ಒಂದೇ ಒಂದು ವೈರಲ್ ವಿಡಿಯೋದಿಂದ ಕಣ್ಸನ್ನೆ ಹುಡುಗಿ ಎಂದೇ ಫೇಮಸ್ ಆದವರು ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಆ ಬಳಿಕ ಅವರಿಗೆ ಸಿನಿಮಾ ಅವಕಾಶಗಳು ಹೆಚ್ಚಾದವು. ಕನ್ನಡದಲ್ಲೂ ಅವರು ನಟಿಸುತ್ತಿದ್ದಾರೆ. ಪ್ರಿಯಾ ಪ್ರಕಾಶ್ ವಾರಿಯರ್ (Priya P. Varrier) ನಟನೆಯ ‘ವಿಷ್ಣುಪ್ರಿಯ’ ಸಿನಿಮಾ (Vishnu Priya) ಕೌತುಕ ಮೂಡಿಸಿದೆ. ಈ ಸಿನಿಮಾಗೆ ಶ್ರೇಯಸ್ ಮಂಜು ಹೀರೋ. ತೊಂಬತ್ತರ ದಶಕದ ಸಮ್ಮೋಹಕ ಪ್ರೇಮಕಥಾನಕ ಹೊಂದಿರುವ ಚಿತ್ರದಿಂದ ಹೊಸ ಹಾಡು ಬಿಡುಗಡೆ ಆಗಿದೆ. ಈ ಹಿಂದೆ ‘ಪಡ್ಡೆಹುಲಿ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ಶ್ರೇಯಸ್ ಮಂಜು (Shreyas Manju) ಈಗ ವಿಷ್ಣುಪ್ರಿಯನಾಗಿ ಬರುತ್ತಿದ್ದಾರೆ.
ಈ ಸಿನಿಮಾದಲ್ಲಿ ಶ್ರೇಯಸ್ ಮಂಜು ಅವರಿಗೆ ವಿಶಿಷ್ಟವಾದ ಪಾತ್ರವಿದೆ. ಈ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ಅವರು ತಯಾರಾಗಿದ್ದಾರೆ. ‘ವಿಷ್ಣುಪ್ರಿಯ’ ಸಿನಿಮಾ ಚೆಂದದ ಹಾಡೊಂದು ವಾರಗಳ ಹಿಂದೆ ಬಿಡುಗಡೆಗೊಂಡಿತ್ತು. ಇದೀಗ ದಿನದಿಂದ ದಿನಕ್ಕೆ ಆ ಹಾಡು ಟ್ರೆಂಡಿಂಗಿನತ್ತ ದಾಪುಗಾಲಿಡುತ್ತಿದೆ. ಕೇಳಿದ ತಕ್ಷಣವೇ ಪ್ರೇಮದೂರಿಗೆ ಕೈ ಹಿಡಿದು ಕರೆದೊಯ್ಯುವ ಫೀಲ್ ಹೊಂದಿರುವ ಈ ಪ್ರೇಮಗೀತೆ ಹೆಚ್ಚೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ. ಸಿನಿಪ್ರಿಯರಿಂದ ಮೆಚ್ಚುಗೆ ಗಳಿಸುತ್ತಿದೆ.
ಇದನ್ನೂ ಓದಿ: ನೀರಿನಲ್ಲಿ ಮುಳುಗಿ ಮೈ ಮರೆತ ನಟಿ ಪ್ರಿಯಾ ಪ್ರಕಾಶ್ ವಾರಿಯರ್
‘ಚಿಗುರು ಚಿಗುರೊ ಸಮಯ ಹಿತವಾದ ಒಂದು ಮೌನ.. ಒಲವು ಚಿಗುರೊ ಸಮಯ ಎದೆ ಬೇರಿನಲ್ಲಿ ಮೌನ…’ ಎಂಬ ಸಾಲಿನಿಂದ ಶುರುವಾಗುವ ಈ ಗೀತೆಯು ಸಂಗೀತ ಮತ್ತು ಸಾಹಿತ್ಯದ ಜೊತೆಗೆ ರೊಮ್ಯಾಂಟಿಕ್ ಆದ ದೃಶ್ಯದ ಮೂಲಕವೂ ಗಮನ ಸೆಳೆಯುತ್ತಿದೆ. ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಇದಕ್ಕೆ ಸಾಹಿತ್ಯ ಒದಗಿಸಿದ್ದಾರೆ. ಈ ಮೂಲಕ ವರ್ಷದ ಆರಂಭದಲ್ಲಿಯೇ ನವಿರು ಭಾವವೊಂದನ್ನು ನಾಗೇಂದ್ರ ಪ್ರಸಾದ್ ಕೇಳುಗರಿಗೆ ನೀಡಿದ್ದಾರೆ.
ಇದನ್ನೂ ಓದಿ: ದೇವಕನ್ಯೆಯಾದ ಕಣ್ಸನ್ನೆ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್
ನಜೀನ್ ಅರ್ಷಾದ್ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಈ ಸಿನಿಮಾದ ಮೂಲಕ ಕೇರಳದ ಪ್ರಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಕನ್ನಡದಲ್ಲಿಯೂ ಕಮಾಲ್ ಮಾಡಿದ್ದಾರೆ ಎನ್ನಬಹುದು. ಮತ್ತೆ ಮತ್ತೆ ಕೇಳಿಸಿಕೊಳ್ಳುವ ಗುಣ ಹೊಂದಿರುವ ಈ ಡ್ಯುಯೆಟ್ ಗೀತೆಯ ಪ್ರಭೆಯಲ್ಲಿ ವಿಷ್ಣುಪ್ರಿಯನ ಕ್ರೇಜ್ ಮತ್ತಷ್ಟು ಹೆಚ್ಚುತ್ತಿದೆ. ಈ ವರ್ಷದ ಸುಮಧುರ ಹಾಡು ಎಂದು ಗುರುತಿಸಿಕೊಳ್ಳುವ ಎಲ್ಲ ಗುಣಗಳೂ ಈ ಹಾಡಿಗೆ ಇದೆ. ವಿ.ಕೆ. ಪ್ರಕಾಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
90ರ ದಶಕದಲ್ಲಿ ನಡೆಯುವ ಕಥೆ ಈ ಸಿನಿಮಾದಲ್ಲಿ ಇರಲಿದೆ. ಶ್ರೇಯಸ್ ಮಂಜು ಮತ್ತು ಪ್ರಿಯಾ ವಾರಿಯರ್ ಅವರ ಕಾಂಬಿನೇಷನ್ ಕೌತುಕ ಮೂಡಿಸಿದೆ. ಕೆ. ಮಂಜು ನಿರ್ಮಾಣದ ‘ವಿಷ್ಣುಪ್ರಿಯ’ ಸಿನಿಮಾದಲ್ಲಿ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಇದರಲ್ಲಿ ಪ್ರೇಮಕಥೆ ಅಷ್ಟೇ ಅಲ್ಲದೇ ತೊಂಬತ್ತರ ದಶಕದಲ್ಲಿ ನಡೆದ ನೈಜ ಕಥೆಯೂ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ