ನಟ ಸಂಜಯ್ ದತ್ (Sanjay Dutt) ಅವರು ಬಾಲಿವುಡ್ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಇತ್ತೀಚೆಗೆ ಅವರು ದಕ್ಷಿಣ ಭಾರತದಲ್ಲಿ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ‘ಕೆಜಿಎಫ್ 2’ನಲ್ಲಿ (KGF Chapter 2) ಅಧೀರನಾಗಿ ಸಂಜಯ್ ದತ್ ಗಮನ ಸೆಳೆದಿದ್ದರು. ಈಗ ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಅಭಿನಯದ ‘ಕೆಡಿ’ ಸಿನಿಮಾ ಮೂಲಕ ಮತ್ತೆ ದಕ್ಷಿಣಕ್ಕೆ ಮರಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಸಿದ್ಧವಾಗುತ್ತಿರುವ ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮಕ್ಕೆ ಸಂಜಯ್ ದತ್ ಕೂಡ ಆಗಮಿಸಿದ್ದರು. ಈ ವೇಳೆ ವೇದಿಕೆ ಮೇಲೆ ಮಾತನಾಡುತ್ತಾ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಅವರು ಅಪಾರ ಪ್ರೀತಿ ವ್ಯಕ್ತಪಡಿಸಿದ್ದಾರೆ.
‘ನಾನು ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದೇನೆ. ನನಗೆ ರಾಜಮೌಳಿ ಒಳ್ಳೆಯ ಗೆಳೆಯ. ದಕ್ಷಿಣ ಭಾರತದಲ್ಲಿ ಮಾಡುವ ಸಿನಿಮಾಗಳಲ್ಲಿ ಸಾಕಷ್ಟು ಎನರ್ಜಿ, ಪ್ರೀತಿ ಹಾಗೂ ಪ್ಯಾಷನ್ ಕಾಣುತ್ತದೆ. ಇಲ್ಲಿನವರು ಹೀರೋಯಿಸಂ ಅನ್ನು ಸೆಲೆಬ್ರೇಟ್ ಮಾಡುತ್ತಾರೆ’ ಎಂದಿದ್ದಾರೆ ಸಂಜಯ್ ದತ್.
‘ಮುಂಬೈನವರು (ಬಾಲಿವುಡ್) ನಾವು ನಮ್ಮ ತನವನ್ನು ಕಳೆದುಕೊಳ್ಳಬಾರದು. ಯಶ್, ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲ್ಮ್ಸ್ ಜತೆ ಕೆಲಸ ಮಾಡಿದ್ದು ಖುಷಿ ಇದೆ. ಈಗ ಧ್ರುವ ಜತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ’ ಎಂದು ಸಂಜಯ್ ದತ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
‘ಜೋಗಿ’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಪ್ರೇಮ್ಗೆ ಇದೆ. ‘ಅದ್ದೂರಿ’ ಅಂತಹ ಹಿಟ್ ಚಿತ್ರಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದಾರೆ ಧ್ರುವ. ಇಬ್ಬರೂ ಒಂದಾಗಿರುವ ಕಾರಣಕ್ಕೆ ಕುತೂಹಲ ಹೆಚ್ಚಿದೆ. ಈ ಚಿತ್ರದ ಮೂಲಕ ಸಂಜಯ್ ದತ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ: ‘ಕೆಜಿಎಫ್ 2’ ಚಿತ್ರಕ್ಕಾಗಿ ಯಶ್, ಸಂಜಯ್ ದತ್, ರವೀನಾ, ಪ್ರಶಾಂತ್ ನೀಲ್ ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ವಿವರ
ಧ್ರುವ ಸರ್ಜಾ ‘ಮಾರ್ಟಿನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಮಾರ್ಟಿನ್’ ಚಿತ್ರಕ್ಕೆ ಎ.ಪಿ. ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ. ಧ್ರುವ ನಟನೆಯ ಮೊದಲ ಸಿನಿಮಾ ‘ಅದ್ದೂರಿ’ಗೆ ಆ್ಯಕ್ಷನ್-ಕಟ್ ಹೇಳಿದ್ದ ಅವರು ಈಗ ಮತ್ತೊಮ್ಮೆ ಧ್ರುವ ಜತೆ ಕೈ ಜೋಡಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಬೇಕಿತ್ತು. ಆದರೆ, ರಿಲೀಸ್ ದಿನಾಂಕ ವಿಳಂಬ ಆಗಿದೆ.