‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್​ಸಿಬಿ’ ಮ್ಯಾಚ್​; ಸಿಂಪಲ್ ಸುನಿಯ ಹೊಸ ಐಡಿಯಾ

ನಿರ್ದೇಶಕ ಸಿಂಪಲ್​ ಸುನಿ ಅವರು ಸದಾ ಹೊಸಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರ ಎದುರು ಬರುತ್ತಾರೆ. ಈ ಬಾರಿ ‘ಅವತಾರ ಪುರುಷ’ ಚಿತ್ರಕ್ಕೆ ಅವರು ಬಳಕೆ ಮಾಡಿಕೊಂಡಿದ್ದು ಐಪಿಎಲ್​ ಮ್ಯಾಚ್​ಅನ್ನು.

‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್​ಸಿಬಿ’ ಮ್ಯಾಚ್​; ಸಿಂಪಲ್ ಸುನಿಯ ಹೊಸ ಐಡಿಯಾ
ಅವತಾರ ಪುರುಷ ಟೀಂ-ಆರ್​ಸಿಬಿ
Updated By: ರಾಜೇಶ್ ದುಗ್ಗುಮನೆ

Updated on: Mar 30, 2022 | 7:47 PM

ಪ್ರತಿ ಶುಕ್ರವಾರ ಬೇರೆಬೇರೆ ಭಾಷೆಗಳ ಹಲವು ಸಿನಿಮಾಗಳು ತೆರೆಕಾಣುತ್ತವೆ. ಕೆಲವು ಚಿತ್ರಗಳು ಯಾವಾಗ ಬಂದು, ಯಾವಾಗ ಕಾಲ್ಕೀಳುತ್ತವೆ ಅನ್ನುವುದೇ ಗೊತ್ತಾಗುವುದಿಲ್ಲ. ಈ ಕಾರಣಕ್ಕೆ ಸಿನಿಮಾ ಮಾಡಿದರೆ ಮಾತ್ರ ಕೆಲಸ ಪೂರ್ಣಗೊಂಡಂತೆ ಅಲ್ಲ. ಅದನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸವೂ ಆಗಬೇಕು. ಪದೇಪದೇ ಸಿನಿಮಾ ಹೆಸರು ಕಿವಿಮೇಲೆ ಬೀಳುತ್ತಿರಬೇಕು. ಆಗ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಾರೆ. ಚಿತ್ರದ ಪ್ರಚಾರ ಮಾಡೋಕೆ ದೊಡ್ಡ ಮಟ್ಟದಲ್ಲಿ ಹಣ ಇರಬೇಕು ಎನ್ನುವ ಕಲ್ಪನೆ ಇದೆ. ಆದರೆ, ಇದನ್ನು ಸುಳ್ಳು ಮಾಡಿದ್ದಾರೆ ನಿರ್ದೇಶಕ ಸಿಂಪಲ್​ ಸುನಿ (Simple Suni). ಭಿನ್ನವಾಗಿ ವಿಡಿಯೋ ಮಾಡಿ ‘ಅವತಾರ ಪುರುಷ’ ಸಿನಿಮಾದ (Avatara Purusha Movie) ಪ್ರಚಾರ ಮಾಡುತ್ತಿದ್ದಾರೆ.

ನಿರ್ದೇಶಕ ಸಿಂಪಲ್​ ಸುನಿ ಅವರು ಸದಾ ಹೊಸಹೊಸ ಆಲೋಚನೆಗಳೊಂದಿಗೆ ಪ್ರೇಕ್ಷಕರ ಎದುರು ಬರುತ್ತಾರೆ. ಈ ಮೊದಲು ಹಲವು ಕ್ರಿಯೇಟಿವ್ ವಿಡಿಯೋಗಳನ್ನು ಮಾಡಿ ಭೇಷ್​ ಎನಿಸಿಕೊಂಡಿದ್ದಾರೆ. ಈ ಬಾರಿ ‘ಅವತಾರ ಪುರುಷ’ ಚಿತ್ರಕ್ಕೆ ಅವರು ಬಳಕೆ ಮಾಡಿಕೊಂಡಿದ್ದು ಐಪಿಎಲ್​ ಮ್ಯಾಚ್​ಅನ್ನು. ಅದರಲ್ಲೂ ಬಹುಮುಖ್ಯವಾಗಿ ಆರ್​ಸಿಬಿ ಮ್ಯಾಚ್​ಅನ್ನು.

ಈ ಬಾರಿ 10 ತಂಡಗಳು ಐಪಿಎಲ್​ನಲ್ಲಿ ಸೆಣೆಸುತ್ತಿವೆ. ಪ್ರತಿ ಆರ್​ಸಿಬಿ ಮ್ಯಾಚ್​ ಇದ್ದಾಗಲೂ ಒಂದು ಹೊಸ ವಿಡಿಯೋ ಮೂಲಕ ಬರುತ್ತಿದ್ದಾರೆ ಸಿಂಪಲ್​ ಸುನಿ. ಆರ್​ಸಿಬಿ vs ಪಂಜಾಬ್ ಕಿಂಗ್ಸ್ ಪಂದ್ಯವಿದ್ದಾಗ ಒಂದು ವಿಡಿಯೋ ಮಾಡಿ ಬಿಟ್ಟಿದ್ದರು. ಇಂದು (ಮಾರ್ಚ್​ 30) ಕೋಲ್ಕತ್ತಾ ತಂಡವನ್ನು ಬೆಂಗಳೂರು ಎದುರಿಸುತ್ತಿದೆ. ಹೀಗಾಗಿ, ಹೊಸ ವಿಡಿಯೋ ಹರಿಬಿಡಲಾಗಿದೆ. ಇದು ಸಖತ್ ರೀಚ್ ಪಡೆದುಕೊಳ್ಳುತ್ತಿದೆ.

ಹಾಗಾದರೆ, ಈ ವಿಡಿಯೋದಲ್ಲಿ ಇರೋದು ಏನು? ಆ ಪ್ರಶ್ನೆಗೂ ಉತ್ತರ ಇದೆ. ‘ಅವತಾರ ಪುರುಷ’ ಸಿನಿಮಾದಲ್ಲಿ ಹಾಸ್ಯದ ಜತೆಗೆ ಮಾಟಮಂತ್ರದ ವಿಚಾರ ಹೇಳಲಾಗಿದೆ. ಇದು ಇತ್ತೀಚೆಗೆ ರಿಲೀಸ್ ಆದ ಟೀಸರ್ ಮೂಲಕ ಪ್ರೇಕ್ಷಕರಿಗೆ ಗೊತ್ತಾಗಿದೆ. ಆರ್​ಸಿಬಿ ವಿರುದ್ಧ ಆಡುವ ಟೀಂಗೆ ಮಾಟ ಮಾಡಬೇಕು ಎನ್ನುವ ವಿಚಾರವನ್ನು ಫನ್ನಿಯಾಗಿ ಹೇಳಿದ್ದಾರೆ ಸಿಂಪಲ್ ಸುನಿ.

ಈ ಬಗ್ಗೆ ಮಾತನಾಡಿರುವ ಸುನಿ, ‘ನಮಗೆ ಯೂಟ್ಯೂಬ್​ನಲ್ಲಿ ವೀವ್ಸ್​ ಪಡೆದುಕೊಳ್ಳಬೇಕು ಎನ್ನುವ ಉದ್ದೇಶ ಇಲ್ಲ. ಹೀಗಾಗಿ, ಎಲ್ಲಾ ಸೋಶಿಯಲ್​ ಮೀಡಿಯಾಗಳಲ್ಲೂ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದೇವೆ. ಮೊದಲ ವಿಡಿಯೋ ಒಟ್ಟಾರೆ 5 ಲಕ್ಷ ವೀಕ್ಷಣೆ ಕಂಡಿದೆ. ಐದು ಲಕ್ಷದಲ್ಲಿ ಐದು ಸಾವಿರ ಜನರು ಬಂದು ಸಿನಿಮಾ ನೋಡಿದರೂ ನಾವು ವಿಡಿಯೋ ಮಾಡಿದ್ದಕ್ಕೂ ಸಾರ್ಥಕ’ ಎನ್ನುತ್ತಾರೆ. ಮುಂಬರುವ ಎಲ್ಲಾ ಆರ್​ಸಿಬಿ ಮ್ಯಾಚ್​ ದಿನವೂ ಈ ರೀತಿಯ ವಿಡಿಯೋ ಬಿಡುವ ಆಲೋಚನೆಯಲ್ಲಿ ಸುನಿ ಇದ್ದಾರೆ. ‘ಪುಷ್ಕರ್ ಫಿಲ್ಮ್ಸ್​’ ಯೂಟ್ಯೂಬ್ ಚಾನೆಲ್​ನಲ್ಲಿ ವಿಡಿಯೋ ರಿಲೀಸ್ ಆಗುತ್ತಿದೆ.

ಮೇ 6ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್​ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸುನಿ ನಿರ್ದೇಶನದ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್​ ಚಿತ್ರದ ಛಾಯಾಗ್ರಹಣ ಜವಾಬ್ದಾರಿ ನಿಭಾಯಿಸಿದ್ದಾರೆ. ಶರಣ್​ಗೆ ಜತೆಯಾಗಿ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಅವತಾರ ಪುರುಷ’ದಲ್ಲಿ ಶರಣ್​ಗೆ ಎಷ್ಟು ಅವತಾರ? ಅವರು ಹೇಳಿದ್ದು ಇಷ್ಟು

ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್​ನಲ್ಲಿ ಮತ್ತೊಂದು ಮುಖ ಅನಾವರಣ