ದರ್ಶನ್ ತಾಯಿ ಪಟ್ಟ ಕಷ್ಟಗಳು ಒಂದೆರಡಲ್ಲ, ಆಗ ಸಹಾಯ ಮಾಡಿದ್ದು ಯಾರು?

|

Updated on: Jun 20, 2024 | 1:26 PM

ದರ್ಶನ್ ತೂಗುದೀಪ ಅವರ ತಾಯಿ ಮೀನಮ್ಮ ಅನುಭವಿಸಿದ ಕಷ್ಟಗಳ ಬಗ್ಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಮಾತನಾಡಿದ್ದಾರೆ. ಮೀನಮ್ಮ ತೀವ್ರ ಸಂಕಷ್ಟದಲ್ಲಿದ್ದಾಗ ಅವರಿಗೆ ಯಾರು ಸಹಾಯ ಮಾಡಿದರು ಎಂಬುದನ್ನು ಸಹ ಅವರು ಹೇಳಿದ್ದಾರೆ.

ದರ್ಶನ್ ತಾಯಿ ಪಟ್ಟ ಕಷ್ಟಗಳು ಒಂದೆರಡಲ್ಲ, ಆಗ ಸಹಾಯ ಮಾಡಿದ್ದು ಯಾರು?
Follow us on

ದರ್ಶನ್ (Darshan Thoogudeepa) ತಂದೆ ತೂಗದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಅಪ್ರತಿಮ ನಟರಲ್ಲಿ ಒಬ್ಬರು. ವಿಲನ್ ಆಗಿ ಪೋಷಕ ನಟನಾಗಿ ಹಲವಾರು ಸಿನಿಮಾಗಳಲ್ಲಿ ತೂಗುದೀಪ ಶ್ರೀನಿವಾಸ್ ನಟಿಸಿದ್ದಾರೆ. ಸಿನಿಮಾಗಳಲ್ಲಿ ಗಡುಸು ಧ್ವನಿಯ, ನಿಷ್ಠುರ ಮುಖಭಾವದ ವಿಲನ್ ಆಗಿದ್ದರೂ ಸಹ ನಿಜಜೀವನದಲ್ಲಿ ಅವರೊಬ್ಬ ‘ಜಂಟಲ್​ಮ್ಯಾನ್’ ಆಗಿದ್ದರು. ಅವರ ಪತ್ನಿ ಮೀನಮ್ಮನವರೂ ಸಹ ಅದ್ಭುತವಾದ ಮಹಿಳೆ. ಕುಟುಂಬಕ್ಕಾಗಿ ಅವರು ಮಾಡಿದ ತ್ಯಾಗಗಳು ಒಂದೆರಡಲ್ಲ. ಆದರೆ ಕಷ್ಟವೆಂಬುದು ಅವರ ಬೆನ್ನುಬಿಟ್ಟಿರಲಿಲ್ಲ. ಈಗಲೂ ಬಿಟ್ಟಿಲ್ಲ. ಮೀನಮ್ಮನವರು ಎದುರಿಸಿದ ಸಮಸ್ಯೆಗಳ ಬಗ್ಗೆ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಮಾತನಾಡಿದ್ದಾರೆ.

‘ತೂಗುದೀಪ ಅವರದ್ದು ಅದ್ಭುತವಾದ ಕುಟುಂಬ. ಅಷ್ಟು ಅನ್ಯೋನ್ಯ ದಂಪತಿಯನ್ನು ನೋಡಿದ್ದಿಲ್ಲ. ಮೀನಮ್ಮನವರಿಗೆ ಸುಂದರವಾದ ನೀಳವಾದ ಕೂದಲಿತ್ತು. ತೂಗುದೀಪ ಶ್ರೀನಿವಾಸ್ ಶೂಟಿಂಗ್ ಮುಗಿಸಿ ಮನೆಗೆ ಮರಳುವಾಗ ಮಲ್ಲಿಗೆ ಹಿಡಿದು ಬಂದು ತಾವೇ ಪತ್ನಿಗೆ ಮುಡಿಸುತ್ತಿದ್ದರು. ಜೊತೆಗೆ ‘ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ’ ಹಾಡು ಹಾಡುತ್ತಿದ್ದರು. ಈ ವಿಷಯವನ್ನು ಮೀನಮ್ಮನವರೇ ನನ್ನ ಬಳಿ ಹೇಳಿಕೊಂಡಿದ್ದರು. ಆದರೆ ತೂಗುದೀಪ ಶ್ರೀನಿವಾಸ್ ಕಾಲವಾದ ಮೇಲೆ ಅವರ ಮೇಲಿನ ಪ್ರೀತಿ ಮತ್ತು ಗೌರವದಿಂದ ತಮ್ಮ ಕೂದಲು ಕತ್ತರಿಸಿಕೊಂಡು ಬಾಯ್​ಕಟ್ ಮಾಡಿಸಿಕೊಂಡುಬಿಟ್ಟರು. ಇದು ಅವರಿಬ್ಬರ ನಡುವೆ ಇದ್ದ ಪ್ರೀತಿಗೆ ಸಾಕ್ಷಿ’ ಎಂದಿದ್ದಾರೆ ಗಣೇಶ್.

ಇದನ್ನೂ ಓದಿ:ದರ್ಶನ್​ಗೆ ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಛಲ ಬಂದಿದ್ದು ಹೇಗೆ?

‘ಮೀನಮ್ಮ ಕಳೆದ ಮೂವತ್ತು ವರ್ಷಗಳಿಂದಲೂ ಒಂದು ಕಿಡ್ನಿಯಲ್ಲಿ ಬದುಕುತ್ತಿದ್ದಾರೆ. ತೂಗುದೀಪ ಶ್ರೀನಿವಾಸ್​ಗೆ ಕಿಡ್ನಿ ಸಮಸ್ಯೆ ಆದಾಗ ಪತ್ನಿ ಮೀನಮ್ಮ ಅವರೇ ಪತಿಗೆ ಕಿಡ್ನಿ ನೀಡಿದರು. ಅದು ಮೀನಮ್ಮ ಹಾಗೂ ಅವರ ಕುಟುಂಬದ ಪಾಲಿಗೆ ಅತ್ಯಂತ ಕಷ್ಟದ ಸಮಯ. ಆಗ ಅವರಿಗೆ ನೆರವು ನೀಡಿದ್ದು ಪಾರ್ವತಮ್ಮ ರಾಜ್​ಕುಮಾರ್. ಮೀನಮ್ಮ, ಪಾರ್ವತಮ್ಮನನ್ನು ದೇವರು ಎಂದೇ ಕರೆಯುತ್ತಿದ್ದರು. ಕಿಡ್ನಿ ಶಸ್ತ್ರಚಿಕಿತ್ಸೆ ಸಮಯದಲ್ಲಿ ಪಾರ್ವತಮ್ಮ ಮೀನಮ್ಮನಿಗೆ ಬಹಳ ಸಹಾಯ ಮಾಡಿದ್ದರು’ ಎಂದಿದ್ದಾರೆ ಗಣೇಶ್.

ತೂಗುದೀಪ ಶ್ರೀನಿವಾಸ್ ಮನೆ ಕಟ್ಟುವಾಗಲೂ ಸಹ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಸಹಾಯ ಮಾಡಿದ್ದರು. ಅದೇ ಗೌರವದಿಂದ ಮನೆಗೆ ‘ಮುಪಾ ಕೃಪಾ’ ಮುತ್ತುರಾಜ-ಪಾರ್ವತಮ್ಮ ಕೃಪಾ ಎಂದು ಹೆಸರಿಟ್ಟರು. ಅದನ್ನು ದೊಡ್ಡದಾಗಿ ಮನೆಯ ಮೇಲೆ ಬರೆಸಿದರು’ ಎಂದಿದ್ದಾರೆ ಗಣೇಶ್.

ಅಂದಹಾಗೆ, ತೂಗುದೀಪ ಶ್ರೀನಿವಾಸ್​ಗೆ ತಮ್ಮ ಮಕ್ಕಳು ಚಿತ್ರರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ಅದಕ್ಕೆ ಕಾರಣ, ಮಕ್ಕಳು ಚಿತ್ರರಂಗಕ್ಕೆ ಬಂದರೆ ತಮ್ಮ ಹೆಸರೆಲ್ಲಿ ಕೆಡಿಸಿಬಿಡುತ್ತಾರೋ ಎಂಬ ಆತಂಕ ಅವರಿಗಿತ್ತು. ಈ ವಿಷಯವನ್ನು ಸ್ವತಃ ದಿನಕರ್ ತೂಗುದೀಪ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತೂಗುದೀಪ ಶ್ರೀನಿವಾಸ್ ಅವರ ಆತಂಕ ಇದೀಗ ನಿಜವಾದಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ