Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್​ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು

| Updated By: ರಾಜೇಶ್ ದುಗ್ಗುಮನೆ

Updated on: Jun 15, 2021 | 2:35 PM

Sanchari Vijay Death: ಸಂಚಾರಿ ವಿಜಯ್​ ನಟನೆಯ ‘ತಲೆದಂಡ’ ಸಿನಿಮಾದ ಟೀಸರ್​ ವೈರಲ್​ ಆಗುತ್ತಿದೆ. ಯಾಕೆಂದರೆ, ಅದರಲ್ಲಿ ಅವರ ಅಭಿನಯ ಕಂಡವರಿಗೆ ಆ ಪರಿ ಅಚ್ಚರಿ ಆಗುತ್ತಿದೆ.

Sanchari Vijay: ಸಂಚಾರಿ ವಿಜಯ್ ನಟನೆಯ ‘ತಲೆದಂಡ’ ಟೀಸರ್​ ನೋಡಿದರೆ ಕಲ್ಲು ಹೃದಯವೂ ಕರಗಲೇಬೇಕು
ಸಂಚಾರಿ ವಿಜಯ್​
Follow us on

ನಟ ಸಂಚಾರಿ ವಿಜಯ್​ ಅವರು ನಿಧನರಾಗಿರುವುದು ಸ್ಯಾಂಡಲ್​ವುಡ್​ ಪಾಲಿಗೆ ಬಹುದೊಡ್ಡ ನಷ್ಟ. ಅಭಿಮಾನಿಗಳು ಎಂದೂ ಮರೆಯಲಾಗದಂತಹ ಕೆಲವು ಪಾತ್ರಗಳಲ್ಲಿ ಅವರು ಅಭಿನಯಿಸಿದ್ದರು. ‘ನಾನು ಅವನಲ್ಲ ಅವಳು’, ‘ಹರಿವು’ ಮುಂತಾದ ಸಿನಿಮಾಗಳಲ್ಲಿ ಅವರ ನಟನೆ ಕಂಡರೆ ಎಂಥವರೂ ಭೇಷ್​ ಎನ್ನಲೇಬೇಕು. ಇನ್ನೂ ಅನೇಕ ಮಹತ್ವಾಕಾಂಕ್ಷಿ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದರು. ಅಷ್ಟರಲ್ಲಾಗಲೇ ಕಾಲನ ಕರೆ ಬಂತು. ವಿಜಯ್​ ನಟಿಸಿದ್ದ ‘ತಲೆದಂಡ’ ಸಿನಿಮಾದ ಟೀಸರ್​ ನೋಡಿದರೆ ಅವರು ಎಂಥ ಕಲಾವಿದ ಎಂಬುದು ಮತ್ತೊಮ್ಮೆ ತಿಳಿಯುತ್ತಿದೆ.

ರಸ್ತೆ ಅಪಘಾತದಿಂದ ಸಂಚಾರಿ ವಿಜಯ್​ ನಿಧನರಾಗುತ್ತಿದ್ದಂತೆಯೇ ಎಲ್ಲೆಲ್ಲೂ ಶೋಕ ಮಡುಗಟ್ಟಿದೆ. ಅದರ ಜೊತೆಗೆ ಅವರ ನಟನೆಯ ‘ತಲೆದಂಡ’ ಸಿನಿಮಾದ ಟೀಸರ್​ ಕೂಡ ವೈರಲ್​ ಆಗುತ್ತಿದೆ. ಯಾಕೆಂದರೆ, ಅದರಲ್ಲಿ ಅವರ ಅಭಿನಯ ಕಂಡವರಿಗೆ ಆ ಪರಿ ಅಚ್ಚರಿ ಆಗುತ್ತಿದೆ. ಈವರೆಗೂ ಮಾಡಿರದಂತಹ ಭಿನ್ನವಾದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಮರಗಳನ್ನು ರಕ್ಷಿಸಬೇಕು, ಪರಿಸರ ಉಳಿಸಬೇಕು ಎಂಬ ಕಾಳಜಿ ಇಟ್ಟುಕೊಂಡು ಹೋರಾಡುವ ಬುದ್ಧಿಮಾಂದ್ಯನ ಪಾತ್ರದಲ್ಲಿ ಸಂಚಾರಿ ವಿಜಯ್​ ನಟಿಸಿದ್ದರು. ಆದರೆ ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಎಷ್ಟು ಅದ್ಭುತವಾಗಿ ನಟಿಸಿರಬಹುದು ಎಂಬುದಕ್ಕೆ ಈ ಒಂದು ಚಿಕ್ಕ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ಸಿನಿಮಾವನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆ ಅವರ ಅಭಿಮಾನಿಗಳ ಮನದಲ್ಲಿ ಮೂಡಿದೆ. ಆದರೆ ಅದನ್ನು ಹೇಳಿಕೊಳ್ಳೋಣ ಎಂದರೆ ಇಂದು ನಮ್ಮೊಂದಿಗೆ ಸಂಚಾರಿ ವಿಜಯ್​ ಇಲ್ಲ. ಟೀಸರ್​ ನೋಡಿದ ಎಲ್ಲರೂ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಇದನ್ನು ಹಂಚಿಕೊಳ್ಳುತ್ತಿದ್ದಾರೆ.

ತಲೆದಂಡ ಮಾತ್ರವಲ್ಲದೆ ಅವಸ್ಥಾಂತರ, ಲಂಕೆ, ಮೇಲೊಬ್ಬ ಮಾಯಾವಿ ಮುಂತಾದ ಸಿನಿಮಾಗಳಲ್ಲಿ ಸಂಚಾರಿ ವಿಜಯ್​ ನಟಿಸುತ್ತಿದ್ದರು. ಇನ್ನೂ ಘೋಷಣೆ ಆಗಿರದ ಹಲವಾರು ಪ್ರಾಜೆಕ್ಟ್​ಗಳು ಅವರ ಕೈಯಲ್ಲಿ ಇದ್ದವು. ಆದರೆ ಅವುಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಈ ಜೀವನದ ಸಂಚಾರವನ್ನು ಮುಗಿಸಿ ಇಹಲೋಕ ತ್ಯಜಿಸಿದ್ದಾರೆ ಸಂಚಾರಿ ವಿಜಯ್​.


ಶನಿವಾರ (ಜೂ.12) ರಾತ್ರಿ ಬನ್ನೇರುಘಟ್ಟ ರಸ್ತೆಯಲ್ಲಿ ಅವರಿಗೆ ಆಕ್ಸಿಡೆಂಟ್​ ಆಗಿತ್ತು. ಸ್ನೇಹಿತ ನವೀನ್​ ಅವರ ಬೈಕ್​ನಲ್ಲಿ ಹಿಂಬದಿ ಕುಳಿತು ವಿಜಯ್​ ಪ್ರಯಾಣ ಮಾಡುತ್ತಿದ್ದರು. ಅಪಘಾತದ ತೀವ್ರತೆಗೆ ಅವರು ತಲೆ ಮತ್ತು ತೊಡೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಆದ ಪರಿಣಾಮ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಕಡೆಗೂ ಚಿಕಿತ್ಸೆಗೆ ಸ್ಪಂದಿಸದೇ ಅವರು ನಿಧನರಾದರು.

ಇದನ್ನೂ ಓದಿ:

Sanchari Vijay: ಸಂಚಾರಿ ವಿಜಯ್​ಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ನಾನು ಅವನಲ್ಲ ಅವಳು’ ಚಿತ್ರದ ತೆರೆ ಹಿಂದಿನ ಇಂಟರೆಸ್ಟಿಂಗ್​ ಕಥೆ

Sanchari Vijay Death: ‘ಕನ್ನಡಿಗರು ಸಂಚಾರಿ ವಿಜಯ್​ ಅವರನ್ನು ಕಡೆಗಣಿಸಿದರು’; ನೋವಿನಿಂದ ಮಾತನಾಡಿದ್ದ ದರ್ಶನ್​