ಮದುವೆ, ಮಕ್ಕಳು ಆದ ನಂತರದಲ್ಲಿ ನಟಿಯರಿಗೆ ಚಿತ್ರರಂಗದಲ್ಲಿ ಅವಕಾಶ ಸಿಗುವುದಿಲ್ಲ ಎಂಬ ಒಂದು ಗೊಡ್ಡು ನಂಬಿಕೆ ಇದೆ. ಆದರೆ, ಇದನ್ನು ಸುಳ್ಳು ಮಾಡಿದ ಅನೇಕರಿದ್ದಾರೆ. ಅನೇಕ ನಟಿಯರು ಸಂಸಾರದಲ್ಲಿ ಬ್ಯುಸಿ ಆದ ನಂತರವೂ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಯಶಸ್ಸು ಕಂಡಿದ್ದಾರೆ. ಕನ್ನಡದ ನಟಿ ಶ್ವೇತಾ ಶ್ರೀವಾತ್ಸವ (Shwetha Srivatsav) ಕೂಡ ಈ ಸಾಲಿನಲ್ಲಿ ನಿಲ್ಲುತ್ತಾರೆ. ಈ ಕುರಿತು ಅವರು ಒಂದು ಪುಸ್ತಕ (Book) ಬರೆಯಲು ಹೊರಟಿದ್ದಾರೆ. ಅಷ್ಟೇ ಅಲ್ಲ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.
ಶ್ವೇತಾ ಶ್ರೀವಾತ್ಸವ ಅವರು ಕಿರುತೆರೆಯಲ್ಲಿ ಗುರುತಿಸಿಕೊಂಡವರು. ನಂತರ ಅವರು ಚಿತ್ರರಂಗದಲ್ಲಿ ಬ್ಯುಸಿ ಆದರು. 2013ರಲ್ಲಿ ತೆರೆಗೆ ಬಂದ ‘ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ಚಿತ್ರದಿಂದ ಶ್ವೇತಾ ಜನಪ್ರಿಯತೆ ಸಾಕಷ್ಟು ಹೆಚ್ಚಿತು. 2017ರಲ್ಲಿ ಶ್ವೇತಾ ಕುಟುಂಬಕ್ಕೆ ಹೊಸ ಸದಸ್ಯಯೆಯ ಆಗಮನವಾಯಿತು. ಹೀಗಾಗಿ, ಅವರು ಚಿತ್ರರಂಗದಿಂದ ಒಂದು ಬ್ರೇಕ್ ತೆಗೆದುಕೊಂಡರು.
ಚಿತ್ರರಂಗದಿಂದ ಸುಮಾರು 6 ವರ್ಷ ಬ್ರೇಕ್ ತೆಗೆದುಕೊಂಡಿದ್ದ ಶ್ವೇತಾ ಅವರು ಕುಟುಂಬದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈ ತಿಂಗಳ ಆರಂಭದಲ್ಲಿ ತೆರೆಗೆ ಬಂದ ‘ಹೋಪ್’ ಚಿತ್ರದ ಮೂಲಕ ಶ್ವೇತಾ ಚಿತ್ರರಂಗಕ್ಕೆ ಮರಳಿದ್ದಾರೆ. ಇನ್ನೂ ಎರಡು ಸಿನಿಮಾಗಳು ಅವರ ಕೈಯಲ್ಲಿ ಇವೆ. ಅವರು ಚಿತ್ರರಂಗಕ್ಕೆ ಬಂದಿದ್ದು ಹೇಗೆ ಎಂಬ ಕುರಿತು ಪುಸ್ತಕ ಬರೆಯಲಿದ್ದಾರೆ. ಈ ಮೂಲಕ ಅನೇಕರಿಗೆ ಸ್ಫೂರ್ತಿ ಆಗಲಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ ಶ್ವೇತಾ. ಇದರಲ್ಲಿ ತಾವು ಪುಸ್ತಕ ಬರೆಯುತ್ತಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ‘ನಮಸ್ಕಾರ, ಒಂದು ಮುಖ್ಯವಾದ ವಿಷಯ ತಿಳಿಸುವುದಿತ್ತು. ಮದುವೆಯಾದ ನಂತರ ಸಿನಿಮಾಗಳಲ್ಲಿ ಮುಖ್ಯಭೂಮಿಕೆ ನಿರ್ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯಲ್ಲಿ, ಈ ಚಿತ್ರ-ರಂಗಕ್ಕೆ ಪ್ರವೇಶ ನೀಡಿರುವ ನನ್ನ ಅಸಾಧ್ಯವಾದ ಪ್ರಯತ್ನ ದ ಕುರಿತು, ಒಂದು ಪುಸ್ತಕ ಬರೆಯುತಿದ್ದೇನೆ. ಇದರಿಂದ ಯಾರಿಗಾದರೂ ಸ್ಫೂರ್ತಿ ಸಿಗಬಹುದೇನೋ ಎಂಬುದು ಇದರ ಮುಖ್ಯ ಉದ್ದೇಶ’ ಎಂದು ಹೇಳಿದ್ದಾರೆ ಅವರು.
‘ನಿಮ್ಮಲ್ಲಿ ನನ್ನ ಕುರಿತು ಯಾವುದೇ ಪ್ರಶ್ನೆಗಳಿದ್ದರೂ, ಅದನ್ನು shwethasrivatsav04@gmail.com ಗೆ ಕಳುಹಿಸಿ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ನನ್ನ ಪುಸ್ತಕದಲ್ಲಿ ಪ್ರಕಟಿಸಲಾಗುತ್ತದೆ. ನಿಮ್ಮ ಹೆಸರು ಅನಾಮಧೇಯವಾಗಿರಿಸಬೇಕೆಂದರೆ ಖಂಡಿತ ಅದನ್ನು ನಾವು ಗೌರವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
Published On - 4:35 pm, Fri, 29 July 22