ಕಾವೇರಿ ರೈತರ ಬೆನ್ನೆಲುಬು, ರೈತರು ಸಂಕಷ್ಟದಲ್ಲಿದ್ದಾರೆ: ಶಿವರಾಜ್ ಕುಮಾರ್

|

Updated on: Sep 20, 2023 | 7:21 PM

Cauvery Water dispute: ಕಾವೇರಿ ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನ್ಯಾಯಾಲವು, ತಮಿಳುನಾಡಿಗೆ ನಿರ್ದಿಷ್ಟ ಟಿಎಂಸಿ ನೀರು ಹರಿಸುವಂತೆ ಆದೇಶ ನೀಡಿದೆ. ಅದರ ಬೆನ್ನಲ್ಲೆ ರಾಜ್ಯದ ಹಲವೆಡೆ ಪ್ರತಿಭಟನೆಗಳು ಆರಂಭವಾಗಿವೆ. ಈ ಬಗ್ಗೆ ನಟ ಶಿವರಾಜ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಾವೇರಿ ರೈತರ ಬೆನ್ನೆಲುಬು, ರೈತರು ಸಂಕಷ್ಟದಲ್ಲಿದ್ದಾರೆ: ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
Follow us on

ಕಾವೇರಿ (Cauvery) ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನ್ಯಾಯಾಲವು, ತಮಿಳುನಾಡಿಗೆ ನಿರ್ದಿಷ್ಟ ಟಿಎಂಸಿ ನೀರು ಹರಿಸುವಂತೆ ಆದೇಶಿಸಿದೆ. ಈ ಕುರಿತು ಸರ್ಕಾರ ಇನ್ನಷ್ಟೆ ನಿರ್ಧಾರ ಕೈಗೊಳ್ಳಬೇಕಿದೆ. ಈ ನಡುವೆ ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ಆರಂಭವಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಲಾಗಿದೆ. ಚಿತ್ರರಂಗ ಸಹ ಕಾವೇರಿ ಪರವಾಗಿ ದನಿ ಎತ್ತಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು. ಅಂತೆಯೇ ಇಂದು ನಟ ದರ್ಶನ್ (Darshan), ಸುದೀಪ್ (Sudeep) ಟ್ವೀಟ್ ಮಾಡಿ ಕಾವೇರಿ ಪರವಾಗಿ ದನಿಗೂಡಿಸಿದ್ದರು. ಇದೀಗ ನಟ ಶಿವರಾಜ್ ಕುಮಾರ್, ಈ ವಿಷಯವಾಗಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

”ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಕಾವೇರಿ. ಈ ವರ್ಷ ರಾಜ್ಯದಲ್ಲಿ ಮಳೆ ಕಡಿಮೆ ಆಗಿರುವ ಕಾರಣ ಈಗಾಗಲೇ ನಮ್ಮ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಎರಡು ರಾಜ್ಯದ ನಾಯಕರು ಹಾಗೂ ನ್ಯಾಯಾಲಯ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಬಗ್ಗೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ” ಎಂದಿದ್ದಾರೆ ಶಿವರಾಜ್ ಕುಮಾರ್.

ಶಿವರಾಜ್ ಕುಮಾರ್ ಅವರು ಕಾವೇರಿ ಬಗ್ಗೆ ಮೌನವಹಿಸಿದ್ದಾರೆ ಎಂದು ನಿನ್ನೆಯಿಂದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದರು. ಇವರಲ್ಲಿ ಬಿಜೆಪಿಗ ಪ್ರಶಾಂತ್ ಸಂಬರ್ಗಿ ಸಹ ಒಬ್ಬರು. ಶಿವರಾಜ್ ಕುಮಾರ್ ಇತ್ತೀಚೆಗೆ ‘ಜೈಲರ್’ ಹಾಗೂ ಇನ್ನೂ ಬಿಡುಗಡೆ ಆಗದ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ನಟಿಸಿರುವುದರಿಂದ ಶಿವರಾಜ್ ಕುಮಾರ್ ಕಾವೇರಿ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂಬರ್ಥದ ಪೋಸ್ಟ್​ಗಳು ಅಲ್ಲಲ್ಲಿ ಕಾಣಿಸಿಕೊಂಡಿದ್ದವು. ಆದರೆ ಅವನ್ನೆಲ್ಲ ಸುಳ್ಳು ಮಾಡಿ ಶಿವಣ್ಣ ಕಾವೇರಿ ವಿವಾದದ ಬಗ್ಗೆ ಘನತೆಯ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಬಾಲಿವುಡ್​ನಲ್ಲಿ ಹವಾ ಎಬ್ಬಿಸಲು ಶಿವರಾಜ್ ಕುಮಾರ್ ರೆಡಿ: ಏನಿದು ಹೊಸ ಸುದ್ದಿ?

ಕಾವೇರಿ ವಿವಾದದ ಬಗ್ಗೆ ಈ ಹಿಂದಿನಿಂದಲೂ ಚಿತ್ರರಂಗ ಸ್ಪಂದಿಸುತ್ತಲೇ ಬಂದಿದೆ. ಕಾವೇರಿ ವಿವಾದ ಮಾತ್ರವೇ ಅಲ್ಲದೆ ನಾಡಿನ ಗಡಿ ವಿಚಾರದಲ್ಲಿಯೂ ಚಿತ್ರರಂಗ ಬೀದಿಗಿಳಿದು ಹೋರಾಟ ಮಾಡಿದ ಉದಾಹರಣೆಗಳು ಹಲವು ಇವೆ. ಇತ್ತೀಚೆಗಿನ ಕೆಲವು ಹೋರಾಟಗಳಲ್ಲಿ ಶಿವರಾಜ್ ಕುಮಾರ್ ಅವರೇ ಮುಂಚೂಣಿ ವಹಿಸಿದ್ದರು. ಅಂತೆಯೇ ಈಗ ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದು, ನಾಡಿನ ಹಿತಾಸಕ್ತಿಯ ಪರ ಇರುವುದಾಗಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

ಇದೇ ದಿನ ನಟ ದರ್ಶನ್, ಸುದೀಪ್, ಜಗ್ಗೇಶ್, ವಿನೋದ್ ಪ್ರಭಾಕರ್, ನಟ ಅನಂತ್​ನಾಗ್ ಇನ್ನೂ ಕೆಲವರು ಕಾವೇರಿ ವಿವಾದದ ಬಗ್ಗೆ ಮಾತನಾಡಿದ್ದು, ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸರ್ಕಾರವು ಈ ಬಗ್ಗೆ ಸರ್ವಪಕ್ಷ ಸಭೆಯನ್ನು ಇಂದು ದೆಹಲಿಯಲ್ಲಿ ಕರೆದಿತ್ತು. ಈ ಬಗ್ಗೆ ಸರ್ಕಾರ ಇನ್ನಷ್ಟೆ ನಿರ್ಧಾರ ತಳೆಯಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ