ಡಿಸೆಂಬರ್ 9ಕ್ಕೆ ‘ಹೊಸ ದಿನಚರಿ’; ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ ನಾಗಾಭರಣ
ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಅವರು ಜೊತೆಯಾಗಿ ‘ಹೊಸ ದಿನಚರಿ’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಸಿನಿಮಾದ ಪೋಸ್ಟರ್ ಗಮನ ಸೆಳೆಯುತ್ತಿದೆ.
ಚಿತ್ರರಂಗಕ್ಕೆ ಹೊಸಬರು ಬಂದಾಗ ಸಾಕಷ್ಟು ಹೊಸತನವೂ ಬರುತ್ತದೆ. ಹಾಗಾಗಿ ಪ್ರತಿಬಾರಿ ಹೊಸ ತಂಡಗಳು ಚಂದನವನಕ್ಕೆ (Sandalwood) ಎಂಟ್ರಿ ನೀಡಿದಾಗ ಹಿರಿಯರು ಆತ್ಮೀಯವಾಗಿ ಸ್ವಾಗತ ಕೋರುತ್ತಾರೆ. ಈಗ ಹೊಸಬರೇ ಸೇರಿಕೊಂಡು ಮಾಡಿರುವ ‘ಹೊಸ ದಿನಚರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪೋಸ್ಟರ್ ಅನಾವರಣ ಮಾಡುವ ಮೂಲಕ ಹಿರಿಯ ನಿರ್ದೇಶಕ ನಾಗಾಭರಣ (TS Nagabharana) ಅವರು ಈ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ವಿಶೇಷ ರೀತಿಯಲ್ಲಿ ವಿನ್ಯಾಸಗೊಂಡಿರುವ ಈ ಪೋಸ್ಟರ್ ಗಮನ ಸೆಳೆಯುತ್ತಿದೆ. ಬಹುತೇಕ ಹೊಸಬರೇ ಈ ಟೀಮ್ನಲ್ಲಿ ಕೆಲಸ ಮಾಡಿದ್ದಾರೆ. ಡಿಸೆಂಬರ್ 9ರಂದು ಸಿನಿಮಾ ರಿಲೀಸ್ ಮಾಡಲು ‘ಹೊಸ ದಿನಚರಿ’ (Hosa Dinachari) ತಂಡ ಸಜ್ಜಾಗುತ್ತಿದೆ.
ಈ ಸಿನಿಮಾದ ಶೀರ್ಷಿಕೆಯಲ್ಲೇ ಒಂದು ಪಾಸಿಟಿವ್ ಗುಣ ಇದೆ. ಜೀವನದ ಯಾವುದೇ ತಿರುವಿನಲ್ಲೂ ಹೊಸ ದಿನಚರಿ ಆರಂಭಿಸಬಹುದು. ಆ ರೀತಿಯ ಒಂದು ಥೀಮ್ ಈ ಸಿನಿಮಾದಲ್ಲಿ ಇರಬಹುದು ಎಂಬ ಸುಳಿವು ಶೀರ್ಷಿಕೆ ಮೂಲಕ ಸಿಕ್ಕಿದೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಮಂದಾರಾ, ವರ್ಷ, ಚೇತನ್ ವಿಕ್ಕಿ, ವಿವೇಕ್ ದೇವ್, ಶ್ರೀಪ್ರಿಯಾ, ಸುಪ್ರೀತಾ ಗೌಡ ಹಾಗೂ ಬೇಬಿ ಮಾನಿನಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
‘ಕನ್ನಡ ಚಿತ್ರರಂಗದಲ್ಲಿ ಪ್ರತಿ 2 ದಶಕಕ್ಕೆ ಒಮ್ಮೆ ಒಂದು ಬದಲಾವಣೆ ಆಗುತ್ತಿರುತ್ತದೆ. 1990ರಲ್ಲಿ, 2000ರಲ್ಲಿ ಮತ್ತು ಈಗ 2020ರ ದಶಕದಲ್ಲಿ ಬದಲಾವಣೆ ಆಗಿದೆ. ಈ ಸಿನಿಮಾದ ಟ್ರೇಲರ್ ನೋಡಿದರೆ ಈ ತಂಡದಿಂದ ಒಳ್ಳೆಯ ಚಿತ್ರ ಬರುವ ನಿರೀಕ್ಷೆ ಮೂಡಿದೆ. ಇಂತಹ ಯುವ ಉತ್ಸಾಹಿ ಪ್ರತಿಭಾವಂತರ ತಂಡಗಳು ಹೆಚ್ಚು ಬರಲಿ. ಆ ಮೂಲಕ ಹೊಸ ಬದಲಾವಣೆ ಆಗುವಂತೆ ಆಗಲಿ’ ಎಂದರು ಟಿ.ಎಸ್. ನಾಗಾಭರಣ.
ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ ಅವರು ಜೊತೆಯಾಗಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘ಎಲ್ಲರ ಜೀವನದಲ್ಲೂ ಪ್ರೀತಿ ಇದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ ಎಂಬುದೇ ಹೊಸ ದಿನಚರಿ ಚಿತ್ರದ ಕಥಾಸಾರಾಂಶ. ನಮ್ಮನ್ನೂ ಸೇರಿದಂತೆ ಈ ಚಿತ್ರತಂಡದ ಅನೇಕ ಸದಸ್ಯರು ಹೊಸಬರು. ಈ ಹಿಂದೆ ಕೆಲವು ಕಿರುಚಿತ್ರಗಳು ಮಾಡಿರುವ ಅನುಭವ ನಮಗಿದೆ. ನಮ್ಮ ಈ ಕನಸನ್ನು ನಿರ್ಮಾಪಕರಾದ ಮೃತ್ಯುಂಜಯ ಶುಕ್ಲಾ, ಅಲೋಕ್ ಚೌರಾಸಿಯಾ ಹಾಗೂ ಗಂಗಾಧರ ಸಾಲಿಮಠ ನನಸು ಮಾಡಿದ್ದಾರೆ’ ಎಂದಿದ್ದಾರೆ ನಿರ್ದೇಶಕರಾದ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾ.
ರಾಕಿ ಅವರ ಛಾಯಾಗ್ರಹಣ, ವೈಶಾಖ್ ವರ್ಮಾ ಅವರ ಸಂಗೀತ, ಸಾಹಿತ್ಯ, ಅಶ್ವಿನ್ ಹೇಮಂತ್ ಅವರ ಹಿನ್ನೆಲೆ ಸಂಗೀತ, ರಂಜಿತ್ ಸೇತು ಸಂಕಲನ ಈ ಚಿತ್ರಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.