ತರುಣ್ ಶಿವಪ್ಪ ಮತ್ತು ಮಾನಸಾ ತರುಣ್ ಅವರು ‘ತರುಣ್ ಸ್ಟುಡಿಯೋಸ್’ ಮೂಲಕ ‘ಛೂ ಮಂತರ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಕರ್ವ’ ಚಿತ್ರದಿಂದ ಗಮನ ಸೆಳೆದ ನಿರ್ದೇಶಕ ನವನೀತ್ ಅವರು ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಮಾಡಲಾಯಿತು. ಕನ್ನಡ ಚಿತ್ರರಂಗದ ಅನೇಕರು ಇದರಲ್ಲಿ ಭಾಗಿಯಾಗಿದ್ದರು. ಜನವರಿ 10ರಂದು ‘ಛೂ ಮಂತರ್’ ಸಿನಿಮಾ ತೆರೆಕಾಣಲಿದೆ.
ಮಾಲಾಶ್ರೀ, ಗುರುಕಿರಣ್, ಡಾಲಿ ಧನಂಜಯ, ರಿಷಿ, ಅಮೂಲ್ಯ, ಪ್ರಥಮ್, ತಿಲಕ್, ಧೀರೇನ್ ರಾಮ್ ಕುಮಾರ್, ಆರಾಧನಾ, ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಸೇರಿದಂತೆ ಅನೇಕ ಗಣ್ಯರು ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗಿಯಾಗಿದ್ದರು. ಚಿತ್ರತಂಡಕ್ಕೆ ಎಲ್ಲರೂ ಶುಭ ಕೋರಿದರು. ಈ ಸಿನಿಮಾಗೆ ಯಶಸ್ಸು ಸಿಗಲಿದೆ ಎಂಬ ಭರವಸೆಯಲ್ಲಿದ್ದಾರೆ ನಿರ್ಮಾಪಕ ತರುಣ್ ಶಿವಪ್ಪ.
ನಟ ಶರಣ್ ಅವರು ಮಾತನಾಡಿ, ‘ಈ ಸಿನಿಮಾದಲ್ಲಿ ನಾನೊಬ್ಬನೇ ಹೀರೋ ಅಲ್ಲ. ನಟಿಸಿರುವ ಎಲ್ಲರೂ ನಾಯಕರು. ಇಡೀ ತಂಡದ ಶ್ರಮದಿಂದ ಒಳ್ಳೆಯ ಸಿನಿಮಾ ನಿರ್ಮಾಣ ಆಗಿದೆ. ಟ್ರೇಲರ್, ಟೀಸರ್ ಮತ್ತು ಹಾಡುಗಳ ಮೂಲಕ ನಮ್ಮ ಸಿನಿಮಾ ಎಲ್ಲರ ಮನ ತಲುಪಿದೆ. ಸಿನಿಮಾ ಗೆಲ್ಲುವ ಭರವಸೆ ನಮಗಿದೆ’ ಎಂದರು. ಅವಿನಾಶ್ ಬಸತ್ಕೂರ್ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಅನುಪ್ ಕಟ್ಟುಕರನ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಚಂದನ್ ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭು ಮುಂಡ್ಕರ್, ರಂಜನಿ ರಾಘವನ್, ಮೇಘನಾ ಗಾಂವ್ಕರ್, ನರಸಿಂಹ ಜಾಲಹಳ್ಳಿ, ಚಿಕ್ಕಣ್ಣ, ಅದಿತಿ ಪ್ರಭುದೇವ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಸದ್ದು ಮಾಡುತ್ತಿದ್ದಾನೆ ‘ಲಂಗೋಟಿ ಮ್ಯಾನ್’: ಟೀಸರ್ ನೋಡಿ ಮೆಚ್ಚಿಕೊಂಡ ನಟ ಶರಣ್
‘ಸಂಕ್ರಾಂತಿ ಸಮೀಪದಲ್ಲಿ ಜನವರಿ10ಕ್ಕೆ ನಮ್ಮ ಸಿನಿಮಾ ಬಿಡುಗಡೆ ಆಗಲಿದೆ. ಇದೇ ಸಮಯಕ್ಕೆ ಪರಭಾಷೆ ಸಿನಿಮಾಗಳೂ ಬಿಡುಗಡೆ ಆಗಲಿದೆ. ಆದ್ದರಿಂದ ನಮಗೆ ಸಾಕಷ್ಟು ಥಿಯೇಟರ್ಗಳು ಸಿಗುತ್ತಿಲ್ಲ. ಕನ್ನಡಿಗರೇ ಹೆಚ್ಚಿರುವ ಮಂಡ್ಯದಂತಹ ಊರಿನಲ್ಲೂ ಸಹ ಚಿತ್ರಮಂದಿರ ಸಿಗದೇ ಇರುವುದು ಬೇಸರವಾಗಿದೆ. ಈ ಕುರಿತು ನಾವು ಫಿಲ್ಮ್ ಚೇಂಬರ್ ಮೊರೆ ಹೋಗಿದ್ದೇವೆ’ ಎಂದು ನಿರ್ಮಾಪಕ ತರುಣ್ ಶಿವಪ್ಪ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.