AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ಜನ ದನಿ ಎದುರಿಸಲು ತಯಾರಾಗಿ: ಪ್ರಕಾಶ್ ರಾಜ್

ಬಿಜೆಪಿಗೆ ಬೆಂಬಲ ಘೋಷಿಸಿರುವ ಸುದೀಪ್ ಕುರಿತಾಗಿ ನಟ ಪ್ರಕಾಶ್ ರಾಜ್ ಟ್ವೀಟ್​ಗಳನ್ನು ಮಾಡಿದ್ದು, ನೀವು ಪಕ್ಷದ ಬಣ್ಣ ಬಳಿದುಕೊಂಡಿರಿ, ಜನರಿಗೆ ಉತ್ತರ ನೀಡಲು ಸಿದ್ಧರಾಗಿ ಎಂದಿದ್ದಾರೆ.

ಸುದೀಪ್, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ, ಜನ ದನಿ ಎದುರಿಸಲು ತಯಾರಾಗಿ: ಪ್ರಕಾಶ್ ರಾಜ್
ಸುದೀಪ್-ಪ್ರಕಾಶ್ ರಾಜ್
ಮಂಜುನಾಥ ಸಿ.
|

Updated on: Apr 06, 2023 | 9:11 PM

Share

ನಟ ಸುದೀಪ್ (Sudeep), ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಬೆಂಬಲ ಸೂಚಿಸಿ, ಸಿಎಂ ಸೂಚಿಸಿದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿರುವುದು ರಾಜ್ಯದ ಪ್ರಮುಖ ರಾಜಕೀಯ ಬೆಳವಣಿಗೆಯಾಗಿ ಚರ್ಚೆಯಲ್ಲಿದೆ. ಸುದೀಪ್ ಅವರು ಹೀಗೆ ಪರೋಕ್ಷವಾಗಿ ಬಿಜೆಪಿಗೆ ಬೆಂಬಲ ಘೋಷಿಸಿರುವುದನ್ನು ಬಿಜೆಪಿ ಬೆಂಬಲಿಗರು ಸ್ವಾಗತಿಸಿದ್ದರೆ, ಹಲವರು ಟೀಕಿಸಿದ್ದಾರೆ. ನಟ ಪ್ರಕಾಶ್ ರಾಜ್ (Prakash Raj) ಸಹ ಸುದೀಪ್ ಅವರ ಈ ಪರೋಕ್ಷ ಬೆಂಬಲಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಸುದೀಪ್ ಅವರ ಹೆಸರುಲ್ಲೇಖಿಸಿ ಇಂದು (ಏಪ್ರಿಲ್ 6) ಟ್ವೀಟ್ ಮಾಡಿದ್ದಾರೆ.

”ಸುದೀಪ್.. ಒಬ್ಬ ಮೇರು ಕಲಾವಿದನಾಗಿ ಸಮಾಜದ ಎಲ್ಲ ವರ್ಗದ ಪ್ರೀತಿಯಿಂದ ಬೆಳೆದ ನೀವು ,ಜನ ಸಾಮಾನ್ಯನ ದನಿಯಾಗುವಿರಿ ಎಂದು ಆಶಿಸಿದ್ದೆ.ಆದರೆ ತಾವು ಒಂದು ರಾಜಕೀಯ ಪಕ್ಷದ ಬಣ್ಣ ಬಳಿದುಕೊಳ್ಳುತ್ತೀರಿ ಎಂದು ನಿರೀಕ್ಷಿಸಿರಲ್ಲ ..ಇನ್ನು ಮುಂದೆ ನಿಮ್ಮನ್ನೂ .. ನಿಮ್ ಪಕ್ಷವನ್ನು ಪ್ರಶ್ನಿಸುವ ಜನ ದನಿಗೆ ತಯಾರಾಗಿರಿ” ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ.

”ನೋಡ್ರಪ್ಪ, ನಿಮ್ ಮಾಮನೊ, ನಿಮ್ ಅತ್ತೇನೊ, ನಿಮ್ ಕಷ್ಟಕಾಲದಲ್ಲಿ ಸಹಾಯ ಮಾಡಿದ್ರೆ, ನೀವು ದುಡಿದಿದ್ರಲ್ಲಿ 10%, 20% ಇಲ್ಲ 30 % ಕೊಡಿ ಅದು ನಿಮ್ಮಿಷ್ಟ, ಆದ್ರೆ, ಪ್ರಜೆಗಳ 30% ಕೊಳ್ಳೆ ಹೊಡೆಯೊಕ್ ಬಿಡ್ಬೀಡಿ, ಅಷ್ಟೆ.. ಅಷ್ಟೇ..” ಎಂದು ಮತ್ತೊಂದು ಟ್ವೀಟ್​ನಲ್ಲಿ ವ್ಯಂಗ್ಯ ಮಾಡಿದ್ದಾರೆ ಪ್ರಕಾಶ್ ರಾಜ್. ಅದಲ್ಲದೆ, ಸುದೀಪ್, ಬಿಜೆಪಿಗೆ ಬೆಂಬಲ ಘೋಷಿಸಿರುವ ಬಗ್ಗೆ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ರಚಿಸಿರುವ ಕಾರ್ಟೂನ್ ಅನ್ನು ಹಂಚಿಕೊಂಡು, ‘ನೀವು ಈಗ ಹೊರಲೇಬೇಕಾದ ಬೇರೆ ಬಣ್ಣದ ಲೊಕದ ಭಾರ’ ಎಂದಿದ್ದಾರೆ.

ನಟ ಸುದೀಪ್ ಸಿಎಂ ಬೊಮ್ಮಾಯಿ ಅವರೊಟ್ಟಿಗೆ ಜಂಟಿ ಪತ್ರಿಕಾಗೋಷ್ಠಿ ಮಾಡುವ ಮುನ್ನ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿತ್ತು, ಆಗ ಆ ಬಗ್ಗೆ ಟ್ವೀಟ್ ಮಾಡಿದ್ದ ನಟ ಪ್ರಕಾಶ್ ರಾಜ್, ”ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಭೀತಿಯಲ್ಲಿರುವ ಬಿಜೆಪಿ ಈ ಸುಳ್ಳು ಸುದ್ದಿಯನ್ನು ಹರಡಿಸುತ್ತಿದೆ. ಸುದೀಪ್, ಬಹಳ ಸೂಕ್ಷ್ಮ ವ್ಯಕ್ತಿ ಅವರು ಇಂಥಹದ್ದಕ್ಕೆಲ್ಲ ಬಲಿಯಾಗುವುದಿಲ್ಲ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ” ಎಂದು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಸುದೀಪ್​, ಸುಮಲತಾ ಬಿಜೆಪಿ ಪರ ವಹಿಸಿದ ಬಳಿಕ ಯಶ್​ ನಿಲುವೇನು? ಜನರಲ್ಲಿ ಮೂಡಿದೆ ಪ್ರಶ್ನೆ

ಸುದೀಪ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ ಸುದ್ದಿಗೋಷ್ಠಿಯಲ್ಲಿ ಪ್ರಕಾಶ್ ರಾಜ್ ಅವರ ಟ್ವೀಟ್​ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಸುದೀಪ್, ಪ್ರಕಾಶ್ ರಾಜ್ ಒಬ್ಬ ಅದ್ಭುತ ನಟ. ಅವರೊಟ್ಟಿಗೆ ರನ್ನ ಸಿನಿಮಾದಲ್ಲಿ ನಟಿಸಿದ್ದೇನೆ. ಮತ್ತೊಮ್ಮೆ ಅವರೊಟ್ಟಿಗೆ ನಟಿಸಲು ಉತ್ಸುಕನಾಗಿದ್ದೇನೆ ಎಂದಷ್ಟೆ ಹೇಳಿ, ವಿಷಯಾಂತರ ಮಾಡಿ, ಪ್ರಕಾಶ್ ರಾಜ್​ರ ಪ್ರಶ್ನೆಯನ್ನು ಅಲಕ್ಷಿಸಿದ್ದರು.

ಆದರೆ ಈಗ ಸುದೀಪ್ ಬಿಜೆಪಿಗೆ ಬೆಂಬಲ ಘೋಷಿಸಿದ್ದಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ನನ್ನ ಕಷ್ಟ ಕಾಲದಲ್ಲಿ ನನಗೆ ಸಹಾಯ ಮಾಡಿದ್ದಾರೆ. ಅವರ ಬೆನ್ನಿಗೆ ನಿಲ್ಲಬೇಕಾದುದು ನನ್ನ ಜವಾಬ್ದಾರಿ ಹಾಗಾಗಿ ಅವರ ಪರವಾಗಿ ಹಾಗೂ ಅವರು ಸೂಚಿಸಿದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಪ್ರಚಾರ ಮಾಡಲಿದ್ದೇನೆ ಎಂದಿದ್ದಾರೆ. ಸುದೀಪ್​ರ ಈ ನಿರ್ಣಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ, ಬಹುಸಂಖ್ಯೆಯ ಮಂದಿ ಕಿಚ್ಚನ ಈ ನಿರ್ಣಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ