Shiva Rajkumar: ವರಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಿತು ಶಿವಣ್ಣನ 131ನೇ ಸಿನಿಮಾ
Shiva Rajkumar: ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ಇಂದು (ಆಗಸ್ಟ್ 16) ವರಲಕ್ಷ್ಮಿ ಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಸೆಟ್ಟೇರಿದೆ. ಸಿನಿಮಾವನ್ನು ತಮಿಳಿನ ನಿರ್ದೇಶಕ ನಿರ್ದೇಶಿಸಲಿದ್ದಾರೆ.
(Shiva Rajkumar) ಶಿವರಾಜ್ ಕುಮಾರ್ ನಟನೆಯ 131ನೇ ಸಿನಿಮಾ ವರಲಕ್ಷ್ಮಿ ಹಬ್ಬದ ಪ್ರಯುಕ್ತ ಇಂದು ಸೆಟ್ಟೇರಿದೆ. ತಿಂಗಳ ಹಿಂದೆಯೇ ಸಿನಿಮಾಗ ಘೋಷಣೆ ಮಾಡಲಾಗಿತ್ತು, ಸಿನಿಮಾಕ್ಕೆ ಸಂಬಂಧಿಸಿದಂತೆ ಸಣ್ಣ ಟೀಸರ್ ಸಹ ಬಿಡುಗಡೆ ಮಾಡಲಾಗಿತ್ತು. ಇದೀಗ ವರಲಕ್ಷ್ಮಿ ಹಬ್ಬದಂದು ಸಿನಿಮಾದ ಮುಹೂರ್ತ ಮುಗಿಸಿ ಅಧಿಕೃತವಾಗಿ ಸೆಟ್ಟೇರಿದೆ. ಇದು ಶಿವಣ್ಣ ನಟಿಸಲಿರುವ 131ನೇ ಸಿನಿಮಾ ಆಗಿರಲಿದ್ದು ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ, ಆದರೆ ಇದೊಂದು ಪಕ್ಕಾ ಅಂಡರ್ವರ್ಲ್ಡ್ ಕುರಿತಾದ ಕತೆಯನ್ನು ಒಳಗೊಂಡಿರಲಿದೆ.
ಕಂಠೀರವ ಸ್ಟುಡಿಯೋನಲ್ಲಿ ಸಿನಿಮಾಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಶಿವರಾಜ್ ಕುಮಾರ್ ಸೇರಿದಂತೆ ಇನ್ನೂ ಕೆಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಿನಿಮಾವನ್ನು ಕಾರ್ತಿಕ್ ಅದ್ವೈತ್ ನಿರ್ದೇಶನ ಮಾಡಲಿದ್ದಾರೆ. ಕಾರ್ತಿಕ್ ಅದ್ವೈತ್ ತಮಿಳು ಸಿನಿಮಾ ನಿರ್ದೇಶಕರಾಗಿದ್ದು ಮೊದಲ ಬಾರಿಗೆ ಕನ್ನಡದ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಶಿವಣ್ಣನ ಸಿನಿಮಾ ನಿರ್ದೇಶಿಸಲೆಂದೇ ಅವರು ತಮಿಳಿನಿಂದ ಕನ್ನಡಕ್ಕೆ ಬಂದಿದ್ದಾರೆ. ಸಿನಿಮಾವನ್ನು ಎಸ್ಎನ್ ರೆಡ್ಡಿ ಮತ್ತು ಸುಧೀರ್ ಪಿ ನಿರ್ಮಾಣ ಮಾಡಲಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ಘೋಷಣೆಗೆ ಕ್ಷಣಗಣನೆ, ಕನ್ನಡ ಸಿನಿಮಾಗಳ ಮೇಲೆ ಎಲ್ಲರ ಕಣ್ಣು, ಸ್ಪರ್ಧೆಯೂ ಜೋರಿದೆ
ಸಿನಿಮಾದ ಕ್ಯಾರೆಕ್ಟರ್ ಟೀಸರ್ ಒಂದನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಟೀಸರ್ನಲ್ಲಿ ಕಣ್ಣಿಲ್ಲದ ವ್ಯಕ್ತಿಯಾಗಿ ಕಾಣಿಸಿಕೊಂಡಿರುವ ಅಚ್ಯುತ್ ಕುಮಾರ್, ಸ್ಕೆಚ್ ಆರ್ಟಿಸ್ಟ್ ಒಬ್ಬನಿಗೆ ಶಿವಣ್ಣನ ಮುಖಚರ್ಹೆಯನ್ನು ಹೇಳುತ್ತಿರುವ ದೃಶ್ಯವದು. ಸ್ಕೆಚ್ ಆರ್ಟಿಸ್ಟ್ ಹಾಗೂ ಪೊಲೀಸ್ಗೆ ಶಿವಣ್ಣನ ವ್ಯಕ್ತಿತ್ವ, ಮುಖಚರ್ಹೆಯನ್ನು ಹೇಳುತ್ತಾ ಬಿಲ್ಡಪ್ ಕೊಡುವ ಟೀಸರ್ ಸಖತ್ ಆಗಿದೆ. ಅಲ್ಲದೆ ಸಿನಿಮಾದಲ್ಲಿ ಶಿವಣ್ಣನ ಈ ಹಿಂದಿನ ಸಿನಿಮಾಗಳಾದ ‘ಓಂ’, ‘ಜೋಗಿ’ ಇನ್ನಿತರೆ ಸಿನಿಮಾಗಳ ರೆಫರೆನ್ಸ್ ಇರಲಿವೆ ಎಂಬುದು ಸಹ ಟೀಸರ್ನಿಂದ ತಿಳಿದು ಬರುತ್ತಿದೆ.
ಈ ಸಿನಿಮಾಕ್ಕೆ ಎ.ಜೆ.ಶೆಟ್ಟಿ ಕ್ಯಾಮರಾ ಕೆಲಸ ಮಾಡಲಿದ್ದಾರೆ. ಸ್ಯಾಮ್ ಸಿ.ಎಸ್. ಸಂಗೀತ ನೀಡಲಿದ್ದಾರೆ. ಸಿನಿಮಾದ ಚಿತ್ರೀಕರಣ ಇದೀಗ ಪ್ರಾರಂಭವಾಗಿದ್ದು ಮುಂದಿನ ತಿಂಗಳ ಮಧ್ಯಕ್ಕೆ ಸಿನಿಮಾದ ಮೊದಲ ಶೆಡ್ಯೂಲ್ ಶೂಟಿಂಗ್ ಮುಗಿಸುವ ಯೋಜನೆಯಲ್ಲಿದೆ ಚಿತ್ರತಂಡ. ಶಿವಣ್ಣ ಈಗ ಬಹಳ ಬ್ಯುಸಿಯಾಗಿದ್ದು, ಹೇಮಂತ್ ರಾವ್ ನಿರ್ದೇಶನದ ‘ಭೈರವನ ಕೊನೆ ಪಾಠ’, ರಾಮ್ ಚರಣ್ ಜೊತೆಗೆ ತೆಲುಗು ಸಿನಿಮಾ, ‘ಭೈರತಿ ರಣಗಲ್’, ‘ಘೋಸ್ಟ್ 2’ ಇನ್ನೂ ಕೆಲವು ಸಿನಿಮಾಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Fri, 16 August 24