
ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ (Su From So) ಸಿನಿಮಾ ಜುಲೈ 25ರಂದು ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾರರ್ ಕಾಮಿಡಿ ಶೈಲಿಯ ಈ ಚಿತ್ರಕ್ಕೆ ಜೆಪಿ ತುಮಿನಾಡ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಮಂಗಳೂರು, ಶಿವಮೊಗ್ಗದಲ್ಲಿ ಚಿತ್ರದ ಪ್ರೀಮಿಯರ್ ಶೋ ಆಗಿದೆ. ಸಿನಿಮಾ ರಿಲೀಸ್ಗೆ ನಾಲ್ಕು ದಿನ ಇರುವಾಗಲೇ ಪ್ರೀಮಿಯರ್ ಶೋ ಮಾಡಿದ್ದೇಕೆ ಎನ್ನುವ ಪ್ರಶ್ನೆಗೆ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.
‘ನಾವು ಏನೇ ಮಾಡಿದರೂ ಜನರ ಮುಂದೆ ಇಡಲೇಬೇಕು. ನಾವು ಸಿನಿಮಾ ಪ್ರಮೋಟರ್ಗಳಲ್ಲ, ಸಿನಿಮಾ ಮಾಡುವವರು. ಒಂದು ಮೊಟ್ಟೆಯ ಕಥೆ ಮಾಡುವಾಗ ರಿಸ್ಕ್ ಎಂದು ಹೇಳಿದರು. ಆದರೂ ಮಾಡಿದೆ. ಹಳೆ ಪ್ರಮೋಷನಲ್ ಸ್ಟೈಲ್ಗಳು ನನಗೆ ಇಷ್ಟ ಆಗೋದಿಲ್ಲ. ಸಂದರ್ಶನದಲ್ಲಿ ಕುಳಿತುಕೊಂಡು ನಮ್ಮ ಸಿನಿಮಾ ಹೀಗಿದೆ, ಹಾಗಿದೆ ಎಂದು ಹೇಳುವ ಬದಲು ಸಿನಿಮಾನೇ ತೋರಿಸಬಹುದಲ್ಲ’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
‘ಪ್ರೀಮಿಯರ್ ಶೋಗೆ ಜನರು ಒಳ್ಳೆಯ ರೆಸ್ಪಾನ್ಸ್ ಕೊಟ್ಟಿದ್ದಾರೆ. ಇದರಿಂದ ಮೊದಲ ದಿನ ಚಿತ್ರಕ್ಕೆ ಯಾವ ರೀತಿಯಲ್ಲಿ ರೆಸ್ಪಾನ್ಸ್ ಬರುತ್ತದೆ ಎಂಬ ಕುತೂಹಲ ಇದೆ. ಒಂದೊಮ್ಮೆ ಈ ತಂತ್ರ ವರ್ಕ್ ಆಯಿತು ಎಂದರೆ ಇಂಡಸ್ಟ್ರಿಯಲ್ಲಿ ಅದು ದೊಡ್ಡ ಬದಲಾವಣೆ ತಂದಂತೆ ಆಗುತ್ತದೆ. ಸಿನಿಮಾ ಮಾಡಿದವರಿಗೆ ತುಂಬಾನೇ ಭಯ ಇದೆ. ಅದು ಹೋಗಬೇಕು’ ಎಂದಿದ್ದಾರೆ ರಾಜ್ ಬಿ ಶೆಟ್ಟಿ.
‘ಜನರಿಗೆ ಸಿನಿಮಾ ತೋರಿಸಿದರೆ ಸಿನಿಮಾ ಕೆಟ್ಟದಾಗಿದೆ ಅಥವಾ ಸಿನಿಮಾ ಚೆನ್ನಾಗಿದೆ ಎಂಬ ಎರಡೇ ಉತ್ತರ ಬರಲು ಸಾಧ್ಯ. ಸಿನಿಮಾನ ಜನರಿಗೆ ತೋರಿಸಿ ಅವರೇ ಉತ್ತರ ಕೊಡಬೇಕು. ಅವರು ಚೆನ್ನಾಗಿದೆ ಎಂದರೆ ಅದೇ ಪ್ರಮೋಷನ್. ಅದು ರಿಸ್ಕ್ ಎಂದು ಬೇರೆಯವರಿಗೆ ಅನಿಸಬಹುದು. ನನಗೆ ಹಾಗೆ ಅನಿಸಲ್ಲ’ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
ಇದನ್ನೂ ಓದಿ: ‘ಸು ಫ್ರಮ್ ಸೋ’ ಪ್ರೀಮಿಯರ್ ಶೋ ನೋಡಿ ಹೊಗಳಿದ ಪ್ರೇಕ್ಷಕರು; ಚಿತ್ರದಲ್ಲಿ ಅಂಥದ್ದೇನಿದೆ?
‘ಪ್ರೇಕ್ಷಕರು ಎಲ್ಲೆಲ್ಲಿ ನಗಬಹುದು ಎಂದು ನಾವು ಊಹಿಸಿರುತ್ತೇವೆ. ಅದನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲೂ ನಕ್ಕರೆ ಸಿನಿಮಾ ಗೆದ್ದಿದೆ ಎಂದರ್ಥ. ಮಂಗಳೂರಲ್ಲಿ ಪ್ರೀಮಿಯರ್ ಶೋ ಮಾಡಿದೆವು. ಅದಕ್ಕೆ ಉತ್ತಮ ರೆಸ್ಪಾನ್ಸ್ ಬಂದಿದೆ’ ಎನ್ನುತ್ತಾರೆ ರಾಜ್ ಬಿ ಶೆಟ್ಟಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:54 pm, Wed, 23 July 25