‘ಸಾರಾಂಶ’: ಕತೆಗಾರನಿಂದ ಪಾತ್ರವೋ, ಪಾತ್ರದಿಂದ ಕತೆಗಾರನೋ
Saransha: ಕತೆಗಾರನಿಂದ ಪಾತ್ರವೋ, ಪಾತ್ರದಿಂದ ಕತೆಗಾರನೋ ಹೀಗೊಂದು ಪ್ರಶ್ನೆಗೆ ಉತ್ತರ ನೀಡುತ್ತೆ ‘ಸಾರಾಂಶ’. ಹೊಸ ನಿರ್ದೇಶಕರ ಈ ಸಿನಿಮಾ ಸಜ್ಜಾಗಿದೆ ಬಿಡುಗಡೆ.
ಕನ್ನಡ ಚಿತ್ರರಂಗ (Sandalwood) ಈಗ ಹೊಸಾ ಹರಿವಿನ ಮೂಲಕ ತಾಜಾತನ ಪಡೆದುಕೊಂಡಿದೆ. ಹೊಸ ತಂಡಗಳು, ಹೊಸ ಆಲೋಚನ್ನು, ಹೊಸ ಕತೆಗಳನ್ನು ಹೊತ್ತು ಬರುತ್ತಿದ್ದಾರೆ. ಎಲ್ಲ ಅಭಿರುಚಿತ ಪ್ರೇಕ್ಷಕರಿಗೂ ನೋಡಲು ಸಿನಿಮಾಗಳು ಸಿಗುತ್ತಿವೆ. ಇದೀಗ ಹೊಸದೊಂದು ತಂಡ ಸದ್ದೇ ಇಲ್ಲದೆ ಸಿನಿಮಾದ ಚತ್ರೀಕರಣ ಮುಗಿಸಿಕೊಂಡು ಬಿಡುಗಡೆ ಮಾಡಲು ಸಜ್ಜಾಗಿ ನಿಂತಿದೆ. ‘ಸಾರಾಂಶ’ ಹೆಸರಿನ ಸಿನಿಮಾವನ್ನು ಹೊಸ ಪ್ರತಿಭೆ ಸೂರ್ಯ ವಸಿಷ್ಠ ನಿರ್ದೇಶನ ಮಾಡಿದ್ದು, ಬಿಡುಗಡೆ ಮಾಡುವ ಕಾತುರದಲ್ಲಿದ್ದಾರೆ.
ತಮ್ಮನ್ನು ತಾವು ಹೊಸ ರೀತಿಯ ಸಿನಿಮಾಗಳಿಗೆ ಒಡ್ಡಿಕೊಳ್ಳುತ್ತಲೇ ಬರುತ್ತಿರುವ ನಟಿ ಶೃತಿ ಹರಿಹರನ್ ‘ಸಾರಾಂಶ’ ಸಿನಿಮಾದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಹೀಗೆ ಎದುರಾಗುವ ಪಾತ್ರವನ್ನು ಕಥೆಗಾರ ಬರೆದನೋ, ಅಥವಾ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬಂಥಾ ಸೂಕ್ಷ್ಮ ಕಲ್ಪನೆಯ ಸುತ್ತ ಈ ಸಿನಿಮಾ ಚಲಿಸುತ್ತದೆಯಂತೆ. ಸದ್ಯಕ್ಕೆ ನಿರ್ದೇಶಕರು ಇವಿಷ್ಟು ವಿಚಾರವನ್ನಷ್ಟೇ ಬಿಟ್ಟುಕೊಟ್ಟಿದ್ದಾರೆ. ಅದರ ಜೊತೆಗೆ ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರಿಗೆ ಈ ಸಿನಿಮಾ ಒಳಪಡಲಿದೆ ಎಂದು ತಮ್ಮ ಸಿನಿಮಾವನ್ನು ವಿವರಿಸಿದ್ದಾರೆ ನಿರ್ದೇಶಕ.
ಇದನ್ನೂ ಓದಿ:ಸೀರೆ ಉಟ್ಟು ಪೋಸ್ ಕೊಟ್ಟ ನಟಿ ಶ್ರುತಿ ಹರಿಹರನ್
ಸಿನಿಮಾದ ಚಿತ್ರೀಕರಣವನ್ನು ಯೋಜನೆಯಂತೆ ವ್ಯವಸ್ಥಿತವಾಗಿ ಮುಗಿಸಿದೆ ಚಿತ್ರತಂಡ. ಸಿನಿಮಾದ ಕತೆ ನಾಲ್ಕು ಮುಖ್ಯ ಪಾತ್ರಗಳ ಸುತ್ತ ಸುತ್ತುತ್ತದೆ. ನಾಲ್ಕು ಪ್ರಮುಖ ಪಾತ್ರಗಳಲ್ಲಿ ದೀಪಕ್ ಸುಬ್ರಹ್ಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ನಟಿಸಿದ್ದಾರೆ. ನಿರ್ದೇಶಕ ಸೂರ್ಯ ವಸಿಷ್ಠ ಜೊತೆಗೆ ‘ಗಂಟುಮೂಟೆ’ ಖ್ಯಾತಿಯ ರೂಪಾ ರಾವ್ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದಾರೆ. ‘ಆ ದಿನಗಳು’, ‘ತಮಸ್ಸು’, ‘ಮಠ’ ಮುಂತಾದ ಸಿನಿಮಾಗಳ ಮೂಲಕ ಖ್ಯಾತರಾಗಿರೋ ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
‘ಸಾರಾಂಶ’ ಸಿನಿಮಾದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಅವೆಲ್ಲವಕ್ಕೆ ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಮತ್ತು ಸೂರ್ಯ ವಸಿಷ್ಠ ಸಾಹಿತ್ಯವಿರೋ ಹಾಡುಗಳಿಗೆ ಮಾಧುರಿ ಶೇಷಾದ್ರಿ ಮತ್ತು ಪಂಚಮ್ ಜೀವಾ ಧ್ವನಿಯಾಗಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಭೀಮಸೇನ ನಳಮಹರಾಜ, ಗಂಟುಮೂಟೆ ಖ್ಯಾತಿಯ ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. ರವಿ ಕಶ್ಯಪ್ ಮತ್ತು ಆರ್ ಕೆ ನಲ್ಲಮ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ