
‘ಸು ಫ್ರಮ್ ಸೋ’ ಸಿನಿಮಾ (Su From So) ವಾರದ ಮಧ್ಯದಲ್ಲಿ ಅಂದರೆ ಬುಧವಾರ (ಜುಲೈ 30) ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾ ಮಾಡುತ್ತಿರುವ ಕಲೆಕ್ಷನ್ಗೆ ಹಲವು ದಾಖಲೆಗಳು ಉಡೀಸ್ ಆಗಿವೆ. ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಕೊಟ್ಟಿದೆ. ಇನ್ನೂ ಕೆಲವು ದಿನ ಕಲೆಕ್ಷನ್ ಹೀಗೆಯೇ ಮುಂದುವರೆಯುವ ಸಾಧ್ಯತೆ ಇದೆ. ಈ ಚಿತ್ರದ ಗೆಲುವಿನಿಂದ ತಂಡದವರ ಮೊಗದಲ್ಲಿ ನಗು ಮೂಡಿದೆ.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಚಿತ್ರದ ಆರು ದಿನಗಳ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 19 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಚಿತ್ರ ಸುಮಾರು 16.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಬುಧವಾರ ಕೂಡ ಸಿನಿಮಾ 3.50 ಕೋಟಿ ಬಾಚಿಕೊಂಡಿದೆ ಎಂಬುದು ವಿಶೇಷ.
ಶನಿವಾರ ಹಾಗೂ ಭಾನುವಾರ ಭರ್ಜರಿ ಗಳಿಕೆ ಮಾಡುವ ಸಿನಿಮಾಗಳು ವಾರದ ದಿನಗಳಲ್ಲಿ ಮಂಕಾಗುತ್ತವೆ. ಇದು ದೊಡ್ಡ ಬಜೆಟ್ ಸಿನಿಮಾಗಳಿಗೂ ಅನ್ವಯ ಆಗುತ್ತದೆ. ಹಲವು ಚಿತ್ರಗಳಿಗೆ ಈ ರೀತಿ ಆಗಿದ್ದು ಇದೆ. ಆದರೆ, ‘ಸು ಫ್ರಮ್ ಸೋ’ ವಿಚಾರದಲ್ಲಿ ಮಾತ್ರ ಅದು ಉಲ್ಟಾ ಆಗಿದೆ. ಭಾನುವಾರದಿಂದ ಆರಂಭ ಆಗಿ ಬುಧವಾರದವರೆಗೆ ಸಿನಿಮಾದ ಸರಾಸರಿ ಮೂರರಿಂದ ಮೂರುವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಯಶ್ ಅಂದು ಹೇಳಿದ ಮಾತು ನಿಜಮಾಡಿದ ರಾಜ್ ಬಿ. ಶೆಟ್ಟಿ, ಜೆಪಿ
ಯಾವುದೇ ಸ್ಟಾರ್ಸ್ ಇಲ್ಲದೆ ಹೊಸ ತಂಡದ ಸಿನಿಮಾವೊಂದು ಈ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಹೀಗಾಗಿ, ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿದೆ. ಈ ಚಿತ್ರ ನಾಳೆಯಿಂದ (ಆಗಸ್ಟ್ 1) ಮಲಯಾಳಂನಲ್ಲಿ ರಿಲೀಸ್ ಆಗಲಿದೆ. ದುಲ್ಕರ್ ಸಲ್ಮಾನ್ ಅವರು ಚಿತ್ರವನ್ನು ಹಂಚಿಕೆ ಮಾಡುತ್ತಿದ್ದಾರೆ. ಇದರಿಂದ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಲಿದೆ. ಒಟ್ಟಾರೆಯಾಗಿ ಸಿನಿಮಾ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:56 am, Thu, 31 July 25