ಭಾಷೆ ಬಗ್ಗೆ ತಪ್ಪಾಗಿ ಮಾತನಾಡಿ ಕ್ಷಮೆ ಕೇಳಿದ ಶಿವರಾಜ್​ಕುಮಾರ್

ಹಿಂದಿ ರಾಷ್ಟ್ರಭಾಷೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ನಟ ಶಿವರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಣ್ಣ ಎಡವಟ್ಟಿನಿಂದ ಆಡಿದ ಮಾತು ವಿವಾದಕ್ಕೆ ಕಾರಣವಾಗಿತ್ತು. ತಮ್ಮ ಹೇಳಿಕೆಗೆ ಕ್ಷಮೆ ಕೋರಿರುವ ಶಿವಣ್ಣ, ತಮಗೆ ಕನ್ನಡ ನಾಡು-ನುಡಿಯೇ ಎಂದಿಗೂ ಪ್ರಥಮ ಎಂದು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಭಾಷೆ ಬಗ್ಗೆ ತಪ್ಪಾಗಿ ಮಾತನಾಡಿ ಕ್ಷಮೆ ಕೇಳಿದ ಶಿವರಾಜ್​ಕುಮಾರ್
ಶಿವಣ್ಣ

Updated on: Sep 09, 2026 | 7:34 AM

ಮುಖ್ಯಾಂಶಗಳು

  • ಹಿಂದಿ ರಾಷ್ಟ್ರಭಾಷೆ ವಿವಾದ
  • ಎಡವಟ್ಟಿಗೆ ಕ್ಷಮೆ ಕೋರಿದ ನಟ ಶಿವರಾಜ್‌ಕುಮಾರ್
  • ತಮ್ಮ ಹೇಳಿಕೆಗೆ ಶಿವಣ್ಣ ನೀಡಿದ ಸ್ಪಷ್ಟನೆ ಏನು?

ತಮ್ಮ ಮುಂಬರುವ ‘ಒರಿಜಿನಲ್ ಮಾನ್‌ಸ್ಟರ್’ ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಶಿವರಾಜ್​ಕುಮಾರ್ ಭಾಷೆ ಬಗ್ಗೆ ಎಡವಟ್ಟೊಂದನ್ನು ಮಾಡಿಕೊಂಡಿದ್ದರು. ಇದಕ್ಕೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೇಳಿದ್ದಾರೆ.

ಶಿವಣ್ಣ ಅವರು ‘ಒರಿಜಿನಲ್ ಮಾನ್​ಸ್ಟರ್​’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರ ಹಿಂದಿಯಲ್ಲೂ ಬರುತ್ತಿದೆ. ‘ಹಿಂದಿಗೆ ನೀವೇ ಡಬ್ ಮಾಡ್ತೀರಾ’ ಎಂದು ಕೇಳಿದಾಗ, ‘ಕಾಲೇಜು ದಿನಗಳಲ್ಲಿ ಹಿಂದಿ ನನ್ನ ಎರಡನೇ ಭಾಷೆ ಆಗಿತ್ತು. ಅದು ಸುಲಭವಾದ ಭಾಷೆ, ನಮ್ಮ ರಾಷ್ಟ್ರೀಯ ಭಾಷೆ’ ಎಂಬ ಮಾತುಗಳನ್ನಾಡಿದ್ದರು. ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿ, ಕನ್ನಡಿಗರು ಹಾಗೂ ನೆಟ್ಟಿಗರಿಂದ ತೀವ್ರ ಚರ್ಚೆ ಮತ್ತು ವಿರೋಧಕ್ಕೆ ಕಾರಣವಾಗಿತ್ತು.

ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ, ಶಿವಣ್ಣ ಅವರು ಈ ಕುರಿತು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಬದಲಿಗೆ ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಮಾತುಗಳನ್ನು ಆಡಿದ್ದು’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್‌ಕುಮಾರ್ ನಟನೆಯ ‘ಕೂರ್ಮಾವತಾರ’ ಚಿತ್ರದ ಟೀಸರ್ ರಿಲೀಸ್

‘ಕನ್ನಡ ಭಾಷೆ, ನಾಡು ಹಾಗೂ ನುಡಿಯ ಬಗ್ಗೆ ತಮಗಿರುವ ಗೌರವ ಮತ್ತು ಪ್ರೀತಿ ಎಂದಿಗೂ ಮೊದಲ ಸ್ಥಾನದಲ್ಲೇ ಇರುತ್ತದೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ ಹಾಗೂ ಡಬ್ಬಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ತಕ್ಷಣಕ್ಕೆ ಸರಳವಾಗಿ ಉತ್ತರಿಸುವಾಗ ಈ ಮಾತು ಬಂದಿತ್ತೇ ವಿನಃ ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇದರಲ್ಲಿರಲಿಲ್ಲ’ ಎಂದು ಹೇಳಿದ್ದಾರೆ. ಶಿವಣ್ಣ ತಪ್ಪನ್ನು ತಿದ್ದುಕೊಂಡಿದ್ದಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Loading...
Unable to load recommendations.
Follow Us