ಬಿಡುಗಡೆ ಆಯ್ತು ‘ಬಿಲ್ಲ ರಂಗ ಭಾಷಾ’ ಪೋಸ್ಟರ್, ಖಡಕ್ ಅವತಾರದಲ್ಲಿ ಕಿಚ್ಚ
Kichcha Sudeep: ಸುದೀಪ್ ನಟನೆಯ ‘ಬಿಲ್ಲ ರಂಗ ಭಾಷಾ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆಯನ್ನು ಸುದೀಪ್ ನಿನ್ನೆಯೇ ಘೋಷಣೆ ಮಾಡಿದ್ದರು. ಇಂದು ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ.

ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅವರ ನಟನೆಯ ‘ಬಿಲ್ಲ ರಂಗ ಭಾಷಾ: ದಿ ಫಸ್ಟ್ ಬ್ಲಡ್’ ಸಿನಿಮಾದ ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ‘ಬಿಲ್ಲ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಅದಾದ ಬಳಿಕ ಸಿನಿಮಾದ ಶೂಟಿಂಗ್ ಬಗ್ಗೆ ಯಾವುದೇ ಅಪ್ಡೇಟ್ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಅನೂಪ್ ಭಂಡಾರಿ ಅವರು ಸಿನಿಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ಗಮನ ಸೆಳೆಯುತ್ತಿದೆ.
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಸುದೀಪ್ ಅವರು ವಾರಿಯರ್ ರೀತಿ ಕಾಣುತ್ತಿದ್ದಾರೆ. ಕೈಯಲ್ಲಿ ರಾಕೆಟ್ ಲಾಂಚರ್ ಹಿಡಿದಿದ್ದಾರೆ. ಬೆನ್ನಿಗೆ ಕತ್ತಿ ಸಿಕ್ಕಿಸಿಕೊಂಡಿದ್ದಾರೆ. ಹಣೆಗೆ ಧರಿಸಿರುವ ಕನ್ನಡಕ ಈ ಸಿನಿಮಾ 40-50ರ ದಶಕದ ಕತೆ ಇರಬಹುದೆಂಬ ಅನುಮಾನ ಮೂಡಿಸುತ್ತಿದೆ. ಸುದೀಪ್ ಅವರ ಜೊತೆಗೆ ಪೋಸ್ಟರ್ನಲ್ಲಿರುವ ಬಾವುಟವೊಂದು ಸಹ ಗಮನ ಸೆಳೆಯುತ್ತಿದೆ.
“Every empire fears the one who refuses to kneel” #BRBFirstBlood first look poster! Happy birthday @KicchaSudeep sir! May this year roar as loud as your legacy #BillaRangaBaasha #BRBFirstBlood @Niran_Reddy @chaitanyaniran @brbmovie @Primeshowtweets #HBDKicchaSudeep pic.twitter.com/LsNp4ejuF4
— Anup Bhandari (@anupsbhandari) September 2, 2025
ಪೋಸ್ಟರ್ ನಲ್ಲಿ ‘ಕ್ರಾಂತಿಕಾರನ ಕೊಲ್ಲಬಹುದು ಕ್ರಾಂತಿಯನಲ್ಲ’ ಎಂಬ ಸಾಲು ಬರೆಯಲಾಗಿದೆ. ಪೋಸ್ಟರ್ನಲ್ಲಿ ಹಳೆಯ ಕಾಲದ ಯುದ್ಧ ವಿಮಾನವೊಂದರ ಚಿತ್ರವಿದೆ. ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯ ಚಿತ್ರವೂ ಪೋಸ್ಟರ್ನಲ್ಲಿದೆ. ಪೋಸ್ಟರ್ನಲ್ಲಿರುವ ಚಿತ್ರಗಳು, ಅದರ ಮೇಲಿರುವ ಸಾಲುಗಳು, ಸುದೀಪ್ ಅವರ ವೇಷ ನೋಡಿದರೆ ಇದು ಸರ್ಕಾರದ ಅಥವಾ ಯಾವುದೋ ದೊಡ್ಡ ವ್ಯವಸ್ಥೆಯ ವಿರುದ್ಧ ಹೋರಾಡುವ ಕ್ರಾಂತಿಕಾರಿಯೊಬ್ಬನ ಕತೆ ಇರಬಹುದೆಂಬ ಅನುಮಾನ ಮೂಡುತ್ತದೆ.
ಇದನ್ನೂ ಓದಿ:ಸುದೀಪ್ ಬರ್ತ್ಡೇಗಿಲ್ಲ ‘ಬಿಲ್ಲ ರಂಗ ಭಾಷಾ’ ಅಪ್ಡೇಟ್; ಕಾರಣ ತಿಳಿಸಿದ ಅನೂಪ್ ಭಂಡಾರಿ
‘ಅನೂಪ್ ಭಂಡಾರಿ’ ಜೊತೆಗೆ ಸುದೀಪ್ ಅವರಿಗೆ ಇದು ಎರಡನೇ ಸಿನಿಮಾ. ಈ ಮೊದಲು ‘ವಿಕ್ರಾಂತ್ ರೋಣ’ ಸಿನಿಮಾಕ್ಕಾಗಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ‘ಬಿಲ್ಲ ರಂಗ ಭಾಷಾ’ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಬಹುತೇಕ ಭಾಗ, ಸೆಟ್ಗಳಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಅನೂಪ್ ಭಂಡಾರಿ, ‘ತಲೆಬಾಗಿಸಲು ಒಪ್ಪದ ಆ ಒಬ್ಬನ ಕಂಡರೆ ಸಾಮ್ರಾಜ್ಯಗಳಿಗೆ ಭಯ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:28 am, Tue, 2 September 25




