ಅರ್ಚನಾ ಉಡುಪ ಆರೋಗ್ಯದ ಬಗ್ಗೆ ಅಪಪ್ರಚಾರ; ಕ್ಯಾನ್ಸರ್ ಕುರಿತು ಗಾಯಕಿ ಸ್ಪಷ್ಟನೆ

‘ದಯವಿಟ್ಟು ಪೂರ್ತಿ ವಿಷಯವನ್ನು ತಿಳಿದುಕೊಳ್ಳದೇ, ಸೋಶಿಯಲ್ ಮೀಡಿಯಾದಲ್ಲಿ ಅರ್ಧಂಬರ್ಧ ನೋಡಿಕೊಂಡು ಏನೇನೋ ಊಹೆ ಮಾಡಿಕೊಳ್ಳಬೇಡಿ. ಇದರಿಂದ ಯಾರೋ ಒಬ್ಬರ ವೃತ್ತಿ ಜೀವನ ಮತ್ತು ಖಾಸಗಿ ಜೀವನಕ್ಕೆ ಘಾಸಿ ಆಗುವುದು ತಪ್ಪುತ್ತದೆ’ ಎಂದು ಅರ್ಚನಾ ಉಡುಪ ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

ಅರ್ಚನಾ ಉಡುಪ ಆರೋಗ್ಯದ ಬಗ್ಗೆ ಅಪಪ್ರಚಾರ; ಕ್ಯಾನ್ಸರ್ ಕುರಿತು ಗಾಯಕಿ ಸ್ಪಷ್ಟನೆ
Archana Udupa

Updated on: May 16, 2025 | 6:35 PM

ಕನ್ನಡದ ಖ್ಯಾತ ಗಾಯಕಿ, ನಿರೂಪಕಿ ಮತ್ತು ನಟಿ ಅರ್ಚನಾ ಉಡುಪ (Archana Udupa) ಅವರು ಒಂದು ಮುಖ್ಯವಾದ ವಿಷಯಕ್ಕೆ ಸ್ಪಷ್ಟನೆ ನೀಡಿದ್ದಾರೆ. ಹಲವಾರು ಹಾಡುಗಳ ಮೂಲಕ ಮನರಂಜನೆ ನೀಡಿರುವ ಅರ್ಚನಾ ಬಗ್ಗೆ ಕೆಲವರು ಅಪಪ್ರಚಾರ ಮಾಡಿದ್ದಾರೆ. ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದು ಗಾಸಿಪ್ ಹಬ್ಬಿಸಲಾಗಿದೆ. ಅಲ್ಲದೇ, ಕ್ಯಾನ್ಸರ್ (Cancer) ಇದೆ ಎಂದೆಲ್ಲ ಮಾತನಾಡಿಕೊಳ್ಳಲಾಗಿದೆ. ಆದರೆ ಅದು ಯಾವುದೂ ನಿಜವಲ್ಲ. ಆ ಎಲ್ಲ ಗಾಸಿಪ್​ಗಳಿಗೆ ಸಂಬಂಧಿಸಿದಂತೆ ಸ್ವತಃ ಅರ್ಚನಾ ಉಡುಪ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ನನ್ನನ್ನು ತುಂಬ ದಿನಗಳಿಂದ ಕಾಡುತ್ತಿದ್ದ ಎರಡು ಮುಖ್ಯವಾದ ವಿಚಾರವನ್ನು ಇವತ್ತು ನಾನು ನಿಮ್ಮ ಮುಂದೆ ಹಂಚಿಕೊಳ್ಳಬೇಕು ಅಂತ ಈ ವಿಡಿಯೋ ಮಾಡುತ್ತಿದ್ದೇನೆ. ಈ ವಿಡಿಯೋ ಮಾಡಬೇಕೋ ಬೇಡವೋ? ಇದರಿಂದ ಏನಾದರೂ ಉಪಯೋಗ ಆಗತ್ತೋ ಇಲ್ಲವೋ ಎಂಬ ಅನುಮಾನ ಮನಸ್ಸಿನಲ್ಲಿ ಇತ್ತು. ಆದರೆ ಬರುಬರುತ್ತ ಇದರ ಕಿರಿಕಿರಿ ಜಾಸ್ತಿ ಆಗುತ್ತಿರುವುದರಿಂದ ಈ ವಿಷಯವನ್ನು ನಿಮ್ಮ ಜೊತೆ ಹಂಚಿಕೊಳ್ಳಲೇಬೇಕು ಅಂತ ಅಂದುಕೊಂಡೆ’ ಎನ್ನುವ ಮೂಲಕ ಅರ್ಚನಾ ಉಡುಪ ಅವರು ಮಾತು ಆರಂಭಿಸಿದ್ದಾರೆ.

ಇದನ್ನೂ ಓದಿ
ರಕ್ತ ಕ್ಯಾನ್ಸರ್‌ಗೆ ಕಾರಣವೇನು?
ಯುವಜನತೆಯಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ; ಅಧ್ಯಯನ
ಮಹಿಳೆಯರು ಅಂಡಾಶಯದ ಕ್ಯಾನ್ಸರ್​ನ ಈ 8 ಲಕ್ಷಣಗಳನ್ನೆಂದೂ ನಿರ್ಲಕ್ಷ್ಯಿಸಬೇಡಿ
ಕುಟುಂಬದಲ್ಲಿ ಕ್ಯಾನ್ಸರ್ ಇದ್ದರೆ, ನೀವೂ ಸಹ ಮುನ್ನೆಚ್ಚರಿಕೆ ತೆಗೆದುಕೊಳ್ಳಿ

‘ಮೂರು-ನಾಲ್ಕು ವರ್ಷಗಳ ಹಿಂದೆ ನಾನು ಒಂದು ಸಂದರ್ಶನ ನೀಡಿದ್ದೆ. ನನಗೆ 20 ವರ್ಷಗಳ ಹಿಂದೆ ಗಂಟಲಿನಲ್ಲಿ ಸಣ್ಣ ಸಮಸ್ಯೆ ಉಂಟಾಗಿ ತಿಂಗಳುಗಳ ಕಾಲ ನನಗೆ ಹಾಡಲು ಆಗುತ್ತಾ ಇರಲಿಲ್ಲ ಎಂಬ ವಿಷಯವನ್ನು ಆ ಸಂದರ್ಶನದಲ್ಲಿ ಹೇಳಿಕೊಂಡಿದ್ದೆ. ಆ ತೊಂದರೆಯಿಂದ ನಾನು ಹೇಗೆ ಹೊರಗೆ ಬಂದೆ? ಮತ್ತೆ ಹೇಗೆ ಹಾಡಲು ಶುರು ಮಾಡಿದೆ ಎಂಬುದನ್ನು ನಾಲ್ಕು ಜನಕ್ಕೆ ಉಪಯೋಗ ಆಗಲಿ ಅಂತ ಹಂಚಿಕೊಂಡಿದ್ದೆ. ಪ್ರಚಾರಕ್ಕಾಗಿ ಅವರು ಅದರ ಕ್ಲಿಪ್ ಮಾತ್ರ ಹಾಕಿದ್ದಾರೆ. ಪೂರ್ತಿಯಾಗಿ ಸಂದರ್ಶನ ನೋಡದೇ ಕೇವಲ ಚಿಕ್ಕ ತುಣುಕು ನೋಡಿಕೊಂಡು ನನಗೆ ಹಾಡಲು ಆಗುತ್ತಿಲ್ಲ, ಹಾಡುವುದು ನಿಲ್ಲಿಸಿದ್ದೇನೆ, ಗಂಟಲು ಹೊರಟು ಹೋಗಿದೆ ಅಂತ ತುಂಬ ಜನ ಹಬ್ಬಿಸಿದ್ದಾರೆ’ ಎಂದು ಅರ್ಚನಾ ಉಡುಪ ಹೇಳಿದ್ದಾರೆ.

‘ಇದು ನನ್ನ ಮನಸ್ಸಿಗೆ ತುಂಬ ನೋವು ಕೊಡುತ್ತಿದೆ. ಎಲ್ಲಿ ಹೋದರೂ ನೀವು ಈಗ ಆರೋಗ್ಯವಾಗಿ ಇದ್ದಾರಾ? ಹಾಡುತ್ತಿದ್ದೀರಾ ಅಂತ ಕೇಳುತ್ತಾರೆ. ನಾನು ಈಗ ಮೊದಲಿಗಿಂತ ಹೆಚ್ಚು ಬ್ಯುಸಿ ಆಗಿದ್ದೇನೆ. ಮೊದಲಿಗಿಂತ ಹೆಚ್ಚು ಹಾಡುಗಳನ್ನು ಹೇಳುತ್ತಿದ್ದೇನೆ. ಇನ್ನೊಂದು ಮುಖ್ಯವಾದ ವಿಷಯ ಏನೆಂದರೆ, ಶಾರ್ಟ್​ ಹೇರ್​ ಕಟ್. ಇದನ್ನು ಯಾಕೆ ಮಾಡಿಸಿದ್ದು ಎಂದರೆ, ನಾನು ಒಂದು ಹೊಸ ಧಾರಾವಾಹಿಯಲ್ಲಿ ಪಾತ್ರ ಒಪ್ಪಿಕೊಂಡಿದ್ದೇನೆ. ಆ ಪಾತ್ರಕ್ಕೆ ಇದೇ ರೀತಿಯ ಹೇರ್​ ಕಟ್ ಮಾಡಿಸಿಕೊಳ್ಳಬೇಕು ಅಂತ ಚಾನೆಲ್​​ನವರು ಹೇಳಿದ್ದರಿಂದ ನಾನು ಹೀಗೆ ಮಾಡಿಸಿಕೊಳ್ಳಬೇಕಾಯಿತು’ ಎಂದಿದ್ದಾರೆ ಅರ್ಚನಾ ಉಡುಪ.

ಇದನ್ನೂ ಓದಿ: ಆರಂಭಿಕ ಹಂತದಲ್ಲಿರುವ ಅಂಡಾಶಯದ ಕ್ಯಾನ್ಸರ್ ಗುರುತಿಸುವುದು ಹೇಗೆ?

‘ನನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ಅವರವರೇ ಏನೇನೋ ಊಹೋಪೋಹಗಳನ್ನು ಮಾಡಿಕೊಂಡು, ನನಗೆ ಕ್ಯಾನ್ಸರ್ ಬಂದಿದೆ ಎಂಬ ಹಂತಕ್ಕೆ ಮಾತನಾಡಿಬಿಟ್ಟಿದ್ದಾರೆ. ಇದರಿಂದ ನನಗಿಂತಲೂ ಹೆಚ್ಚಾಗಿ ನನ್ನ ತಂದೆ-ತಾಯಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ತುಂಬ ನೋವಾಗಿದೆ. ನಿಮ್ಮೆಲ್ಲರ ಆಶೀರ್ವಾದ ಸದಾ ನನ್ನ ಮೇಲಿರಲಿ. ನಾನು ದೇವರ ದಯೆಯಿಂದ ಗಟ್ಟಿಮುಟ್ಟಾಗಿ, ಆರೋಗ್ಯವಾಗಿದ್ದೇನೆ’ ಎಂದು ಅರ್ಚನಾ ಉಡುಪ ಅವರು ಸ್ಪಷ್ಟನೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.