‘ದಿನಕ್ಕೆ 16 ಮಾತ್ರೆ ತೆಗೆದುಕೊಳ್ಳುತ್ತಿದ್ದೆ’; ಹೇರ್ ಸ್ಯಾಂಪಲ್ನ ವರದಿ ಬಳಿಕ ಎಲ್ಲವನ್ನೂ ವಿವರಿಸಿದ ನಟಿ ಸಂಜನಾ ಗಲ್ರಾನಿ
Sanjjanaa Galrani: ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಜನಾ ಗಲ್ರಾನಿ ಮೌನ ಮುರಿದಿದ್ದಾರೆ. ತಮ್ಮ ಹೇರ್ ಸ್ಯಾಂಪಲ್ನ ವರದಿ ಪಾಸಿಟಿವ್ ಬಂದಿರುವುದರ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ.
ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಮಾದಕ ವಸ್ತು ಪ್ರಕರಣದಲ್ಲಿ ಅವರು ಆರೋಪಿಗಳಾಗಿದ್ದು, ಸದ್ಯ ಜಾಮೀನಿನ ಮೇಲೆ ಜೈಲಿನಿಂದ ಹೊರಗಿದ್ದಾರೆ. ಈ ನಡುವೆ ಅವರ ಹೇರ್ ಸ್ಯಾಂಪಲ್ನ ವರದಿ ಬಂದಿದ್ದು, ಈ ನಟಿಯರು ಡ್ರಗ್ಸ್ ಸೇವಿಸಿದ್ದರು ಎಂಬುದು ಖಚಿತ ಆದಂತಾಗಿದೆ. ಆದ್ದರಿಂದ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ ಮತ್ತೆ ಮುನ್ನೆಲೆಗೆ ಬರುತ್ತಿದೆ. ಪದೇಪದೇ ಇದೇ ವಿಚಾರ ಚರ್ಚೆ ಆಗುತ್ತಿರುವುದು ಸಂಜನಾಗೆ ಬೇಸರ ತರಿಸಿದೆ. ಆ ಕುರಿತು ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಇದೇ ಮೊದಲ ಬಾರಿಗೆ ಸಂಜನಾ ಗಲ್ರಾನಿ ಮೌನ ಮುರಿದಿದ್ದಾರೆ. ತಮ್ಮ ವರದಿ ಪಾಸಿಟಿವ್ ಬಂದಿರುವುದರ ಬಗ್ಗೆ ಅವರು ಅನಿಸಿಕೆ ಹಂಚಿಕೊಂಡಿದ್ದಾರೆ. ‘ನೋವು ನಿವಾರಕ ಮಾತ್ರೆ, ನಿದ್ರೆ ಮಾತ್ರೆ ಸೇರಿದಂತೆ ನಾನು ಪ್ರತಿದಿನ 16 ಮಾತ್ರೆಗಳನ್ನು ಸೇವಿಸುತ್ತಿದ್ದೆ. ಈ ಪ್ರಕರಣ ಶುರುವಾದಾಗಿನಿಂದ ನಿದ್ರಾಹೀನತೆ ಮತ್ತು ಮಾನಸಿಕ ಅನಾರೋಗ್ಯದ ಕಾರಣ ವೈದ್ಯರನ್ನು ಭೇಟಿ ಮಾಡುತ್ತಿದ್ದೆ. ಮನೆಗೆ ಬಂದ ತಕ್ಷಣ ನನಗೆ ಶಸ್ತ್ರ ಚಿಕಿತ್ಸೆ ಆಯಿತು’ ಎಂದು ಅವರು ಬರೆದುಕೊಂಡಿದ್ದಾರೆ.
‘ಅಳು ನಿಲ್ಲಿಸುವುದಕ್ಕಾಗಿ ಮತ್ತು ನಿದ್ರೆ ಬರಲಿ ಎಂದು ನನಗೆ ಹೆಚ್ಚು ಡೋಸೇಜ್ ಇರುವ ಮೂಡ್ ಎಲಿವೇಟರ್ಗಳನ್ನು ನೀಡಿದ್ದರು. ಮೂರು ತಿಂಗಳ ಕಾಲ ಪ್ರತಿ ದಿನ ನಾನು ಗಂಟೆಗಟ್ಟಲೆ ಅಳುತ್ತಿದ್ದೆ. ಕೆಮಿಕಲ್ಗಳನ್ನು ಒಳಗೊಂಡ ಈ ಔಷಧಿಗಳನ್ನು ನಾನು ಸೇವಿಸಿರುವುದಕ್ಕೆ ದಾಖಲೆ ಇದೆ. ಹಾಗಾಗಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ವಾಸಿಟಿವ್ ಅಥವಾ ನೆಗೆಟಿವ್ ಎಂಬುದು ದೊಡ್ಡ ವಿಚಾರ ಅಲ್ಲ. ನ್ಯಾಯಾಲಯದ ಮೇಲೆ ನಮಗೆ ನಂಬಿಕೆ ಇದೆ. ನ್ಯಾಯ ಸಿಗಲಿದೆ’ ಎಂದು ಸಂಜನಾ ಗಲ್ರಾನಿ ಬರೆದುಕೊಂಡಿದ್ದಾರೆ.
‘ಪೂರ್ತಿ ವಿವರ ಗೊತ್ತಿಲ್ಲದೇ ನನ್ನ ಮೇಲೆ ಆರೋಪ ಮಾಡುವುದನ್ನು ನಿಲ್ಲಿಸಿ. ನನ್ನ ಬದುಕು ಸಹಜ ಸ್ಥಿತಿಗೆ ಬರಲಿ ಎಂದು ನಾನು ಬಯಸುತ್ತಿದ್ದೇನೆ. ಈ ವಿಚಾರವನ್ನು ಆಧಾರವಿಲ್ಲದೇ ವೈಭವೀಕರಿಸುವುದರಿಂದ ನನ್ನ ಮಾನಸಿಕ ಶಾಂತಿ ಹಾಳಾಗುತ್ತಿದೆ. ಈ ಕಾಲ ಕೂಡ ಕಳೆದುಹೋಗುತ್ತದೆ. ಆರೋಪಗಳಿಂದ ನನಗೆ ಕಿರುಕುಳ ನೀಡುತ್ತಿರುವವರಿಗೆ ಶಿಕ್ಷೆ ನೀಡುವುದು ಬೇಡ. ಅವರಿಗೆ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸಂಜನಾ ಗಲ್ರಾನಿ ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:
ಸಂಜನಾಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ; ಆದ್ದರಿಂದಲೇ ಅವರು ಊಟ ಕೊಡಲು ಬಂದಿಲ್ಲ: ರೇಷ್ಮಾ ಗಲ್ರಾನಿ
ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ FSL ವರದಿ ನೋಡಿ ಸಮಾಧಾನವಾಗಿದೆ: ಇಂದ್ರಜಿತ್ ಲಂಕೇಶ್