‘ಭಜರಂಗಿ 2’ ಸಿನಿಮಾ ಅಕ್ಟೋಬರ್ 29ರಂದು ತೆರೆಗೆ ಬಂದಿತ್ತು. ಅದೇ ದಿನ ನಟ ಪುನೀತ್ ರಾಜ್ಕುಮಾರ್ ಕೂಡ ನಿಧನರಾದರು. ಹೀಗಾಗಿ, ಆ ದಿನ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ರದ್ದು ಮಾಡಲಾಯಿತು. ಇನ್ನು, ರಾಜ್ ಕುಟುಂಬ ಹಾಗೂ ಅವರ ಅಭಿಮಾನಿಗಳು ದುಃಖದಲ್ಲಿದ್ದಾರೆ. ಈ ಕಾರಣಕ್ಕೆ ಯಾರೂ ಸಿನಿಮಾಗೆ ತೆರಳೋಕೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಚಿತ್ರತಂಡ ಕೂಡ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿ ಇಲ್ಲ. ಈ ಎಲ್ಲಾ ಕಾರಣಕ್ಕೆ ಚಿತ್ರದ ಬಾಕ್ಸ್ ಆಫೀಸ್ಗೆ ಹೊಡೆತ ಬಿದ್ದಿದೆ. ಇದು ಚಿತ್ರತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ‘ಭಜರಂಗಿ 2’ ವಿಲನ್ ಚೆಲುವ ರಾಜ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
‘ಅಕ್ಟೋಬರ್ 29. ಒಂದು ಕಡೆ ಸಿನಿಮಾ ರಿಲೀಸ್ ಆಯ್ತು, ಮತ್ತೊಂದು ಕಡೆ ಪವರ್ ಸ್ಟಾರ್ ನಿಧನ ಹೊಂದಿದರು. ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ. ಅಂತಹ ದಿನ ಮರೆಯೋಕೆ ಸಾಧ್ಯವಿಲ್ಲ. ದೇವರ ಮಗನನ್ನು ಕಳೆದುಕೊಂಡೆವು. ಅವರು ನಮ್ಮ ಜತೆ ಇಲ್ಲ. ಭಜರಂಗಿ 2 ಮೂರು ವರ್ಷದ ಶ್ರಮ. ಆದರೆ, ಚಿತ್ರಕ್ಕೆ ರೆಸ್ಪಾನ್ಸ್ ಸಿಗುತ್ತಿಲ್ಲ. ನಮ್ಮ ಭವಿಷ್ಯ ಇಲ್ಲಿಗೆ ಕೊನೇ ಆಗುತ್ತಿದೆಯೇನೋ ಎನಿಸುತ್ತಿದೆ. ದಯವಿಟ್ಟು ನಮಗೆ ಸಪೋರ್ಟ್ ಕೊಡಿ. ನಮ್ಮನ್ನ ನಡುನೀರಲ್ಲಿ ಕೈಬಿಡಬೇಡಿ’ ಎಂದು ಚೆಲುವ ರಾಜ್ ಕೇಳಿಕೊಂಡಿದ್ದಾರೆ.
‘ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದರು. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದರು. ಮಂತ್ರ-ತಂತ್ರ, ಧನ್ವಂತರಿ, ಪುನರ್ಜನ್ಮ ಹೀಗೆ ನಾನಾ ವಿಚಾರಗಳನ್ನು ಹೇಳುವುದರ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು. ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ‘ಆ ಸೀನ್ ನನಗೆ ಟಚ್ ಆಯ್ತು’; ‘ಭಜರಂಗಿ 2’ ನೋಡಿದ ಶಿವಣ್ಣನ ಮಾತು
Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್