2022ನೇ ಸಾಲಿನ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ (SIIMA Awards) ಕಾರ್ಯಕ್ರಮ ಈ ಬಾರಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಇಂದು (ಸೆಪ್ಟೆಂಬರ್ 10) ಹಾಗೂ ನಾಳೆ (ಸೆಪ್ಟೆಂಬರ್ 11) ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಅದ್ದೂರಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭ ಆಗಿದ್ದು, ಯಶ್ ಸೇರಿ ಅನೇಕ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಕಳೆದ ವರ್ಷ ನಿಧನ ಹೊಂದಿದ ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಇಂದಿನ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಸಲ್ಲಿಕೆ ಮಾಡಲಾಗುತ್ತಿದೆ.
‘ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್’ ಇದು ಸೈಮಾದ ವಿಸ್ತಾರ ರೂಪ. ಇದು ಆರಂಭಗೊಂಡಿದ್ದು 2012ರಲ್ಲಿ. ಹೀಗಾಗಿ, ಸೈಮಾ ಈ ಬಾರಿ 10 ವರ್ಷದ ಸಂಭ್ರಮಾಚರಣೆಯಲ್ಲಿ ಇದೆ. ಈ ಕಾರಣಕ್ಕೂ ಸೈಮಾ ಕಾರ್ಯಕ್ರಮ ವಿಶೇಷವಾಗಿದೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ಸಿನಿಮಾಗಳು ಸೈಮಾ ಅಡಿಯಲ್ಲಿ ಬರುತ್ತವೆ. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ನಟ-ನಟಿ ಸೇರಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ಭಾಷೆಯಲ್ಲಿ ಸುಮಾರು 19 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಈಗಾಗಲೇ ನಾಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ವಿನ್ನರ್ ಯಾರು ಎಂಬುದು ಇಂದು ಘೋಷಣೆ ಆಗಲಿದೆ.
ಮೊದಲ ದಿನದ ಕಾರ್ಯಕ್ರಮದಲ್ಲಿ ಹಲವು ಸ್ಟಾರ್ಗಳ ಸಮಾಗಮ ಆಗಲಿದೆ. ‘ಕೆಜಿಎಫ್ 2’ ಮೂಲಕ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದ ಯಶ್ ಅವರು ಮುಖ್ಯ ಅತಿಥಿ ಆಗಿ ಬರುತ್ತಿದ್ದಾರೆ. ‘ಪುಷ್ಪ’ ಹೀರೋ ಅಲ್ಲು ಅರ್ಜುನ್ ಕೂಡ ಅತಿಥಿಗಳ ಸಾಲಿನಲ್ಲಿದ್ದಾರೆ. ವಿಜಯ್ ದೇವರಕೊಂಡ, ತಮಿಳು ನಟ ಕಮಲ್ ಹಾಸನ್, ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ಮೊದಲ ದಿನ ಅತಿಥಿಯಾಗಿ ಬರಲಿದ್ದಾರೆ ಎಂದು ಬಾಲಿವುಡ್ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: SIIMA Awards: ಮೊದಲ ಬಾರಿ ಬೆಂಗಳೂರಲ್ಲಿ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ; ಪುನೀತ್ಗೆ ವಿಶೇಷ ಗೌರವಾರ್ಪಣೆ
ಪ್ರತಿ ಬಾರಿ ಸೈಮಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲಾಗುತ್ತದೆ. ಈ ಬಾರಿಯೂ ಸೈಮಾ ಅನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಕನ್ನಡಿಗರ ಪಾಲಿಗೆ ವಿಶೇಷವಾಗಿದೆ.