‘ಓಲ್ಡ್ ಮಾಂಕ್’ ಬಿಡುಗಡೆಗೆ ದಿನಾಂಕ ಫಿಕ್ಸ್; ಫೆ.25ಕ್ಕೆ ತೆರೆಕಾಣಲಿದೆ ಶ್ರೀನಿ, ಅದಿತಿ ಪ್ರಭುದೇವ ಸಿನಿಮಾ
‘ಬೀರ್ಬಲ್’, ‘ಶ್ರೀನಿವಾಸ ಕಲ್ಯಾಣ’ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಅವರು ‘ಓಲ್ಡ್ ಮಾಂಕ್’ ಮೂಲಕ ಯಾವ ರೀತಿ ಮನರಂಜನೆ ನೀಡಲಿದ್ದಾರೆ ಎಂಬುದು ಫೆ.25ರಂದು ಗೊತ್ತಾಗಲಿದೆ. ಈ ಚಿತ್ರದ ಟ್ರೇಲರ್ ಕೌತುಕ ಮೂಡಿಸಿದೆ.
ಬಹುನಿರೀಕ್ಷಿತ ಅನೇಕ ಸಿನಿಮಾಗಳ ರಿಲೀಸ್ ದಿನಾಂಕದ ಬಗ್ಗೆ ಚಿತ್ರತಂಡಗಳು ಘೋಷಣೆ ಮಾಡುತ್ತಿವೆ. ಕೊರೊನಾ ವೈರಸ್ ಮೂರನೇ ಅಲೆಯ ಕಾರಣದಿಂದ ರಿಲೀಸ್ ಡೇಟ್ ಮುಂದೂಡಿಕೊಂಡಿದ್ದ ಸಿನಿಮಾಗಳೆಲ್ಲ ಈಗ ಬಿಡುಗಡೆಗೆ ಸಜ್ಜಾಗುತ್ತಿವೆ. ಕನ್ನಡದ ‘ಓಲ್ಡ್ ಮಾಂಕ್’ ಸಿನಿಮಾ (Old Monk Movie) ಕೂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಶ್ರೀನಿ (ಎಂ.ಜಿ. ಶ್ರೀನಿವಾಸ್) ಮತ್ತು ಅದಿತಿ ಪ್ರಭುದೇವ (Aditi Prabhudeva) ಜೋಡಿಯಾಗಿ ನಟಿಸಿರುವ ಈ ಸಿನಿಮಾ ಫೆ.25ರಂದು ಬಿಡುಗಡೆ ಆಗಲಿದೆ. ಹಲವು ದಿನಗಳ ಮುನ್ನವೇ ‘ಓಲ್ಡ್ ಮಾಂಕ್’ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಇಷ್ಟೊತ್ತಿಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಅದಕ್ಕೆ ಕೊರೊನಾ ಅಡ್ಡಿ ಆಗಿತ್ತು. ಈಗ ನಿಧಾನವಾಗಿ ಗಾಂಧಿನಗರದ ವಹಿವಾಟು ಸಹಜಸ್ಥಿತಿಗೆ ಮರಳುವ ಸೂಚನೆ ಸಿಕ್ಕಿದೆ. ಅನೇಕ ಸಿನಿಮಾಗಳು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಆ ಪೈಕಿ ‘ಓಲ್ಡ್ ಮಾಂಕ್’ ಕೂಡ ರಿಲೀಸ್ಗೆ ತಯಾರಿ ಮಾಡಿಕೊಂಡಿದೆ. ಶ್ರೀನಿ (Srini) ಅವರು ಹೀರೋ ಆಗಿ ನಟಿಸುವುದರ ಜೊತೆಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.
2021ರ ಅಕ್ಟೋಬರ್ನಲ್ಲಿಯೇ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿತ್ತು. ಒಂದು ಮಿಲಿಯನ್ಗಿಂತಲೂ ಹೆಚ್ಚು ಬಾರಿ ಈ ಟ್ರೇಲರ್ ವೀಕ್ಷಣೆ ಕಂಡಿದೆ. ಆ ಮೂಲಕ ಪ್ರೇಕ್ಷಕರಿಗೆ ‘ಓಲ್ಡ್ ಮಾಂಕ್’ ಸಿನಿಮಾ ಮೇಲೆ ಎಷ್ಟು ಕೌತುಕ ಇದೆ ಎಂಬುದು ಗೊತ್ತಾಗಿದೆ. ಸಖತ್ ಫನ್ನಿ ಆಗಿ ಈ ಟ್ರೇಲರ್ ಅನ್ನು ಕಟ್ಟಿಕೊಡಲಾಗಿದೆ. ರಣವೀರ್ ಸಿಂಗ್, ಎ.ಆರ್. ರೆಹಮಾನ್, ಉಪೇಂದ್ರ ಮುಂತಾದ ಘಟಾನಿಘಟಿಗಳ ಹೆಸರುಗಳು ಟ್ರೇಲರ್ನಲ್ಲಿ ಕಾಣಿಸಿಕೊಂಡಿದೆ. ಆದರೆ ಅವರ‍್ಯಾರಿಗೂ ಈ ಚಿತ್ರ ಸಂಬಂಧಪಟ್ಟಿಲ್ಲ! ಆರ್ಆರ್ಆರ್, ಕೆಜಿಎಫ್, ಟೈಟಾನಿಕ್, ಅವತಾರ್ ಮುಂತಾದ ಸಿನಿಮಾಗಳ ಶೀರ್ಷಿಕೆಗಳನ್ನು ಈ ಚಿತ್ರದ ಟ್ರೇಲರ್ನಲ್ಲಿ ಬಳಕೆ ಮಾಡಲಾಗಿದೆ. ಆದರೆ ಆ ಸಿನಿಮಾಗಳಿಗೂ ‘ಓಲ್ಡ್ ಮಾಂಕ್’ ಚಿತ್ರಕ್ಕೂ ಸಂಬಂಧ ಇಲ್ಲ. ಕೌತುಕ ಮೂಡಿಸುವ ಸಲುವಾಗಿ ಇಂಥದ್ದೊಂದು ಪ್ರಯೋಗವನ್ನು ಶ್ರೀನಿ ಮಾಡಿದ್ದಾರೆ.
ಅದಿತಿ ಪ್ರಭುದೇವ, ಶ್ರೀನಿ ಜೊತೆಗೆ ಸುಜಯ್ ಶಾಸ್ತ್ರಿ, ಎಸ್. ನಾರಾಯಣ್, ಸಿಹಿ ಕಹಿ ಚಂದ್ರು, ಅರುಣಾ ಬಾಲರಾಜ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಸೌರಭ್ ಮತ್ತು ವೈಭವ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ದೀಪು ಎಸ್. ಕುಮಾರ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣ ಮಾಡಿದ್ದಾರೆ.
‘ಬೀರ್ಬಲ್’, ‘ಶ್ರೀನಿವಾಸ ಕಲ್ಯಾಣ’ ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಶ್ರೀನಿ ಅವರು ಈ ಬಾರಿ ಯಾವ ರೀತಿಯ ಮನರಂಜನೆ ನೀಡಲಿದ್ದಾರೆ ಎಂಬುದು ಫೆ.25ರಂದು ಗೊತ್ತಾಗಲಿದೆ. ಫೆ.25ರೊಳಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ. ಹೌಸ್ ಪ್ರದರ್ಶನಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂಬ ಒತ್ತಾಯ ಚಿತ್ರರಂಗದಿಂದ ಕೇಳಿಬರುತ್ತಿದೆ.
ಇದನ್ನೂ ಓದಿ:
ರಿಲೀಸ್ ಡೇಟ್ ಮುಂದೂಡಿಕೊಂಡ ‘ಗಜಾನನ ಆ್ಯಂಡ್ ಗ್ಯಾಂಗ್’; ಚಿತ್ರತಂಡ ನೀಡಿದ ಕಾರಣ ಏನು?
ಪುನೀತ್ ನಟನೆಯ ‘ಜೇಮ್ಸ್’ ಶೂಟಿಂಗ್ ಮುಕ್ತಾಯ; ರಿಲೀಸ್ ಡೇಟ್ ತಿಳಿಯಲು ಕಾದಿರುವ ಅಭಿಮಾನಿಗಳು