ಶಿವಣ್ಣನಿಗಿದೆ ಸಿನಿಮಾ ನಿರ್ದೇಶಿಸುವ ಆಸೆ: ನಾಯಕನನ್ನೂ ಸೆಲೆಕ್ಟ್ ಮಾಡಿಕೊಂಡಿದ್ದಾರೆ
Shiva Rajkumar: 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟಿಸುತ್ತಲೇ ಇರುವ ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ನಿರ್ದೇಶನ ಮಾಡುವ ಆಸೆಯಿದೆಯಂತೆ. ಅಂದಹಾಗೆ ತಮ್ಮ ಸಿನಿಮಾಕ್ಕೆ ನಾಯಕನನ್ನೂ ಆಯ್ಕೆ ಮಾಡಿಕೊಂಡಿದ್ದಾರೆ ಶಿವಣ್ಣ.
ಶಿವರಾಜ್ ಕುಮಾರ್ (Shiva Rajkumar) ‘ಆನಂದ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಈ ದಿನದ ವರೆಗೂ ಸಿನಿಮಾ ಇಲ್ಲದೆ ಖಾಲಿ ಕೂತ ದಿನವೇ ಇಲ್ಲ. ಸತತವಾಗಿ ನಟಿಸುತ್ತಲೇ ಬರುತ್ತಿದ್ದಾರೆ. ನಟನೆಯ ಹೊರತಾಗಿ ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವೇ ದೊರೆತಂತಿಲ್ಲ ಅವರಿಗೆ. ಆದರೆ ಶಿವಣ್ಣನಿಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆಯಂತೆ. ಹಲವು ಬಾರಿ ಆ ಬಗ್ಗೆ ಯೋಚನೆಯನ್ನೂ ಮಾಡಿದ್ದಾರಂತೆ. ಮಾತ್ರವಲ್ಲ ಸಿನಿಮಾಕ್ಕಾಗಿ ಒಂದು ಐಡಿಯಾ ಸಹ ಶಿವಣ್ಣನ ಬಳಿ ಈಗಾಗಲೇ ಇದೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ”ಸಿನಿಮಾ ನಿರ್ದೇಶನ ಎಂಬುದು ಸುಲಭದ ಕೆಲಸವಲ್ಲ ಎಂಬುದು ಗೊತ್ತಿದೆ. ಕನ್ನಡ ಸೇರಿದಂತೆ ನೆರೆ ಹೊರೆಯ ಚಿತ್ರರಂಗದಲ್ಲಿ ಕೆಲವು ಅದ್ಭುತವಾದ ಸಿನಿಮಾ ನಿರ್ದೇಶಕರಿದ್ದಾರೆ, ಕೆಲವರೊಟ್ಟಿಗೆ ಕೆಲಸ ಮಾಡುವ ಅವಕಾಶವೂ ನನಗೆ ಸಿಕ್ಕಿದೆ. ಆ ನಿರ್ದೇಶಕರು ತಮಗೆ ತಮ್ಮದೇ ಆದ ಬ್ರ್ಯಾಂಡ್ ಸೃಷ್ಟಿ ಮಾಡಿಕೊಂಡಿದ್ದಾರೆ. ನಾನು ಸಿನಿಮಾ ನಿರ್ದೇಶಿಸಿದರೂ ಸಹ ನನ್ನದೇ ಆದ ಗುರುತು ಮೂಡಿಸುವ ಇಚ್ಛೆ ನನಗೆ ಇದೆ” ಎಂದಿದ್ದಾರೆ ಶಿವರಾಜ್ ಕುಮಾರ್.
ಇದನ್ನೂ ಓದಿ:ಕಾವೇರಿ ರೈತರ ಬೆನ್ನೆಲುಬು, ರೈತರು ಸಂಕಷ್ಟದಲ್ಲಿದ್ದಾರೆ: ಶಿವರಾಜ್ ಕುಮಾರ್
”ನನಗೆ ಬಿಲ್ಡಪ್ ಕ್ಯಾರೆಕ್ಟರ್ ರೀತಿಯ ಕತೆ, ಅಥವಾ ರೂಲ್ ಮಾಡುವ ವ್ಯಕ್ತಿಗಳ ಕತೆ ಮಾಡುವುದಕ್ಕೆ ಇಷ್ಟವಿಲ್ಲ. ಸಾಮಾನ್ಯ ವ್ಯಕ್ತಿಯ ಕತೆ ಇಷ್ಟ. ಸಾಮಾನ್ಯ ವ್ಯಕ್ತಿ ಸಮಾಜದಲ್ಲಿ ಬದಲಾವಣೆ ತರುವ ರೀತಿಯ ಕತೆಯನ್ನು ಸಿನಿಮಾ ಮಾಡುವ ಆಸೆ. ಒಂದು ರೀತಿ ಶಂಕರ್ ಮಾದರಿಯ ಕತೆ ಎನ್ನಬಹುದು ಆದರೆ ಸೂಪರ್ ಹೀರೋ ಮಾದರಿಯಲ್ಲಲ್ಲದೆ ಸಾಮಾನ್ಯ ವ್ಯಕ್ತಿಯೇ ಹೀರೋ ಆಗುವ ಮಾದರಿಯ ಕತೆ” ಎಂದರು ಶಿವರಾಜ್ ಕುಮಾರ್.
ಇನ್ನು ತಮಗೆ ಯಾವ ನಟನಿಗಾಗಿ ಸಿನಿಮಾ ಮಾಡುವ ಆಸೆ ಇದೆ ಎಂಬ ಪ್ರಶ್ನೆಗೆ, ”ನನಗೆ ಅಪ್ಪು, ಅನಂತ್ನಾಗ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಆಸೆ ಇದೆ. ಈಗಿನ ಸ್ಟಾರ್ ನಟರಲ್ಲಿ ನನಗೆ ಧನುಶ್ ಅವರನ್ನು ಹಾಕಿಕೊಂಡು ಸಿನಿಮಾ ನಿರ್ದೇಶಿಸುವ ಆಸೆ ಇದೆ. ಅವರು ಸಾಮಾನ್ಯ ವ್ಯಕ್ತಿಯಂತೆ ಕಾಣುತ್ತಾರೆ” ಎಂದಿದ್ದಾರೆ ಶಿವರಾಜ್ ಕುಮಾರ್. ”ನನ್ನ ಬಳಿ ಈಗಾಗಲೇ ಒಂದು ಐಡಿಯಾ ಇದೆ. ನಾನು ಅದನ್ನು ಮಾಡುತ್ತೇನೆಯೋ ಇಲ್ಲವೋ ಗೊತ್ತಿಲ್ಲ” ಎಂದಿರುವ ಶಿವಣ್ಣ, ಆ ಐಡಿಯಾ ಅನ್ನು ನಿರ್ದೇಶಕ ಶ್ರೀನಿಗೆ ಹೇಳುತ್ತೀನಿ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ