕೋಕಿಲ

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಾಧುಕೋಕಿಲ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರ ಅಣ್ಣ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು.

Madan Kumar

| Edited By: Apurva Kumar Balegere

Apr 19, 2021 | 1:38 PM

ಕೊರೊನಾ ವೈರಸ್​ ಕಾಟಕ್ಕೆ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಪರಿಸ್ಥಿತಿ ಚಿಂತಾಜನಕ ಆಗಿದೆ. ಆಸ್ಪತ್ರೆಗಳಲ್ಲಿ ಬೆಡ್​ ಸಿಗದೇ ಸಾವಿರಾರು ಜನರು ಪರದಾಡುತ್ತಿದ್ದಾರೆ. ದಿನ ಕಳೆದಂತೆಲ್ಲ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ನಟ ಸಾಧುಕೋಕಿಲ ಹೇಳಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಾಧುಕೋಕಿಲ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಅವರ ಅಣ್ಣ ಮಗನಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಹಾಗಾಗಿ ಇದರ ಸಮಸ್ಯೆ ಏನು ಎಂಬುದನ್ನು ಅವರು ಹತ್ತಿರದಿಂದ ಕಂಡಿದ್ದಾರೆ. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ನಮ್ಮ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈಗ ನೆಗೆಟಿಗ್ ಆಗಿದೆ. ಆದರೂ ಅವನಿಗೆ ಉಸಿರಾಟ ತೊಂದರೆ ಆಗುತ್ತಿದೆ. ಒಬ್ಬ ಸೆಲೆಬ್ರಿಟಿಯಾಗಿ ನಾನು ಒಂದು ಆಕ್ಸಿಜನ್ ಪಡಿಯೋಕೆ ಪರದಾಡಿದ್ದೇನೆ. ದಯವಿಟ್ಟು ಎಲ್ಲರೂ ಹುಷಾರಾಗಿರಿ. ಕೊರೊನಾ ವೈರಸ್​ ಬಗ್ಗೆ ಟಿವಿಯಲ್ಲಿ ತೋರಿಸೋದು ಸುಳ್ಳು ಅಂದುಕೊಳ್ಳಬೇಡಿ. ಹಬ್ಬ ಹರಿದಿನ, ಜಾತ್ರೆ ಎಲ್ಲಾ ಬಿಟ್ಟು ಹುಷಾರಾಗಿರಿ’ ಎಂದು ಸಾಧು ಕೋಕಿಲ ಕಿವಿಮಾತು ಹೇಳಿದ್ದಾರೆ.

ಸೆಲೆಬ್ರಿಟಿಗಳ ವಲಯದಲ್ಲೂ ಕೊರೊನಾ ಹಬ್ಬುತ್ತಿದೆ. ಇತ್ತೀಚೆಗಷ್ಟೇ ‘ಕೆಮಿಸ್ಟ್ರೀ ಆಫ್​ ಕರಿಯಪ್ಪ’ ಸಿನಿಮಾದ ನಿರ್ಮಾಪಕ ಡಾ. ಡಿ.ಎಸ್​. ಮಂಜುನಾಥ್​ ನಿಧನರಾದರು. ನಟಿ ಸುನೇತ್ರಾ ಪಂಡಿತ್​ ಅವರ ಸಹೋದರಿ ಕೂಡ ಕೊರೊನಾದಿಂದ ಮೃತರಾದರು. ಈ ಎಲ್ಲಾ ಘಟನೆಗಳು ಆತಂಕ ಮೂಡಿಸುತ್ತಿವೆ. ಈ ಸಂದರ್ಭದಲ್ಲಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಸಾಧುಕೋಕಿಲ ಹೇಳಿದ್ದಾರೆ.

ಕಾಲಿವುಡ್​ ನಟ ವಿವೇಕ್​ ಅವರು ಏ.17ರಂದು ನಿಧನರಾದರು. ಅವರ ಬಗ್ಗೆ ಸಾಧುಕೋಕಿಲ ಮಾತನಾಡಿದ್ದಾರೆ. ವಿವೇಕ್​ ಅವರನ್ನು ನಾನು ಅನುಸರಿಸುತ್ತಿದ್ದೆ. ಅವರಿಗೆ ಯಾವುದೇ ಕೆಟ್ಟ ಅಭ್ಯಾಸ ಇರಲಿಲ್ಲ. ತುಂಬಾ ಒಳ್ಳೆಯ ಮನುಷ್ಯರಾಗಿದ್ದರು. ಅಂಥವರಿಗೆ ಹೀಗೆ ಆಗಿದ್ದು ಬೇಸರ ಮೂಡಿಸಿದೆ’ ಎಂದು ಸಾಧುಕೋಕಿಲ ಹೇಳಿದ್ದಾರೆ. ಕೊವಿಡ್​ ಲಸಿಕೆ ಪಡೆದ ಮರುದಿನವೇ ವಿವೇಕ್​ ಅವರಿಗೆ ಹೃದಯಾಘಾತ ಆಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಕೊನೆಯುಸಿರೆಳೆದರು.

ಇದನ್ನೂ ಓದಿ: ಸಾಧು ಕೋಕಿಲ ಅಂದ್ರೆ ಕಾಮಿಡಿ ಅಷ್ಟೇ ಅಲ್ಲ! ಅಪ್ರತಿಮ ಕಲಾವಿದನಿಗೆ ಇದೆ ಇನ್ನೂ 4 ಟ್ಯಾಲೆಂಟ್​ಗಳು

Follow us on

Related Stories

Most Read Stories

Click on your DTH Provider to Add TV9 Kannada